ಬೀಜಿಂಗ್: ಸ್ವಾತಂತ್ರ್ಯದತ್ತ ಹೆಜ್ಜೆ ಇಡುತ್ತಿರುವ ತೈವಾನ್‌ಗೆ ಕಠಿಣ ಎಚ್ಚರಿಕೆ ನೀಡುವ ಉದ್ದೇಶದಿಂದ ಮತ್ತು ಯುದ್ಧ ಸನ್ನದ್ಧತೆಯನ್ನು ಪರೀಕ್ಷಿಸುವ ಸಲುವಾಗಿ, ಚೀನಾ ತನ್ನ ಸೇನೆ, ನೌಕಾ ಪಡೆ, ವಾಯುಪಡೆಗಳನ್ನು ತೈವಾನ್ ಸುತ್ತಲೂ ನಿಯೋಜಿಸಿದೆ.
ತೈವಾನ್ ಸುತ್ತಲಿನ ಐದು ವಲಯಗಳಲ್ಲಿ ನಾಳೆ (ಮಂಗಳವಾರ) ಬೆಳಿಗ್ಗೆ 8.30ರಿಂದ ಸಮುದ್ರ ಹಾಗೂ ವಾಯುಪ್ರದೇಶಗಲ್ಲಿ ಕವಾಯತು ನಡೆಸಲಾಗುವುದು ಎಂದು ಈಸ್ಟರ್ನ್ ಥಿಯೇಟರ್ ಕಮಾಂಡ್ ಹೇಳಿಕೆ ಬಿಡುಗಡೆ ಮಾಡಿದೆ.
ಅಮೆರಿಕದ ಪ್ರಜಾ ಪ್ರತಿನಿಧಿ ಸಭೆಯ ಸ್ಪೀಕರ್ ಆಗಿದ್ದ ನ್ಯಾನ್ಸಿ ಪೆಲೊಸಿ ಅವರು 2022ರಲ್ಲಿ ತೈವಾನ್‌ಗೆ ಭೇಟಿ ನೀಡಿದಾಗಿನಿಂದ ಚೀನಾ ನಡೆಸುತ್ತಿರುವ ಆರನೇ ಪ್ರಮುಖ ಸಮರಾಭ್ಯಾಸ ಇದಾಗಿದೆ.
ತೈವಾನ್ ಮೇಲೆ ಚೀನಾ ದಾಳಿಗೆ ಯತ್ನಿಸಿದರೆ, ಟೊಕಿಯೊದಿಂದಲೂ (ಜಪಾನ್) ಪ್ರತಿಕ್ರಿಯೆಗಳು ಬರಬಹುದು ಎಂದು ಜಪಾನ್ ಪ್ರಧಾನಿ ಸನಾಯ್ ತಕೈಚಿ ಇತ್ತೀಚೆಗೆ ಎಚ್ಚರಿಸಿದ್ದರು. ಆ ಒತ್ತಡದ ನಡುವೆಯೂ, ಚೀನಾ ತನ್ನ ಪ್ರಾದೇಶಿಕ ಹಕ್ಕುಗಳನ್ನು ಬಲವಾಗಿ ಪ್ರತಿಪಾದಿಸಲಾರಂಭಿಸಿದೆ.
'ಈ ಸಮರಾಭ್ಯಾಸವು 'ಸ್ವತಂತ್ರ ತೈವಾನ್' ಪ್ರತ್ಯೇಕವಾದಿ ಶಕ್ತಿಗಳು ಮತ್ತು ಬಾಹ್ಯ ಹಸ್ತಕ್ಷೇಪಗಳಿಗೆ ಗಂಭೀರ ಎಚ್ಚರಿಕೆಯಾಗಲಿದೆ' ಎಂದು ಚೀನಾದ ಈಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರ ಶಿ ಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಸಾಗರ ಹಾಗೂ ವೈಮಾನಿಕ ಯುದ್ಧ ಸನ್ನದ್ಧತೆಗೆ ತರಬೇತಿ ನೀಡುವುದು, ಬಂದರು ಪ್ರದೇಶಗಳನ್ನು ಮುಚ್ಚುವುದು, ನಿಯಂತ್ರಿಸುವುದು ಹಾಗೂ ಬಹು ಆಯಾಮದ ತಂತ್ರಗಾರಿಕೆ ಮೇಲೆ ಗಮನ ಹರಿಸಲಾಗಿದೆ' ಎಂದೂ ಹೇಳಿದ್ದಾರೆ.
ಕಳೆದ ವರ್ಷವೂ ಸಮರಾಭ್ಯಾಸ ಮಾಡಿದ್ದ ಚೀನಾದ ಪೀಪಲ್ ಲಿಬರೇಷನ್ ಆರ್ಮಿ, ತೈವಾನ್ ಸುತ್ತಲೂ ಬಂದರುಗಳಿಗೆ ದಿಗ್ಬಂಧನ ಹೇರಿತ್ತು. ಆದಾಗ್ಯೂ, ಹೊರಗಿನ ಹಸ್ತಕ್ಷೇಪಗಳನ್ನು ತಡೆಯುವುದು ನಮ್ಮ ಉದ್ದೇಶ ಎಂದು ಬಹಿರಂಗವಾಗಿ ಹೇಳುತ್ತಿರುವುದು ಇದೇ ಮೊದಲು.
ಈ ಬೆಳವಣಿಗೆಗಳ ಬಗ್ಗೆ ತೈವಾನ್ ರಕ್ಷಣಾ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮಧ್ಯಮ ಶ್ರೇಣಿ ಕ್ಷಿಪಣಿ, ಹೋವಿಟ್ಜರ್ ಫಿರಂಗಿ, ಡ್ರೋನ್‌ಗಳು ಸೇರಿದಂತೆ 10 ಶತಕೋಟಿ ಡಾಲರ್‌ಗೂ ಅಧಿಕ ಮೌಲ್ಯದ ಭಾರಿ ಶಸ್ತ್ರಾಸ್ತ್ರಗಳನ್ನು ತೈವಾನ್‌ಗೆ ಮಾರಾಟ ಮಾಡುವುದಾಗಿ ಅಮೆರಿಕ, ವಾರದ ಹಿಂದಷ್ಟೇ ಘೋಷಿಸಿತ್ತು. ಅದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ಚೀನಾ, ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿತ್ತು.

