ದೇಹದಲ್ಲಿ ನಿರಂತರವಾಗಿ ತುರಿಕೆ ಕಂಡುಬರುವುದು ಸಾಮಾನ್ಯ ವಿಷಯವಲ್ಲ. ಆದರೆ ಕೆಲವರು ಇದನ್ನು ಚರ್ಮದ ಸಮಸ್ಯೆ, ರಿಂಗ್‌ವರ್ಮ್ ಅಥವಾ ಆಹಾರ ಅಲರ್ಜಿಯಿಂದ ಉಂಟಾಗಿರಬಹುದು ಎಂದು ಭಾವಿಸಿ ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ನಿರಂತರವಾಗಿ ಕಂಡುಬರುವ ತುರಿಕೆ (Itch) ಆಂತರಿಕ ಕಾಯಿಲೆ ಅಥವಾ ಪೋಷಕಾಂಶಗಳ ಕೊರತೆಯ ಸಂಕೇತವೂ ಆಗಿರಬಹುದು ಎಂಬುದನ್ನು ಮರೆಯಬೇಡಿ.
ಆರೋಗ್ಯ ತಜ್ಞರ ಪ್ರಕಾರ, ದೇಹದಲ್ಲಿ ಕೆಲವು ಜೀವಸತ್ವ ಅಂದರೆ ವಿಟಮಿನ್ ಗಳ ಕೊರತೆ ಉಂಟಾದಾಗಲೂ ಕೂಡ, ತುರಿಕೆ ಹೆಚ್ಚಾಗಬಹುದು. ಹಾಗಾದರೆ ಯಾವ ವಿಟಮಿನ್ ಕೊರತೆ ಈ ರೀತಿಯ ಸಮಸ್ಯೆಗೆ ಕಾರಣವಾಗುತ್ತೆ, ಇದರಿಂದ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಆರೋಗ್ಯ ತಜ್ಞರ ಪ್ರಕಾರ, ದೇಹದಲ್ಲಿ ತುರಿಕೆಗೆ ಕಂಡು ಬರುವುದಕ್ಕೆ ಹಲವು ಕಾರಣಗಳಿರಬಹುದು, ಅವುಗಳಲ್ಲಿ ಒಂದು ವಿಟಮಿನ್ ಕೊರತೆ.
ವಿಟಮಿನ್ ಎ: ಈ ಜೀವಸತ್ವದ ಕೊರತೆ ತುರಿಕೆಗೆ ಕಾರಣವಾಗಬಹುದು. ಹೌದು, ವಿಟಮಿನ್ ಎ ಕೊರತೆಯು ಚರ್ಮವನ್ನು ಒಣಗಿಸಿ ತುರಿಕೆಗೆ ಕಾರಣವಾಗಬಹುದು. ಅದರಲ್ಲಿಯೂ ಚಳಿಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು.
ವಿಟಮಿನ್ ಬಿ12: ಸಾಮಾನ್ಯವಾಗಿ ವಿಟಮಿನ್ ಬಿ12 ಕೊರತೆಯಿಂದಲೂ ದೇಹದಲ್ಲಿ ತುರಿಕೆ ಉಂಟಾಗಬಹುದು. ಅದರಲ್ಲಿಯೂ ಈ ಜೀವಸತ್ವದ ಕೊರತೆಯಿಂದ ಕೈ ಮತ್ತು ಕಾಲುಗಳಲ್ಲಿ ತುರಿಕೆ ಹೆಚ್ಚಾಗಬಹುದು. ಅಷ್ಟೇ ಅಲ್ಲ, ವಿಟಮಿನ್ ಬಿ3 ಕೊರತೆಯು ಕೂಡ ತುರಿಕೆಗೂ ಕಾರಣವಾಗಬಹುದು. ಈ ವಿಟಮಿನ್ ಬಿ3 ಕೊರತೆಯನ್ನು ನಿಯಾಸಿನ್ ಎಂದೂ ಕರೆಯುತ್ತಾರೆ.
ಕ್ಯಾಲ್ಸಿಯಂ: ಸಾಮಾನ್ಯವಾಗಿ ಕ್ಯಾಲ್ಸಿಯಂ ಅಂಶ ಕಡಿಮೆಯಿದ್ದಾಗ ಕೈ ಮತ್ತು ಕಾಲುಗಳಲ್ಲಿ ನಡುಕ ಮತ್ತು ಚರ್ಮದ ಮೇಲೆ ತುರಿಕೆ ಕಂಡು ಬರುತ್ತದೆ. ನರಮಂಡಲವು ಸುಲಭವಾಗಿ ಕಿರಿಕಿರಿಗೊಳ್ಳುವುದರಿಂದ ಈ ರೀತಿಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬಾಯಿ ಅಥವಾ ಬೆರಳುಗಳ ಸುತ್ತ ನಡುಕ ಬರುವುದು ಕೂಡ ಕ್ಯಾಲ್ಸಿಯಂ ಕೊರತೆಯ ಸಂಕೇತವಾಗಿರಬಹುದು.
ವಿಟಮಿನ್ ಇ ಮತ್ತು ವಿಟಮಿನ್ ಸಿ: ನಿಮಗೆ ಗೊತ್ತಾ? ದೇಹದಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಸಿ ಕೊರತೆ ಉಂಟಾದಾಗಲೂ ಕೂಡ ತುರಿಕೆಯಂತಹ ಲಕ್ಷಣಗಳು ಕಂಡುಬರಬಹುದು. ವಿಟಮಿನ್ ಇ ಉರಿಯೂತದ ಗುಣಗಳನ್ನು ಹೊಂದಿದ್ದು ಅದು ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.




