ಚೆನ್ನೈ: 'ಮಾನವಸಹಿತ 'ಗಗನಯಾನ' ಯೋಜನೆ ಭಾಗವಾಗಿರುವ ಮೂರು ರಾಕೆಟ್ ಪೈಕಿ ಒಂದನ್ನು ಈ ವರ್ಷಾಂತ್ಯದಲ್ಲಿ ಉಡಾವಣೆ ಮಾಡಲಾಗುವುದು' ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಗುರುವಾರ ಇಲ್ಲಿ ಹೇಳಿದ್ದಾರೆ.
ತಿರುನ್ವೇಲಿ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 'ಗಗನಯಾನ ಯೋಜನೆ 2027ರ ವೇಳೆಗೆ ನಿಗದಿಯಾಗಲಿದ್ದು, ಗಾಳಿಯ ಗುಣಮಟ್ಟ, ತಾಪಮಾನ ನಿಯಂತ್ರಣ, ತ್ಯಾಜ್ಯ ನಿರ್ವಹಣೆ ಹಾಗೂ ತುರ್ತು ಪ್ರತಿಕ್ರಿಯೆಗಳು ಸೇರಿದಂತೆ 8 ಸಾವಿರ ಪರೀಕ್ಷೆಗಳನ್ನು ನಡೆಸಲಾಗುವುದು' ಎಂದು ತಿಳಿಸಿದ್ದಾರೆ.
'2025 ಕೊನೆಯಲ್ಲಿ ಮಾನವರಹಿತ ರಾಕೆಟ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಮತ್ತೆರಡನ್ನು 2026ರಲ್ಲಿ ನಡೆಸಲು ನಿರ್ಧರಿಸಿದ್ದು, ಇದರಲ್ಲಿ ಗಗನಯಾತ್ರಿಗಳು ಇರುವ ಕೋಶ, ಮರುಪ್ರವೇಶ ವ್ಯವಸ್ಥೆಯೂ ಒಳಗೊಂಡಿರಲಿದೆ. ನಮ್ಮದೇ ರಾಕೆಟ್‌ನಲ್ಲಿ ಭಾರತದ ಗಗನಯಾನಿಯನ್ನು ಕಳುಹಿಸುವ ನಿಟ್ಟಿನಲ್ಲಿ ನಾವು ನಿರಂತರ ಶ್ರಮಿಸುತ್ತಿದ್ದೇವೆ' ಎಂದು ವಿವರಿಸಿದ್ದಾರೆ.
'ಗಗನಯಾತ್ರಿಗಳು ಕಕ್ಷೆಯಲ್ಲಿರುವಾಗ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪರಿಸರ ನಿಯಂತ್ರಣ ಹಾಗೂ ಜೀವ ರಕ್ಷಣಾ ವ್ಯವಸ್ಥೆಯನ್ನು ಯೋಜನೆಯೂ ಒಳಗೊಂಡಿರಲಿದೆ' ಎಂದು ತಿಳಿಸಿದ್ದಾರೆ.
'ಇದುವರೆಗೂ ನಾವು ನಡೆಸಿದ ಎಲ್ಲ ಪರೀಕ್ಷೆಗಳು ಯಶಸ್ವಿಯಾಗಿದೆ. ತಂತ್ರಜ್ಞಾನದ ಪರಿಷ್ಕರಣೆ ನಿಟ್ಟಿನಲ್ಲಿ ನಾವು ಬೆಲೆ ಕಟ್ಟಲಾಗದ ಪಾಠಗಳನ್ನು ಕಲಿತಿದ್ದೇವೆ. ಗಗನಯಾನ ಯೋಜನೆಯೂ ಕೇವಲ ಬಾಹ್ಯಾಕಾಶವನ್ನು ತಲುಪುವುದಷ್ಟೇ ಅಲ್ಲ, ಮುಂದಿನ ತಲೆಮಾರಿನ ವಿಜ್ಞಾನಿಗಳಿಗೂ ಸ್ಫೂರ್ತಿ ನೀಡಲಿದೆ' ಎಂದು ನಾರಾಯಣನ್ ವಿವರಿಸಿದ್ದಾರೆ.

