ನವದೆಹಲಿ: ಹೋಟೆಲ್‌ಗಳು, ಕಾರ್ಯಕ್ರಮ ಸಂಘಟಕರು ತಮ್ಮ ಗ್ರಾಹಕರಿಂದ ಆಧಾರ್ ಕಾರ್ಡ್‌ನ ನೆರಳಚ್ಚು ಪ್ರತಿ ಪಡೆದು, ಅವುಗಳನ್ನು ತಮ್ಮಲ್ಲಿ ಇರಿಸಿಕೊಳ್ಳುವುದನ್ನು ಕಡಿಮೆ ಮಾಡಲು ಹೊಸ ನಿಯಮಗಳನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೀಗೆ ಆಧಾರ್ ಕಾರ್ಡ್ ಪ್ರತಿ ಪಡೆದುಕೊಳ್ಳುವುದು ಆಧಾರ್ ಕಾಯ್ದೆಗೆ ವಿರುದ್ಧ.
ಹೋಟೆಲ್ ಪ್ರತಿನಿಧಿಗಳು, ಕಾರ್ಯಕ್ರಮ ಸಂಘಟಕರು ಮುಂತಾದವರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವ್ಯಕ್ತಿಯ ಗುರುತನ್ನು ತಾಳೆ ಮಾಡುವ ತಂತ್ರಜ್ಞಾನವನ್ನು ಪಡೆಯಬೇಕು ಎಂದಾದರೆ ತಮ್ಮ ಸಂಸ್ಥೆಯನ್ನು ನೋಂದಣಿ ಮಾಡಿಸುವುದು ಕಡ್ಡಾಯ ಎನ್ನುವ ನಿಯಮಕ್ಕೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಒಪ್ಪಿಗೆ ನೀಡಿದೆ ಎಂದು ಅದರ ಸಿಇಒ ಭುವನೇಶ್ ಕುಮಾರ್ ಹೇಳಿದ್ದಾರೆ.
'ಹೊಸ ನಿಯಮವನ್ನು ಶೀಘ್ರದಲ್ಲಿಯೇ ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ. ಆಧಾರ್ ಸಂಖ್ಯೆಯನ್ನು ಆಧರಿಸಿ ವ್ಯಕ್ತಿಯ ಗುರುತು ತಾಳೆ ಮಾಡುವ ಸಂಸ್ಥೆಗಳು ತಮ್ಮ ಹೆಸರನ್ನು ನೋಂದಣಿ ಮಾಡುವುದನ್ನು ಈ ನಿಯಮವು ಕಡ್ಡಾಯಗೊಳಿಸುತ್ತದೆ' ಎಂದು ಕುಮಾರ್ ತಿಳಿಸಿದ್ದಾರೆ.
ಆಧಾರ್‌ನ ಕೇಂದ್ರ ದತ್ತಾಂಶ ಕೋಶದ ಜೊತೆ ಸಂಪರ್ಕ ಹೊಂದದೆಯೂ ವ್ಯಕ್ತಿಯ ಗುರುತು ತಾಳೆ ನೋಡುವ ಹೊಸ ಆಯಪ್ ಒಂದನ್ನು ಯುಐಡಿಎಐ ಪರೀಕ್ಷಿಸುತ್ತಿದೆ. ಈ ಹೊಸ ಆಯಪ್‌ಅನ್ನು ವಿಮಾನ ನಿಲ್ದಾಣಗಳಲ್ಲಿ, ಗ್ರಾಹಕರ ವಯಸ್ಸಿನ ಆಧಾರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಿರುವ ಅಂಗಡಿಗಳಲ್ಲಿ ಬಳಕೆ ಮಾಡಬಹುದು.




