ಕಾಸರಗೋಡು: ನೌಕರರು ಮತ್ತು ಪಿಂಚಣಿದಾರರೊಂದಿಗೆ ಸಮಾಲೋಚಿಸದೆ 'ಮೆಡಿಸೆಪ್'ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಲು ಏಕಪಕ್ಷೀಯ ತೀರ್ಮಾನ ಕೈಗೊಂಡಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಪಿಂಚಣಿದಾರರ ಸಂಘದ ರಾಜ್ಯಾಧ್ಯಕ್ಷ ಬಿ.ಜಯಪ್ರಕಾಶ್ ತಿಳಿಸಿದ್ದಾರೆ.
ರಾಜ್ಯ ಪಿಂಚಣಿದಾರರ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಪಿಂಚಣಿ ವ್ಯವಸ್ಥೆಗೆ ಸರ್ಕಾರದ ಪಾಲು ಒದಗಿಸದೆ, ಸರ್ಕಾರ ಪಿಂಚಣಿದಾರರಿಗೆ ವಂಚನೆಯೆಸಗುತ್ತಿದೆ. ಜಿಎಸ್‍ಟಿ ಲೆಕ್ಕ ಹಾಕದೆ ಪ್ರೀಮಿಯಂ ವಿಧಿಸಲು ಕಾನೂನು ವ್ಯವಸ್ಥೆಯಿದ್ದರೂ, ವಿಮಾ ಉದ್ಯಮವು ಶೇ.18 ರಷ್ಟು ಜಿಎಸ್‍ಟಿ ಲೆಕ್ಕ ಹಾಕಿ ಪ್ರೀಮಿಯಂ ವಿಧಿಸುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸಂಘಟನೆ ಕಾಸರಗೋಡು ಜಿಲ್ಲಾಧ್ಯಕ್ಷ ಬಿ. ನಾಗರಾಜ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಸಂಘಟನೆಯ ಉಪೇಂದ್ರನ್, ಎನ್‍ಟಿಯು ಸಂಘಟನೆಯ ಕೃಷ್ಣನ್, ಸಂಘಟನೆಯ ಇತರ ಪ್ರಮುಖರಾದ ಎಂ. ಈಶ್ವರ ರಾವ್, ಕುಞÂರಾಮನ್, ಕೇಳೋತ್ ಬಲರಾಂಭಟ್ ಉಪಸ್ಥಿತರಿದ್ದರು.

