ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಕಳನಾಡಿನಲ್ಲಿ ತಾಯಿಯೊಂದಿಗೆ ಕುಪಿತಳಾಗಿ, ಮನೆಬಿಟ್ಟು ತೆರಳಿ ಆತ್ಮಹತ್ಯೆಗೆ ಯತ್ನಿಸಿದ ಇಬ್ಬರು ಎಳೆಯ ಮಕ್ಕಳ ತಾಯಿ, 27ರ ಹರೆಯದ ಗೃಹಿಣಿಯನ್ನು ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ.
ಗೃಹಿಣಿ ತನ್ನ ತಾಯಿಯೊಂದಿಗೆ ಸಿಟ್ಟುಗೊಂಡು ಮನೆಯಿಂದ ತೆರಳಿದ್ದಳು. ಈ ಸಂದರ್ಭ ತಾಯಿ ಮೇಲ್ಪರಂಬ ಠಾಣೆ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ಗೃಹಿಣಿಯ ಮೊಬೈಲ್ ನಂಬರ್‍ಗೆ ಪೊಲೀಸರು ಸಂಪರ್ಕಿಸುತ್ತಿದ್ದಂತೆ ಆಚೆಯಿಂದ ಅಳುವ ಶಬ್ದ ಕೇಳಿಸಿದ್ದು, ತಕ್ಷಣ ಸಂಪರ್ಕ ವಿಚ್ಛೇದಿಸಿದ್ದಳು. ಇದರಿಂದ ಗೃಹಿಣಿ ಇರುವ ಪ್ರದೇಶದ ಲೊಕೇಶನ್ ಗುರುತಿಸಿ , ಚಾತಂಗೈ ಭಾಗದಲ್ಲಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು,ಅತ್ತ ತೆರಳಿ ಹುಡುಕಾಡುವ ಮಧ್ಯೆ ರೈಲ್ವೆ ಟ್ರ್ಯಾಕ್ ಸನಿಹ ಕುರುಚಲು ಪೊದೆಯ ಸಂದಿಯಲ್ಲಿ ಗೃಹಿಣಿ ಅವಿತು ಕುಳಿತಿರುವುದು ಪತ್ತೆಯಾಗಿತ್ತು. ಇನ್ಸ್‍ಪೆಕ್ಟರ್ ಎಸ್.ಪಿ ರಾಘವನ್ ನಿರ್ದೇಶ ಪ್ರಕಾರ ಎಸ್.ಐ ಪಿ.ಕೆ ಅನೀಶ್ ಅವರನ್ನೊಳಗೊಂಡ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ, ಗೃಹಿಣಿಯ ಮನಪರಿವರ್ತನೆಗೊಳಿಸಿ ಮನೆಗೆ ಕರೆದೊಯ್ದಿದ್ದಾರೆ. ಗೃಹಿಣಿ ರೈಲಿಗೆ ತಲೆಯಿರಿಸಿ ಆತ್ಮಹತ್ಯೆಗೆ ಸಂಚುಹೂಡಿರಬೇಕೆಂದು ಸಂಶಯಿಸಲಾಗಿದೆ.

