ತಿರುವನಂತಪುರಂ: ಬೆಂಗಳೂರು ನಗರದಲ್ಲಿನ ಐದು ಎಕರೆ ಸರಕಾರಿ ಭೂಮಿಯನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಯಾವುದೇ ಮುನ್ಸೂಚನೆ ನೀಡದೆ ಕೊಳೆಗೇರಿಯ 300ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿರುವ ಕ್ರಮಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಷಗಳಿಂದ ಮುಸ್ಲಿಮರು ವಾಸಿಸುತ್ತಿದ್ದ ಫಕೀರ್ ಕಾಲೋನಿ ಹಾಗೂ ವಾಸಿಂ ಲೇಔಟ್‌ಗಳನ್ನು ಬುಲ್ಡೋಝರ್ ಮೂಲಕ ಧ್ವಂಸಗೊಳಿಸಿರುವುದು ಅತ್ಯಂತ ಆಘಾತಕಾರಿ ಹಾಗೂ ಮಾನವೀಯತೆಗೆ ವಿರುದ್ಧವಾದ ನಡೆ ಎಂದು ಅವರು ಹೇಳಿದ್ದಾರೆ. ಯಾವುದೇ ಮುನ್ಸೂಚನೆ ಅಥವಾ ಪರ್ಯಾಯ ವ್ಯವಸ್ಥೆ ಇಲ್ಲದೆ ನಡೆದ ಈ ಕಾರ್ಯಾಚರಣೆಯಿಂದ ನೂರಾರು ಕುಟುಂಬಗಳು ಚಳಿಗಾಲದ ಮಧ್ಯೆ ಬೀದಿಗೆ ತಳ್ಳಲ್ಪಟ್ಟಿರುವುದು ಗಂಭೀರ ಕಳವಳ ಉಂಟುಮಾಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಭಾರತದಲ್ಲಿ ಸಂಘ ಪರಿವಾರ ಜಾರಿಗೆ ತರುತ್ತಿರುವ ಅಲ್ಪಸಂಖ್ಯಾತ ವಿರೋಧಿ ರಾಜಕೀಯದ ಮತ್ತೊಂದು ರೂಪವನ್ನೇ ಕರ್ನಾಟಕದಲ್ಲಿ ಕಾಣುತ್ತಿರುವಂತಾಗಿದೆ ಎಂದು ವಿಜಯನ್ ಟೀಕಿಸಿದ್ದಾರೆ. ದಕ್ಷಿಣ ಭಾರತದಲ್ಲಿಯೂ 'ಉತ್ತರ ಭಾರತದ ಮಾದರಿ ಬುಲ್ಡೋಝರ್ ನ್ಯಾಯ'ವನ್ನು ಅಳವಡಿಸುವ ಪ್ರಯತ್ನಗಳು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯಾಗಲಿದೆ. ಸಮಾಜದ ಬಲಹೀನ ವರ್ಗಗಳ ರಕ್ಷಣೆಯೇ ಆಡಳಿತದ ಮೊದಲ ಆದ್ಯತೆಯಾಗಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಬಡವರಿಗೆ ಆಶ್ರಯ ಒದಗಿಸುವುದು ಹಾಗೂ ಯಾರನ್ನೂ ಮನೆಗಳಿಂದ ಹೊರಹಾಕದಂತೆ ನೋಡಿಕೊಳ್ಳುವುದು ಆಡಳಿತದ ಮೂಲ ಜವಾಬ್ದಾರಿ. ಇಂತಹ ಸಾಮೂಹಿಕ ಹೊರಹಾಕುವಿಕೆಯನ್ನು ಕರ್ನಾಟಕದ ಕಾಂಗ್ರೆಸ್ ಸರಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

