ಕಾಸರಗೋಡು: 'ದೇವರ ಸ್ವಂತ ನಾಡು'ಕೇರಳದ ಹೊಳೆಗಳು ತ್ಯಾಜ್ಯದಿಂದ ಕಲುಷಿತಗೊಳ್ಳುತ್ತಿದ್ದರೂ, ಸಂಬಂಧಪಟ್ಟವರು ಇತ್ತ ಗಮನಹರಿಸದಿರುವುದರಿಂದ ವ್ಯಾಪಕ ಜಲಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ 12ಕ್ಕೂಹೆಚ್ಚು ಪ್ರಮುಖ ನದಿಗಳು ಹರಿಯುತ್ತಿದ್ದು, ಇವುಗಳಲ್ಲಿಬಹುತೇಕ ಹೊಳೆಗಳು ಮಾಲಿನ್ಯದ ಗುಡಾರವಾಗುತ್ತಿದೆ. ಜಿಲ್ಲೆಯ ಪ್ರಮುಖ ದೇವಾಲಯ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಎದುರು ಹರಿಯುವ ಮಧುವಾಹಿನಿ ಹೊಳೆಯ ಮೇಲ್ಭಾಗದಲ್ಲಿ ಬಾರಿಕ್ಕಾಡ್ ಆಸುಪಾಸು ವ್ಯಾಪಕವಾಗಿ ಕೋಳಿ ತ್ಯಾಜ್ಯವನ್ನು ಹೊಳೆಗೆ ಎಸಯಲಾಗುತ್ತಿದ್ದು, ನೀರು ಸಂಪೂರ್ಣ ಕಲುಷಿತಗೊಳ್ಳಲು ಕಾರಣವಾಗಿದೆ. ದೇವಾಲಯಕ್ಕೆ ಆಗಮಿಸುವ ಶ್ರೀ ಅಯ್ಯಪ್ಪ ಭಕ್ತಾದಿಗಳು ಸೇರಿದಂತೆ ನೂರಾರು ಮಂದಿ ಭಕ್ತರು ಇದೇ ಮಧುವಾಹಿನಿ ಹೊಳೆಯಲ್ಲಿಮಿಂದೇಳುತ್ತಿದ್ದಾರೆ.
ದೇವಾಲಯದಿಂದ ಸುಮಾರು ಒಂದುವರೆ ಕಿ.ಮೀ ದೂರದಲ್ಲಿರುವ ಬಾರಿಕ್ಕಾಡ್ ಸೇತುವೆಯಿಂದ ನೇರವಾಗಿ ಹೊಳೆಗೆ ಕೋಳಿ ತ್ಯಾಜ್ಯದ ಮೂಟೆಯನ್ನು ಎಸೆಯಲಾಗುತ್ತಿದೆ ಎಂಬುದಾಗಿ ಸ್ಥಳೀಯರು ತಿಳಿಸುತ್ತಾರೆ. ಜಲಾಶಯಗಳನ್ನು ಕಲುಷಿತಗೊಳಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶಗಳಿದ್ದರೂ, ತ್ಯಾಜ್ಯ ಸುರಿಯುವವರನ್ನು ಪತ್ತೆಹಚ್ಚುವುದು ಕಷ್ಟಸಾಧ್ಯವಾಗುತ್ತಿದೆ. ವಾಹನಗಳಲ್ಲಿ ಕೋಳಿ ಸೇರಿದಂತೆ ಇತರ ಪ್ರಾಣಿಜನ್ಯ ಮಾಲಿನ್ಯವನ್ನು ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ತುಂಬಿಸಿ, ಸೇತುವೆಯಿಂದ ಹೊಳೆಗೆ ಎಸೆಯಲಾಗುತ್ತಿದೆ.
ಕೆಲವೊಂದು ವಿವಾಹ ಸಮಾರಂಭದ ಮನೆಗಳಿಂದ ಆಹಾರ ಪದಾರ್ಥ, ಕೋಳಿ ಸೇರಿದಂತೆ ಇತರ ಪ್ರಾಣಿಗಳ ತ್ಯಾಜ್ಯವನ್ನೂ ತಂದು ಹೊಳೆಗೆ ಎಸೆಯಲಾಗುತ್ತಿದೆ. ಬಾರಿಕ್ಕಾಡು ಸೇತುವೆ ಸನಿಹ ಹೊಳೆಯಲ್ಲಿ ಈ ರೀತಿ ಎಸೆಯಲಾಗಿರುವ ಕ್ವಿಂಟಾಲುಗಟ್ಟಲೆ ತ್ಯಾಜ್ಯದ ಮೂಟೆ ನೀರಲ್ಲಿ ತೇಲಾಡುತ್ತಿದೆ. ಈ ತ್ಯಾಜ್ಯ ಕೊಳೆತು ನೀರಿನೊಂದಿಗೆ ಸೇರ್ಪಡೆಗೊಳ್ಳುತ್ತಿದ್ದು, ಆಸುಪಾಸಿನ ಕುಡಿಯುವ ನೀರಿನ ಮೂಲಗಳೂ ಕಲುಷಿತಗೊಳ್ಳುವ ಭೀತಿ ಎದುರಾಗಿದೆ.
ಬೀದಿ ನಾಯಿಗಳ ಕಾಟ:
ವ್ಯಾಫಕವಾಗಿ ತ್ಯಾಜ್ಯ ಸಾರ್ವಜನಿಕ ಸ್ಥಳದಲ್ಲಿ ಸುರಿಯುತ್ತಿರುವುದರಿಂದ ಆಹಾರ ಅರಸಿಕೊಂಡುಬರುತ್ತಿರುವ ಬೀದಿನಾಯಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಇದರಿಂದ ಮಕ್ಕಳು, ಮಹಿಳೆಯರು ಹಾಗೂ ವೃದ್ಧರಿಗೆ ಹಾದಿ ನಡೆಯಲಾಗದ ಸ್ಥಿತಿ ಎದುರಾಗಿದೆ. ಅನಧಿಕೃತ ಕಸಾಯಿಖಾನೆಗಳು, ಕೋಳಿ ಫಾರ್ಮ್‍ಗಳಿಂದ ಹೊರಬೀಳುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದ್ದು, ಇದು ವ್ಯಾಪಕವಾಗಿ ಸಾಮಾಜಿಕ ಅಸ್ಥಿರತೆಗೆ ಕಾರಣವಾಗುತ್ತಿದೆ. ಕೆಲವೊಂದು ಆಯಕಟ್ಟಿನ ಪ್ರದೇಶದಲ್ಲೂ ಭಾರೀಪ್ರಮಾಣದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ.
ತೆರೆದ ಪ್ರದೇಶ ಹಾಗೂ ಜಲಮೂಲಗಳಿಗೆ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾಗರಿಕರು ಅಗ್ರಹಿಸಿದ್ದಾರೆ.



