HEALTH TIPS

ತಪ್ಪು ಮಾಹಿತಿ ಪ್ರಸಾರದಿಂದ ಜನರ ಗ್ರಹಿಕೆ ಮೇಲೆ ಪರಿಣಾಮ: ಸುಪ್ರೀಂ ಕೋರ್ಟ್‌

ನವದೆಹಲಿ: 'ವಿಚಾರಣೆ ನಡೆಯುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿ, ಅರ್ಧಸತ್ಯ ಹಾಗೂ ತಪ್ಪುಮಾಹಿತಿಯ ನಿರಂತರ ಪ್ರಸಾರವು ಜನರ ಗ್ರಹಿಕೆ ಮೇಲೆ ಪರಿಣಾಮ ಬೀರುತ್ತದೆ' ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.

ಅಲ್ಲದೇ, 'ಪ್ರಚಾರ ಗಿಟ್ಟಿಸಲು ಮತ್ತು ಸಂಕಥನ ಸೃಷ್ಟಿಸುವ ಉದ್ದೇಶದಿಂದ ಬಾಕಿ ಪ್ರಕರಣಗಳ ಕುರಿತು ವರದಿಗಳನ್ನು ಪ್ರಕಟಿಸಿದರೂ ಅದು ಈ ನ್ಯಾಯಾಲಯದ ಕಾರ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದೂ ಹೇಳಿದೆ.

ಕೆಲವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವ ವೇಳೆ ಅಗತ್ಯ ಪ್ರಕ್ರಿಯೆಗಳ ಪಾಲನೆ ಮಾಡಲಾಗಿಲ್ಲ ಎಂಬ ಆರೋಪಗಳಿದ್ದು, ಅವರನ್ನು ಮರಳಿ ಕರೆಸಿಕೊಳ್ಳಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಎಂ.ಪಾಂಚೋಲಿ ಅವರು ಇದ್ದ ನ್ಯಾಯಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.

ಈ ಪ್ರಕರಣದಲ್ಲಿ ಕಲ್ಕತ್ತ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ಕುರಿತ ವಿಚಾರಣೆಯನ್ನು ಜನವರಿ 6ರಂದು ನಡೆಸುವುದಾಗಿ ಪೀಠವು ಹೇಳಿತು.

ಪ್ರಕರಣವೇನು?

ಅಕ್ರಮ ವಲಸಿಗರು ಎಂಬ ಕಾರಣಕ್ಕಾಗಿ ಗರ್ಭಿಣಿ ಸುನಾಲಿ ಖಾತೂನ್‌ ಹಾಗೂ ಆಕೆಯ 8 ವರ್ಷದ ಮಗನನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಆಕೆಯ ತಂದೆ, ಕಲ್ಕತ್ತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುನಾಲಿ ಕುಟುಂಬ ದೆಹಲಿಯ ರೋಹಿಣಿ ಪ್ರದೇಶದಲ್ಲಿ ವಾಸವಿತ್ತು.

ಮಾನವೀಯ ಆಧಾರದಲ್ಲಿ ಈ ಇಬ್ಬರನ್ನು ಮತ್ತೆ ಭಾರತಕ್ಕೆ ಕರೆತರಲು ಕಲ್ಕತ್ತ ಹೈಕೋರ್ಟ್‌ ಅದೇಶಿಸಿತ್ತು. ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ, ಕೇಂದ್ರ ಸರ್ಕಾರ ಸು‍ಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಸದ್ಯ, ಆಕೆ ಹಾಗೂ ಪುತ್ರ ಪಶ್ಚಿಮ ಬಂಗಾಳದ ಬಿರ್ಭೂಮ್‌ನಲ್ಲಿರುವ ತಂದೆಯ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿಯೇ, ಆಕೆಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಲಾಯಿತು.

ವಿಚಾರಣೆ ವೇಳೆ, ಈ ಪ್ರಕರಣ ಕುರಿತು ಇಂಗ್ಲಿಷ್‌ ದೈನಿಕವೊಂದರಲ್ಲಿ ಪ್ರಕಟವಾದ ವರದಿಯನ್ನು ಒಪ್ಪಲಾಗದು ಎಂದು ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ, ನ್ಯಾಯಪೀಠಕ್ಕೆ ತಿಳಿಸಿದರು.

'ವಿಷಯವನ್ನು ಜನಪ್ರಿಯ ಹಾಗೂ ಸಂವೇದನಾಶೀಲಗೊಳಿಸುವ ಉದ್ದೇಶದಿಂದ ಈ ವರದಿ ಪ್ರಕಟಿಸಲಾಗಿದೆ. ನ್ಯಾಯಾಲಯ ನೀಡುವ ಆದೇಶದ ಮೇಲೆ ಪ್ರಭಾವ ಬೀರುವುದಕ್ಕಾಗಿ ನಿರ್ದಿಷ್ಟ ರೀತಿಯ ಸಂಕಥನ ಸೃಷ್ಟಿಸಲು ಪ್ರಯತ್ನಿಸಲಾಗಿದೆ' ಎಂದು ಮೆಹ್ತಾ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ,'ಪ್ರಚಾರ ಮತ್ತು ಸುಳ್ಳು ಪ್ರಚಾರಕ್ಕಾಗಿ ನಡೆಸುವ ಕಸರತ್ತುಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ವ್ಯಕ್ತಿಗಳ ಬದುಕಿನ ಮೇಲೆ ಈ ಸಂಕಥನಗಳು ಸಹ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದು ಹೇಳಿದರು.

'ಇಂತಹ ವಿಚಾರಗಳನ್ನು ನಿರ್ಲಕ್ಷಿಸಿ' ಎಂದು ಮೆಹ್ತಾ ಅವರಿಗೆ ಸಲಹೆ ನೀಡಿದ ಸಿಜೆಐ ಸೂರ್ಯ ಕಾಂತ್‌, 'ತಾತ್ವಿಕವಾಗಿ ನೋಡುವುದಾದರೆ, ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಕುರಿತು ತಪ್ಪು ಮಾಹಿತಿ ಬಿತ್ತರಿಸಬಾರದು' ಎಂದರು.

ಪಶ್ಚಿಮ ಬಂಗಾಳ ಸರ್ಕಾರ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌, ಅರ್ಜಿದಾರರೊಬ್ಬರ ಪರ ಸಂಜಯ್‌ ಹೆಗ್ಡೆ ಹಾಜರಿದ್ದರು.

- ಸೂರ್ಯ ಕಾಂತ್‌, ಸಿಜೆಐಇಂತಹ ಪ್ರಕರಣದ ವಿಚಾರಣೆಯನ್ನು ಕೋರ್ಟ್‌ ಕೈಗೆತ್ತಿಕೊಳ್ಳಲಿದೆ ಎಂದು ವರದಿ ಮಾಡುವುದು ಸರಿ. ಆದರೆ ಪ್ರಕರಣ ಕುರಿತು ನಿಮ್ಮ ಅಭಿಪ್ರಾಯ ಹೇಳಿದಾಗ ಸಮಸ್ಯೆ ಉದ್ಭವಿಸುತ್ತದೆ. ಇದು ಜನರ ಗ್ರಹಿಕೆ ಮೇಲೆ ಪರಿಣಾಮ ಬೀರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries