ಕೋಲ್ಕತ್ತ: ಫುಟ್‌ಬಾಲ್ ದಿಗ್ಗಜ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರ ಮೂರು ದಿನಗಳ ಭಾರತ ಪ್ರವಾಸ ಇಂದಿನಿಂದ (ಶನಿವಾರ) ಆರಂಭಗೊಂಡಿದೆ. ಆದರೆ, ಕಾರ್ಯಕ್ರಮ ಆಯೋಜನೆಯಾಗಿದ್ದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಅವ್ಯವಸ್ಥೆ ಬಗ್ಗೆ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಬೇಸರ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೆಸ್ಸಿ ಭಾಗವಹಿಸಿದ್ದ ಕಾರ್ಯಕ್ರಮದ ಆಯೋಜಕರನ್ನು ದುರುಪಯೋಗದ ಆರೋಪದ ಮೇಲೆ ಬಂಧಿಸುವಂತೆ ಹಾಗೂ ಕೊಲೆ ಯತ್ನದ ಪ್ರಕರಣ ದಾಖಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದೇನೆ' ಎಂದು ಹೇಳಿದ್ದಾರೆ.
'ಕ್ರೀಡಾಂಗಣದಲ್ಲಿ ಅವ್ಯವಸ್ಥೆ ಉಂಟಾಗಿದ್ದಕ್ಕೆ ಆಯೋಜಕರನ್ನು ನೇರವಾಗಿ ದೂಷಿಸಬೇಕಾದರೂ ಪೊಲೀಸರು, ಜನರು, ಸರ್ಕಾರ, ಮತ್ತು ಗೃಹ ಸಚಿವೆಯೂ ಆಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಾತ್ರವು ಪ್ರಮುಖವಾದದ್ದು' ಎಂದು ಆನಂದ ಬೋಸ್ ತಿಳಿಸಿದ್ದಾರೆ.
ಆಯೋಜಕರು, ಸರ್ಕಾರ ಮತ್ತು ಅಧಿಕಾರಿಗಳಿಂದ ಆದ ಎಡವಟ್ಟಿನಿಂದಾಗಿ ಈ ದಿನವನ್ನು ಕೋಲ್ಕತ್ತದ ಕ್ರೀಡಾಭಿಮಾನಿಗಳಿಗೆ ಕರಾಳ ದಿನ ಎಂದು ಹೇಳಬಹುದು ಎಂದು ಬೋಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಮೆಸ್ಸಿಯನ್ನು ಭೇಟಿಯಾಗಲು ನಿರ್ಧರಿಸಿದ್ದ ಸಿಎಂ ಮಮತಾ ಬ್ಯಾನರ್ಜಿ ಅವರು ಮಾರ್ಗ ಮಧ್ಯದಲ್ಲೇ ಹಿಂತಿರುಗಬೇಕಾಯಿತು ಎಂದು ಕೇಳಿ ರಾಜ್ಯಪಾಲರು ಆಘಾತಕ್ಕೊಳಗಾದರು ಎಂದು ಲೋಕಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಘಟನೆ ಸಂಬಂಧ ತಕ್ಷಣ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಬೇಕು. ಹಾಗೆಯೇ ಕಾರ್ಯಕ್ರಮಕ್ಕಾಗಿ ಟಿಕೆಟ್ ಖರೀದಿಸಿದವರು ಹಣವನ್ನು ಮರುಪಾವತಿಸಬೇಕು. ಕ್ರೀಡಾಂಗಣ ಮತ್ತು ಇತರ ಸಾರ್ವಜನಿಕ ಸ್ಥಳಗಳಿಗೆ ಹಾನಿ ಮಾಡಿದ್ದಕ್ಕಾಗಿ ಆಯೋಜಕರಿಗೆ ದಂಡ ವಿಧಿಸಬೇಕು ಮತ್ತು ಮುನ್ನೆಚ್ಚರಿಕೆ ವಹಿಸದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು' ಎಂದು ರಾಜ್ಯಪಾಲರು ತಾಕೀತು ಮಾಡಿದ್ದಾರೆ.
ಮೈದಾನದಿಂದ ಮೆಸ್ಸಿ ನಿರ್ಗಮಿಸಿದ ಬಳಿಕ, ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದರು. ಕುರ್ಚಿ, ಬಾಟಲಿಗಳನ್ನು ಮೈದಾನಕ್ಕೆ ತೂರಿದ್ದರು.
ಮೆಸ್ಸಿ ಭಾಗಿಯಾಗಿದ್ದ ಕಾರ್ಯಕ್ರಮ ಅವ್ಯವಸ್ಥೆಯಿಂದ ಕೂಡಿತ್ತು. ರಾಜಕಾರಣಿಗಳೇ ಅವರನ್ನು ಸುತ್ತುವರಿದಿದ್ದರು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

