HEALTH TIPS

ಆಂಬುಲೆನ್ಸ್‌ ಸಂಚಾರಕ್ಕೆ ಮೀಸಲು ಮಾರ್ಗ ನಿರ್ಮಾಣಕ್ಕೆ ಸಂಸದೆ ಜಯಾ ಬಚ್ಚನ್ ಆಗ್ರಹ

ನವದೆಹಲಿ: ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಒತ್ತಾಯಿಸಿದ್ದಾರೆ.

ಭಾರತದಲ್ಲಿ ದಿನಸಿ ಪದಾರ್ಥಗಳು 15 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪುತ್ತವೆ. ಪಿಟ್ಜಾ 30 ನಿಮಿಷಗಳಲ್ಲಿ ತಲುಪುತ್ತದೆ. ಆದರೆ, ರೋಗಿಗಳು ಆಸ್ಪತ್ರೆಗೆ ತಲುಪಲು ಆಗುತ್ತಿರುವ ವಿಳಂಬದಿಂದ ಸಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಆಸ್ಪತ್ರೆಗೆ ತಲುಪುವುದರಲ್ಲಿ ಆಗುತ್ತಿರುವ ವಿಳಂಬದಿಂದ ರೋಗಿಗಳು ಮೃತಪಡುತ್ತಿರುವ ಬಗ್ಗೆ ಸಂಸತ್ತಿನ ಆರೋಗ್ಯ ಸ್ಥಾಯಿ ಸಮಿತಿಯು ಗಮನಹರಿಸಬೇಕು ಎಂದಿದ್ದಾರೆ.

'ಕ್ಷಿಪ್ರ ವಾಣಿಜ್ಯ ವೇದಿಕೆಗಳ ಮೂಲಕ ದಿನಸಿ ಸಾಮಗ್ರಿಗಳು 15 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ, 30 ನಿಮಿಷಗಳಲ್ಲಿ ಪಿಟ್ಜಾ ಮನೆ ಬಾಗಿಲಿಗೆ ತಲುಪುವ ದೇಶದಲ್ಲಿ, ಆಂಬುಲೆನ್ಸ್‌ಗಳು ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವುದರಿಂದ ರೋಗಿಗಳು ಸಾಯುತ್ತಿದ್ದಾರೆ. 2018ರ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಹೊರತಾಗಿಯೂ ನಮ್ಮಲ್ಲಿ ಆಂಬುಲೆನ್ಸ್‌ಗಳಿಗಾಗಿ ವಿಶೇಷ ತುರ್ತು ಮಾರ್ಗಗಳಿಲ್ಲ. ಈ ದುರಂತಗಳನ್ನು ಯಾವುದೇ ರಾಷ್ಟ್ರೀಯ ದತ್ತಾಂಶಗಳು ಪತ್ತೆಹಚ್ಚುವುದಿಲ್ಲ'ಎಂದು ಜಯಾ ಹೇಳಿದ್ದಾರೆ.

'ಶೇ 60ರಷ್ಟು ಆಂಬುಲೆನ್ಸ್‌ಗಳು ತಡವಾಗಿ ಬರುತ್ತವೆ. ಹಸಿರು ಕಾರಿಡಾರ್‌ಗಳು ಮತ್ತು ಪೊಲೀಸ್ ಬೆಂಗಾವಲುಗಳ ಅನುಪಸ್ಥಿತಿಯಿಂದಾಗಿ ನಗರದಲ್ಲಿ ಆಂಬುಲೆನ್ಸ್‌ಗಳ ವಿಳಂಬ ಸರಾಸರಿ 15 ರಿಂದ 30 ನಿಮಿಷಗಳಷ್ಟಿದ್ದು, ಅಪಘಾತಕ್ಕೊಳಗಾದವರಲ್ಲಿ ಶೇ 55ರಷ್ಟು ಜನರು ಗೋಲ್ಡನ್ ಟೈಮ್ ಕಳೆದುಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಆಂಬುಲೆನ್ಸ್ ಕೋಡ್ 2016ರ ಹೊರತಾಗಿಯೂ ರಸ್ತೆಗಳಲ್ಲಿ ಆಂಬುಲೆನ್ಸ್‌ಗೆ ಮೀಸಲಾದ ಲೇನ್‌ಗಳಿಲ್ಲ. ಈ ನಿರ್ಣಾಯಕ ವೈಫಲ್ಯಗಳನ್ನು ಗಮನಿಸಬೇಕು. ತಕ್ಷಣವೇ ಈ ಕುರಿತಂತೆ ಕಾರ್ಯೋನ್ಮುಖರಾಗಬೇಕು'ಎಂದು ಅವರು ಹೇಳಿದ್ದಾರೆ.

'ರಾಷ್ಟ್ರವ್ಯಾಪಿ ಎಐ ಟ್ರಾಫಿಕ್ ಸಿಗ್ನಲ್‌ಗಳೊಂದಿಗೆ ಆಂಬುಲೆನ್ಸ್‌ಗೆ ಮೀಸಲಾದ ತುರ್ತು ಮಾರ್ಗಗಳನ್ನು ಪ್ರತಿಪಾದಿಸಿದ ಅವರು, ಆಂಬುಲೆನ್ಸ್‌ಗಳಿಗೆ ಆದ್ಯತೆ ನೀಡಬೇಕು, 30 ಸೆಕೆಂಡ್ ಹಸಿರು ಕಾರಿಡಾರ್‌, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಕ ಸುಪ್ರೀಂ ಕೋರ್ಟ್‌ನ 2018ರ ಆಂಬುಲೆನ್ಸ್ ಕಾರಿಡಾರ್ ನಿರ್ದೇಶನವನ್ನು ಜಾರಿಗೊಳಿಸುವುದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವುದು ಮತ್ತು ಆಂಬುಲೆನ್ಸ್ ವಿಳಂಬದಿಂದ ಆಗುವ ಸಾವುಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries