ನವದೆಹಲಿ: ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗವು ರಾಜ್ಯ ಸರ್ಕಾರದ ಯೋಜನೆಯಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ರಾಜ್ಯ ಸರ್ಕಾರವು ತನ್ನ ಸ್ವಂತ ಹಣವನ್ನು ಬಳಸಿಕೊಂಡು ರಾಜ್ಯ ರಸ್ತೆಯ ಮೇಲೆ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಸುರಂಗ ಮಾರ್ಗಕ್ಕೆ ಹಣಕಾಸು ಸಹಾಯಕ್ಕಾಗಿ ಕೇಂದ್ರವು ಕೇರಳ ಸರ್ಕಾರದಿಂದ ಯಾವುದೇ ಪ್ರಸ್ತಾವನೆಗಳನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಸಚಿವರು ಲೋಕಸಭೆಗೆ ಮಾಹಿತಿ ನೀಡಿದರು. ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗವನ್ನು ಭಾರತ್ ಮಾಲಾ ಯೋಜನೆಯಲ್ಲಿ ಸೇರಿಸಲಾಗಿದೆಯೇ ಅಥವಾ ಇತರ ಕೇಂದ್ರ ಯೋಜನೆಗಳಲ್ಲಿ ಸೇರಿಸಲಾಗಿದೆಯೇ ಎಂಬ ಬಗ್ಗೆ ಸಂಸದ ಕೆ. ರಾಧಾಕೃಷ್ಣನ್ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವರು ಉತ್ತರಿಸುತ್ತಿದ್ದರು.
ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವು ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಗಡ್ಕರಿ ಸದನಕ್ಕೆ ತಿಳಿಸಿದರು.
ರಸ್ತೆಯ ಎರಡೂ ಬದಿಗಳಲ್ಲಿ ಪಟ್ಟಣಗಳು ಅಭಿವೃದ್ಧಿಗೊಂಡಿವೆ. ಇದರಿಂದಾಗಿ, ಕೇರಳದಲ್ಲಿ ಭೂಸ್ವಾಧೀನವು ತುಂಬಾ ಕಷ್ಟಕರವಾಗಿದೆ. ಆದಾಗ್ಯೂ, ಸಂಸದರು ಹಲವಾರು ಬೇಡಿಕೆಗಳನ್ನು ಎತ್ತುತ್ತಿದ್ದಾರೆ. ಈ ಬೇಡಿಕೆಗಳನ್ನು ಪೂರೈಸಲು ಸಾಧ್ಯವಿಲ್ಲ. ರಾಷ್ಟ್ರೀಯ ಹೆದ್ದಾರಿಗಾಗಿ ಭೂಸ್ವಾಧೀನದ ವೆಚ್ಚವನ್ನು ಪ್ರತಿ ಕಿಲೋಮೀಟರ್‍ಗೆ 50 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ತಾಮರಸ್ಸೇರಿ ಪಾಸ್‍ನಲ್ಲಿ ಹೆಚ್ಚಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಕಡಿಮೆ ಇಳಿಜಾರಿನೊಂದಿಗೆ ರಸ್ತೆ ನಿರ್ಮಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಂದಿರುವ ದೂರುಗಳ ತನಿಖೆಗಾಗಿ ನೇಮಿಸಲಾದ ವಿಶೇಷ ಸಮಿತಿಯ ವರದಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದರು.




