ವಾಷಿಂಗ್ಟನ್: ಪ್ರಯಾಣ ನಿಷೇಧಿಸಿದ 19 ರಾಷ್ಟ್ರಗಳಿಂದ ವಲಸೆ ಅರ್ಜಿ ಮತ್ತು ಕಾನೂನು ಪ್ರಕಾರ ಪೌರತ್ವ ಪಡೆಯುವ ಪ್ರಕ್ರಿಯೆಯನ್ನು ಟ್ರಂಪ್ ಆಡಳಿತ ಸ್ಥಗಿತೊಳಿಸಿದೆ ಎಂದು ಅಮೆರಿಕಾದ ಸರ್ಕಾರ ಹೇಳಿದೆ.
ಅಮೆರಿಕಾದ ಪೌರತ್ವ ಮತ್ತು ವಲಸೆ ಸೇವೆಗಳ ಏಜೆನ್ಸಿಯ ವೆಬ್‍ಸೈಟ್ ನಲ್ಲಿ ಈ ಹೇಳಿಕೆಯನ್ನು ಪೋಸ್ಟ್ ಮಾಡಲಾಗಿದೆ.
ಈ ಕ್ರಮವು ಈ 19 ರಾಷ್ಟ್ರಗಳಿಂದ ಗ್ರೀನ್ ಕಾರ್ಡ್ ಅರ್ಜಿಗಳು, ವಲಸಿಗರಿಗೆ ಪೌರತ್ವ ಒದಗಿಸುವ ಪ್ರಕ್ರಿಯೆ ಸೇರಿದಂತೆ ವಲಸೆ ಸಂಬಂಧಿತ ವ್ಯಾಪಕ ಶ್ರೇಣಿಯ ನಿರ್ಧಾರಗಳನ್ನು ತಡೆಹಿಡಿಯುತ್ತದೆ ಎಂದು ಏಜೆನ್ಸಿಯ ನಿರ್ದೇಶಕ ಜೋಸೆಫ್ ಎಡ್ಲೋ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆಯ ಕಾಳಜಿಯ ಹಿನ್ನೆಲೆಯಲ್ಲಿ 19 ದೇಶಗಳ ಪ್ರಜೆಗಳು ಅಮೆರಿಕಾಕ್ಕೆ ಪ್ರಯಾಣಿಸುವುದನ್ನು ಜೂನ್‍ನಲ್ಲಿ ಅಮೆರಿಕಾ ನಿರ್ಬಂಧಿಸಿದೆ. ಅಫ್ಘಾನ್, ಮ್ಯಾನ್ಮಾರ್, ಚಾಡ್, ಕಾಂಗೋ ಗಣರಾಜ್ಯ, ಇಕ್ವೆಟೋರಿಯಲ್ ಗಿನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್, ಯೆಮನ್, ಲಾವೋಸ್, ಸಿಯೆರಾ ಲಿಯೊನ್, ಟೊಗೊ, ಬುರುಂಡಿ, ಕ್ಯೂಬಾ, ತುರ್ಕ್‍ಮೆನಿಸ್ತಾನ್ ಮತ್ತು ವೆನೆಝುವೆಲಾ ದೇಶಗಳು ಈ ಪಟ್ಟಿಯಲ್ಲಿವೆ.
ನಿಷೇಧ ಜಾರಿಗೆ ಬರುವುದಕ್ಕೂ ಮುನ್ನ, ಅಂದರೆ ಜೂನ್‍ಗೂ ಮುನ್ನ ಅಮೆರಿಕಾದಲ್ಲಿ ನೆಲೆಸಿದ್ದ ಈ 19 ರಾಷ್ಟ್ರಗಳ ವಲಸಿಗರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಈಗಿನ ಘೋಷಣೆಯ ಪ್ರಕಾರ, ಈಗಾಗಲೇ ಅಮೆರಿಕಾದಲ್ಲಿರುವ ವಲಸಿಗರು(ಅವರು ಯಾವಾಗ ಅಮೆರಿಕಾಕ್ಕೆ ಬಂದಿದ್ದಾರೆ ಎಂಬುದನ್ನು ಲೆಕ್ಕಿಸದೆ) ಹೆಚ್ಚುವರಿ ಪರಿಶೀಲನೆಗೆ ಒಳಪಡುತ್ತಾರೆ.




