ವೈಎಸ್‌ಆರ್‌ಸಿಪಿ ಸಂಸದ ಎಸ್.ನಿರಂಜನ ರೆಡ್ಡಿಯವರು ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರವನ್ನು ನೀಡಿದ ನಾಗರಿಕ ವಾಯುಯಾನ ಸಚಿವ ಕೆ.ರಾಮಮೋಹನ ನಾಯ್ಡು ಅವರು ದಿಲ್ಲಿಯ ಇಂದಿರಾ ಗಾಂಧಿ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐಎ) ಸುತ್ತಮುತ್ತಲಿನ ಪ್ರದೇಶದಲ್ಲಿ ಜಿಪಿಎಸ್ ಸ್ಪೂಫಿಂಗ್ ವರದಿಯಾಗಿರುವುದನ್ನು ದೃಢಪಡಿಸಿದರು.
ಕೆಲವು ವಿಮಾನಗಳು ಐಜಿಐಎ ಸುತ್ತಮುತ್ತಲ ಪ್ರದೇಶಗಳಲ್ಲಿ ಜಿಪಿಎಸ್ ಆಧಾರಿತ ಲ್ಯಾಂಡಿಂಗ್ ಕಾರ್ಯವಿಧಾನಗಳನ್ನು ಬಳಸುತ್ತಿರುವಾಗ ಮತ್ತು ರನ್‌ವೇ 10ನ್ನು ಸಮೀಪಿಸುತ್ತಿರುವಾಗ ಜಿಪಿಎಸ್ ಸ್ಪೂಫಿಂಗ್ ವರದಿಯಾಗಿದೆ. ಈ ವಿಮಾನಗಳಲ್ಲಿ ತುರ್ತು ಪರಿಸ್ಥಿತಿ ಕಾರ್ಯವಿಧಾನಗಳನ್ನು ಅಳವಡಿಸಲಾಗಿದೆ. ಆದರೆ ಇತರ ರನ್‌ವೇಗಳಲ್ಲಿ ಸಾಂಪ್ರದಾಯಿಕ ಮಾರ್ಗದರ್ಶಕ ಸೌಲಭ್ಯಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ವಿಮಾನಗಳ ಚಲನೆಯ ಮೇಲೆ ಯಾವುದೇ ಪರಿಣಾಮವುಂಟಾಗಿಲ್ಲ ಎಂದು ನಾಯ್ಡು ತಿಳಿಸಿದರು.
ಸ್ಪೂಫಿಂಗ್ ಮೂಲವನ್ನು ಗುರುತಿಸುವಂತೆ ವೈರ್‌ಲೆಸ್ ಮಾನಿಟರಿಂಗ್ ಆರ್ಗನೈಜೇಷನ್‌ಗೆ ನಿರ್ದೇಶನವನ್ನು ನೀಡಲಾಗಿದೆ ಎಂದರು.
ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್(ಜಿಪಿಎಸ್)/ಗ್ಲೋಬಲ್ ನೇವಿಗೇಷನ್ ಸ್ಯಾಟಲೈಟ್ ಸಿಸ್ಟಮ್(ಜಿಎನ್‌ಎಸ್‌ಎಸ್) ಸ್ಪೂಫಿಂಗ್ ಮತ್ತು ಜಾಮಿಂಗ್ ಸುಳ್ಳು ಸಂಕೇತಗಳನ್ನು ನೀಡುವ ಮೂಲಕ ಬಳಕೆದಾರರ ನೇವಿಗೇಷನ್ ಸಿಸ್ಟಮ್‌ನಲ್ಲಿ ಹಸ್ತಕ್ಷೇಪದ ಪ್ರಯತ್ನಗಳನ್ನು ಸೂಚಿಸುತ್ತದೆ.
ಜಿಪಿಎಸ್ ಸ್ಪೂಫಿಂಗ್‌ನಲ್ಲಿ ವಿಮಾನಗಳಿಗೆ ಸುಳ್ಳು ಉಪಗ್ರಹ ಸಂಕೇತಗಳನ್ನು ಉದ್ದೇಶಪೂರ್ವಕವಾಗಿ ರವಾನಿಸಲಾಗುತ್ತದೆ ಮತ್ತು ಇವು ವಿಮಾನದ ದಿಕ್ಸೂಚಿ ವ್ಯವಸ್ಥೆಗಳನ್ನು ಹದಗೆಡಿಸುತ್ತವೆ. ಇದರಿಂದಾಗಿ ವಿಮಾನವು ನಿಗದಿತ ಪಥವನ್ನು ಬಿಟ್ಟು ಬೇರೆ ಕಡೆ ಸಾಗುವ ಸಾಧ್ಯತೆಯಿರುತ್ತದೆ.




