HEALTH TIPS

ರೈಲು ಟಿಕೆಟ್‌ ದರ ಹೆಚ್ಚಳ; ಲೂಟಿ ಹೊಡೆಯುವ ಅವಕಾಶವನ್ನೇ ಕೇಂದ್ರ ಬಿಡದು: ಖರ್ಗೆ

ನವದೆಹಲಿ: ಮೋದಿ ಸರ್ಕಾರವು ಜನಸಾಮಾನ್ಯರನ್ನು ಲೂಟಿ ಹೊಡೆಯುವ ಯಾವುದೇ ಅವಕಾಶವನ್ನೂ ಬಿಡುವುದಿಲ್ಲ. ಕೇಂದ್ರ ಸರ್ಕಾರವು ಒಂದೇ ವರ್ಷದಲ್ಲಿ ಎರಡು ಬಾರಿ ರೈಲು ಟಿಕೆಟ್ ದರವನ್ನು ಹೆಚ್ಚಿಸಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.

ಮೋದಿ ಸರ್ಕಾರದ ಅವಧಿಯಲ್ಲಿ ರೈಲ್ವೆಯು ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಖರ್ಗೆ ಅವರು 'ಎಕ್ಸ್‌'ನಲ್ಲಿ ಸೋಮವಾರ ದೂರಿದ್ದಾರೆ.

'ಪ್ರತ್ಯೇಕ ರೈಲ್ವೆ ಬಜೆಟ್‌ ಇಲ್ಲದ ಕಾರಣ ಹೊಣೆಗಾರಿಕೆಯೇ ಮಾಯವಾಗಿದೆ. ಮೋದಿ ನೇತೃತ್ವದ ಸರ್ಕಾರವು ನಕಲಿ ಪ್ರಚಾರದಲ್ಲಿ ಮಗ್ನವಾಗಿದೆ. ಈ ಮಧ್ಯೆ ರೈಲ್ವೆಯು ರೋಗಗ್ರಸ್ತವಾಗಿದೆ' ಎಂದು ಹೇಳಿದ್ದಾರೆ.

'2014-23ರವರೆಗಿನ ಎನ್‌ಸಿಆರ್‌ಬಿ ವರದಿ ಪ್ರಕಾರ, ರೈಲು ಅಪಘಾತಗಳಲ್ಲಿ 2.18 ಲಕ್ಷ ಮಂದಿಯ ಸಾವು ಸಂಭವಿಸಿದೆ. ರೈಲು ಸಂಚಾರದಲ್ಲಿ ಸುರಕ್ಷತೆಯೇ ಇಲ್ಲದಂತಾಗಿದೆ. ಜನರ ಜೀವದ ಜೊತೆ ಚೆಲ್ಲಾಟ ಆಡಲಾಗುತ್ತಿದೆ' ಎಂದು ಹರಿಹಾಯ್ದಿದ್ದಾರೆ.

'ಕವಚ್‌ ಯೋಜನೆಯು ಕೇವಲ ಶೇ 3ರಷ್ಟು ಮಾರ್ಗಗಳಿಗೆ ಮತ್ತು ಶೇ 1ಕ್ಕಿಂತ ಕಡಿಮೆ ಲೋಕೊ ಮೋಟೊ ರೈಲುಗಳಿಗೆ ಅನ್ವಯವಾಗುತ್ತಿದೆ. ರೈಲ್ವೆ ಸುರಕ್ಷತೆಯು ಶಬ್ದಾಡಂಬರದ ಭಾಷಣದಲ್ಲಿ ಮಾತ್ರ ಇದೆ' ಎಂದು ಆರೋಪಿಸಿದ್ದಾರೆ.

ಅಮೃತ ಭಾರತ ಯೋಜನೆಯಡಿ 453 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಗುರಿ ಹೊಂದಲಾಗಿದೆ. ಆದರೆ ವಾಸ್ತವದಲ್ಲಿ ಒಂದೇ ಒಂದು ನಿಲ್ದಾಣವನ್ನು ಮಾತ್ರ ಮೇಲ್ದರ್ಜೆಗೇರಿಸಲಾಗಿದೆ ಎಂದು ದೂರಿದ್ದಾರೆ.

'2024ರ ಸಿಎಜಿ ವರದಿ ಪ್ರಕಾರ ರೈಲ್ವೆಯು ₹2,604 ಕೋಟಿ ನಷ್ಟದಲ್ಲಿದೆ. ಹಿರಿಯ ನಾಗರಿಕರ ವಿನಾಯಿತಿಯನ್ನು ರದ್ದು ಮಾಡಿ, ಅವರಿಂದ ₹8,913 ಕೋಟಿ ವಸೂಲಿ ಮಾಡಲಾಗುತ್ತಿದೆ' ಎಂದು ದೂರಿದರು.

215 ಕಿ.ಮೀ.ಗೂ ದೂರದ ಸಾಮಾನ್ಯ ದರ್ಜೆಯಲ್ಲಿನ ರೈಲು ಪ್ರಯಾಣ ದರವನ್ನು ಪ್ರತಿ ಕಿ.ಮೀಗೆ 1 ಪೈಸೆ ಮತ್ತು ಮೇಲ್‌, ಎಕ್ಸ್‌ಪ್ರೆಸ್‌ ರೈಲುಗಳ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಿತ ವ್ಯವಸ್ಥೆ ಇಲ್ಲದ ಬೋಗಿಗಳಲ್ಲಿನ ‍ಪ್ರಯಾಣ ದರವನ್ನು ಪ್ರತಿ ಕಿ.ಮೀಗೆ 2 ಪೈಸೆ ಏರಿಕೆ ಮಾಡಿ ರೈಲ್ವೆ ಸಚಿವಾಲಯವು ಭಾನುವಾರ ಆದೇಶ ಹೊರಡಿಸಿದೆ.

ಅಶ್ಚಿನಿ ವೈಷ್ಣವ್ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಸೋಮವಾರ ಆಗ್ರಹಿಸಿದೆ. ಅಶ್ವಿನಿ ವೈಷ್ಣವ್‌ ಅವರ ಆಡಳಿತಾವಧಿಯಲ್ಲಿ ಇಲಾಖೆಯು ಹದಗೆಡುತ್ತಿದೆ. ರೈಲು ಟಿಕೆಟ್‌ ದರವನ್ನು ವರ್ಷದಲ್ಲಿ ಎರಡು ಬಾರಿ ಏರಿಕೆ ಮಾಡಲಾಗಿದೆ ಎಂದು ಪಕ್ಷವು ಆರೋಪಿಸಿದೆ. ಪಕ್ಷದ ಮುಖ್ಯಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಅಜಯ್‌ ಕುಮಾರ್‌ ವೈಷ್ಣವ್‌ ಅವರು ಜಾಣ್ಮೆಯಿಂದ 1 ಮತ್ತು 2 ಪೈಸೆ ದರ ಏರಿಕೆ ಮಾಡಿದ್ದಾರೆ. ಆದರೆ ಜನಸಾಮಾನ್ಯರ ಮೇಲೆ ₹100-200 ಹೊರೆ ಬೀಳುತ್ತದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಕಳೆದ 10 ವರ್ಷಗಳಲ್ಲಿ ರೈಲು ಟಿಕೆಟ್‌ ದರವು ಶೇ 107ರಷ್ಟು ಹೆಚ್ಚಾಗಿದೆ. ಹೀಗಾಗಿ ರೈಲುಗಳಲ್ಲಿ ಜನಸಾಮಾನ್ಯರ ಸಂಚಾರವೂ ದುಸ್ತರವಾಗಿದೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries