ಗೂಗಲ್‌ನ ಮುಖಪುಟದಲ್ಲಿ ಕಂಡು ಬರುವ ಸಂತೋಷದಾಯಕ ಕಲಾಕೃತಿಯು ಹೊಸ ವರ್ಷವು ಶೀಘ್ರವಾಗಿ ಸಮೀಪಿಸುತ್ತಿದೆ ಮತ್ತು ಒಂದು ಅಧ್ಯಾಯದ ಅಂತ್ಯ ಮತ್ತು ಇನ್ನೊಂದು ಅಧ್ಯಾಯದ ಆರಂಭವನ್ನು ಗುರುತಿಸುತ್ತದೆ ಎಂಬುದನ್ನು ಜನರಿಗೆ ನೆನಪಿಸುತ್ತದೆ.
ಗೂಗಲ್ ಮುಖಪುಟದಲ್ಲಿ ಕಾಣಿಸಿಕೊಂಡಿರುವ ವಿಶೇಷ ಡೂಡಲ್, ಬಲೂನ್‌ಗಳು, ಕಲರ್ ಪೇಪರ್, ವಿಶೇಷ ಎಮೋಜಿಗಳಿಂದ ಅಲಂಕೃತಗೊಂಡು ಹಬ್ಬದಂತೆ ಕಂಗೊಳಿಸುತ್ತಿದೆ. ಡೂಡಲ್‌ನ ಮಧ್ಯಭಾಗದಲ್ಲಿ '2025' ರಿಂದ '2026' ಕ್ಕೆ ಪರಿವರ್ತನೆಗೊಳ್ಳುವ ಅನಿಮೇಷನ್ ಕಂಡು ಬಂದಿದೆ.
ಡೂಡಲ್ ಮೇಲೆ ಕ್ಲಿಕ್ ಮಾಡಿದಾಗ, 'ಪ್ರಪಂಚದಾದ್ಯಂತ ಹೊಸ ವರ್ಷದ ಮುನ್ನಾ ದಿನವನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಗುತ್ತದೆ. ಕೋಟ್ಯಂತರ ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕಳೆದ ವರ್ಷದ ಸಿಹಿ ಕ್ಷಣಗಳನ್ನು ಮೆಲಕು ಹಾಕುತ್ತ, ಮುಂಬರುವ ಹೊಸ ವರ್ಷವನ್ನು ಸ್ವಾಗತಿಸಲು ಒಂದು ಕಡೆ ಸೇರುತ್ತಾರೆ. ಶೀಘ್ರದಲ್ಲೇ 2026 ಅನ್ನು ಅಧಿಕೃತವಾಗಿ ಬರಮಾಡಿಕೊಳ್ಳಲು ಗಡಿಯಾರ ಮಧ್ಯರಾತ್ರಿಯನ್ನು ತಲುಪಲಿದೆ' ಎಂದು ಗೂಗಲ್ ಸಿದ್ಧಪಡಿಸಿರುವ ವಿಶೇಷ ಡೂಡಲ್ ಹೇಳಿದೆ.

