ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ವಿರಾಮಕ್ಕೆ ಮಧ್ಯವರ್ತಿಯಾಗಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಿರುವ ಬೆನ್ನಲ್ಲೇ ಇದೀಗ ಚೀನಾ ಸಹ ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತ-ಪಾಕಿಸ್ತಾನ ನಡುವೆ ಶಾಂತಿಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದೆ.
ಬೀಜಿಂಗ್‌ನಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಪರಿಸ್ಥಿತಿ ಮತ್ತು ಚೀನಾದ ವಿದೇಶಾಂಗ ಸಂಬಂಧಗಳ ಕುರಿತ ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಈ ವರ್ಷ ಚೀನಾ ಮಧ್ಯಸ್ಥಿಕೆಯಲ್ಲಿ ಪರಿಹಾರ ಕಂಡುಕೊಂಡ ಪ್ರಮುಖ ಸಮಸ್ಯೆಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಶಮನದ ವಿಷಯವನ್ನೂ ಸೇರಿಸಿದ್ದಾರೆ.
'2ನೇ ವಿಶ್ವಯುದ್ಧದ ನಂತರ ಈ ವರ್ಷದಲ್ಲಿ ಅತ್ಯಧಿಕ ಆಂತರಿಕ ಮತ್ತು ಗಡಿಯಾಚೆಗಿನ ಸಂಘರ್ಷಗಳು ನಡೆದಿವೆ. ಭೌಗೋಳಿಕ ರಾಜಕೀಯದಲ್ಲಿ ತಲ್ಲಣ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಶಾಂತಿ ಸ್ಥಾಪನೆಗೆ ಸಂಘರ್ಷದ ಲಕ್ಷಣ ಮತ್ತು ಮೂಲದ ಬಗ್ಗೆ ಗಮನ ಕೇಂದ್ರೀಕರಿಸಿದ್ದೆವು. ಇದರನ್ವಯ, ವಿಶ್ವದ ಹಾಟ್‌ಸ್ಪಾಟ್ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಆ ಪೈಕಿ, ಉತ್ತರದ ಮ್ಯಾನ್ಮಾರ್, ಇರಾನಿನ ಪರಮಾಣು ಸಮಸ್ಯೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಶಮನ, ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ಸಂಘರ್ಷ, ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಇತ್ತೀಚಿನ ಸಂಘರ್ಷ ಶಮನದಲ್ಲಿ ಪಾತ್ರ ವಹಿಸಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಮೇ 7-10ರ ಸಂಘರ್ಷವನ್ನು ಎರಡೂ ದೇಶಗಳ ಸೇನೆಗಳ ಡಿಜಿಎಂಒಗಳು (ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು) ನಡುವಿನ ನೇರ ಮಾತುಕತೆಯ ಮೂಲಕ ಪರಿಹರಿಸಲಾಗಿದೆ ಎಂದು ಭಾರತ ಹೇಳುತ್ತಲೇ ಬಂದಿದೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವ್ಯಾಪಾರದ ಅಂಶವನ್ನು ಮುಂದಿಟ್ಟುಕೊಂಡು ಭಾರತ ಮತ್ತು ಪಾಕಿಸ್ತಾನ ಯುದ್ಧ ವಿರಾಮವನ್ನು ಸಾಧಿಸಿದೆ ಎನ್ನುತ್ತಿದ್ಧಾರೆ.
ಮೇ 13ರಂದು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ವಿರಾಮದ ಕುರಿತಂತೆ ಸ್ಪಷ್ಟನೆ ನೀಡಿ ಹೇಳಿಕೆ ಬಿಡುಗಡೆ ಮಾಡಿದ್ದ ವಿದೇಶಾಂಗ ಸಚಿವಾಲಯವು, ಮೇ10ರಂದು ಮಧ್ಯಾಹ್ನ 3:35ಕ್ಕೆ ಆರಂಭವಾದ ಎರಡೂ ದೇಶಗಳ ಡಿಜಿಎಂಒಗಳ ನಡುವಿನ ದೂರವಾಣಿ ಕರೆಯ ಚರ್ಚೆಯ ಮೂಲಕ ಯುದ್ಧ ವಿರಾಮಕ್ಕೆ ಒಪ್ಪಿಗೆ ಸೂಚಿಸಲಾಯಿತು ಎಂದು ತಿಳಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಶಮನಗೊಳಿಸುವಲ್ಲಿ ಯಾವುದೇ ಮೂರನೇ ದೇಶದ ಪಾತ್ರವಿಲ್ಲ ಎಂದೂ ಭಾರತ ಸ್ಪಷ್ಟಪಡಿಸಿತ್ತು.
ಈ ವರ್ಷ ಮೇ 7-10ರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಸಂದರ್ಭ ಭಾರತ ನಡೆಸಿದ ಆಪರೇಷನ್ ಸಿಂಧೂರದ ವೇಳೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ನೀಡಿದ ಆರೋಪ ಎದುರಿಸುತ್ತಿರುವ ಚೀನಾ ಇದೀಗ, ಮಧ್ಯವರ್ತಿಯಾಗಿದ್ದಾಗಿ ಹೆಳುತ್ತಿರುವುದು ಭಾರಿ ಟೀಕೆಗೆ ಎಡೆ ಮಾಡಿದೆ.
ರಾಜತಾಂತ್ರಿಕವಾಗಿ, ಮೇ 7ರಂದು ಚೀನಾ, ಭಾರತ ಮತ್ತು ಪಾಕಿಸ್ತಾನಕ್ಕೆಸಂಯಮದಿಂದ ವರ್ತಿಸುವಂತೆ ಕರೆ ನೀಡಿತ್ತು.
ಇಂದು ಬೆಳಗಿನ ಜಾವ ನಡೆದ ಭಾರತದ ಸೇನಾ ಕಾರ್ಯಾಚರಣೆಯು ವಿಷಾದನೀಯ ಎಂದು ಆಪರೇಷನ್ ಸಿಂಧೂರದ ಮೊದಲ ದಿನದಂದು ಚೀನಾ ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿತ್ತು.
ಎಲ್ಲ ರೀತಿಯ ಭಯೋತ್ಪಾದನೆಯನ್ನು ಭಾರತ ವಿರೋಧಿಸುತ್ತದೆ ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ ಚೀನಾ ವಿದೇಶಾಂಗ ಸಚಿವಾಲಯವು ಹೇಳಿತ್ತು. ಶಾಂತಿಯ ಹಿತದೃಷ್ಟಿಯಿಂದ ಎರಡೂ ಕಡೆಯವರು ಸಂಯಮದಿಂದ ವರ್ತಿಸುವಂತೆ ಒತ್ತಾಯಿಸಿತ್ತು. ಆದರೆ, ಚೀನಾ ಪಾಕಿಸ್ತಾನಕ್ಕೆ ಸಕ್ರಿಯವಾಗಿ ಮಿಲಿಟರಿ ಬೆಂಬಲ ನೀಡಿತ್ತು.

