ಶ್ರೀನಗರ: ಕಳೆದ ಏಪ್ರಿಲ್‌ನಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಕುಂಠಿತಗೊಂಡಿದ್ದ ಪ್ರವಾಸೋದ್ಯಮ ವರ್ಷಾಂತ್ಯ, ಹೊಸ ವರ್ಷದ ಆರಂಭದಲ್ಲಿ ಪುಟಿದೆದ್ದಿದೆ.
ಏಪ್ರಿಲ್ ಘಟನೆಯ ನಂತರ ತಾತ್ಕಾಲಿಕವಾಗಿ ಪ್ರವಾಸೋದ್ಯಮಕ್ಕೆ ಹಿನ್ನೆಡೆಯಾಗಿದ್ದರೂ, ಈಗ ಪರಿಸ್ಥಿತಿ ಸುಧಾರಿಸಿದೆ.
ಪ್ರವಾಸಿಗರು ಮತ್ತೆ ರಜಾದಿನಗಳ ಭೇಟಿಗೆ ಕಾಶ್ಮೀರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ 2025ರಲ್ಲಿ ಕಾಶ್ಮೀರ ಕಣಿವೆಗೆ ಸುಮಾರು 10.5 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಲ್ಲಿ 4 ಲಕ್ಷಕ್ಕೂ ಅಧಿಕ ಅಮರನಾಥ ಯಾತ್ರಿಕರೂ ಸೇರಿದ್ದಾರೆ. 2024ರಲ್ಲಿ ಯಾತ್ರಿಕರು ಸೇರಿ 35 ಲಕ್ಷ ಜನ ಭೇಟಿ ನೀಡಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ ಕಾಶ್ಮೀರಕ್ಕೆ ಬರುವವರ ಸಂಖ್ಯೆ ಕಡಿಮೆಯಿದ್ದರೂ ಪ್ರಸ್ತುತ ಚೇತರಿಕೆ ಕಾಣುತ್ತಿದೆ ಎಂದು ಪ್ರವಾಸೋದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.
ಚಳಿಗಾಲದಲ್ಲಿ ವಿಶೇಷವಾಗಿ ಗುಲ್ಮಾರ್ಗ್‌ನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ರೆಸಾರ್ಟ್‌ಗಳಲ್ಲಿ ಹಬ್ಬದ ವಾತಾವರಣ, ಹೋಟೆಲ್‌ಗಳಲ್ಲಿ ಜನಜಂಗುಳಿ ಕಂಡುಬರುತ್ತಿದೆ. ಹಿಮ ಆವೃತ ಪ್ರದೇಶಗಳಲ್ಲಿ ಸಾಹಸಮಯ ಆಟಗಳಲ್ಲಿ ಜನರು ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'ಹೊಸವರ್ಷಕ್ಕೆ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸುವವರ ಸಂಖ್ಯೆ ಹೆಚ್ಚಾಗಿದೆ. ನಿರ್ಭಿತಿಯಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ' ಎಂದು ಗುಲ್ಮಾರ್ಗ್‌ನ ಹೋಟೆಲ್ ಮಾಲೀಕರೊಬ್ಬರು ತಿಳಿಸಿದ್ದಾರೆ.
ಪಹಲ್ಗಾಮ್, ಸೋನ್‌ಮಾರ್ಗ್, ಶ್ರೀನಗರಗಳಲ್ಲಿ ಹಿಮದಲ್ಲಿ ಸಾಹಸಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವವರು, ನವದಂಪತಿಗಳು ಹನಿಮೂನ್‌ಗೆ ಬರುತ್ತಿದ್ದಾರೆ. ಪ್ರವಾಸಿಗರ ಸುರಕ್ಷತೆಗಾಗಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದ್ದು, ಪ್ರವಾಸಿಗರ ನಿರಂತರ ಹರಿವನ್ನು ಕಾಯ್ದುಕೊಳ್ಳಲು ಪ್ರವಾಸೋದ್ಯಮ ಅಧಿಕಾರಿಗಳು ಸ್ಥಳೀಯರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾರೆ ಎಂದೂ ಅಧಿಕಾರಿಗಳು ವಿವರಿಸಿದ್ದಾರೆ.

