ನವದೆಹಲಿ: ಬಾಹ್ಯಾಕಾಶ ತಂತ್ರಜ್ಞಾನ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ(ಇನ್‌ಸ್ಪೇಸ್) ದೇಶದ ಏಳು ಸಂಸ್ಥೆಗಳಲ್ಲಿ 'ಅಂತರಿಕ್ಷ ಪ್ರಯೋಗಶಾಲೆ' ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದೆ.
ಅಂತರಿಕ್ಷ ಪ್ರಯೋಗಶಾಲೆಯು ದೇಶದ ಶೈಕ್ಷಣಿಕ ಸಂಸ್ಥೆಗಳಲ್ಲಿ ಅತ್ಯಾಧುನಿಕ ಪ್ರಯೋಗಾಲಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಮೊದಲ ಉಪಕ್ರಮವಾಗಿದೆ.
ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಕಲಿಯುವ ವಿದ್ಯಾರ್ಥಿಗಳಿಗೆ ಇದು ತರಬೇತಿ ಮತ್ತು ಅನುಭವವನ್ನು ನೀಡಲಿದೆ.
'ಆಸಕ್ತ ಸಂಸ್ಥೆಗಳಿಗೆ ಪ್ರಸ್ತಾವ ಸಲ್ಲಿಸುವಂತೆ ಮನವಿ ಮಾಡಲಾಗಿದ್ದು, ದೇಶದ ಏಳು ವಲಯಗಳಿಂದ ಏಳು ಸಂಸ್ಥೆಗಳನ್ನು ಹಂತ ಹಂತವಾಗಿ ಆಯ್ಕೆ ಮಾಡಲಾಗುತ್ತದೆ' ಎಂದು ಇನ್‌ಸ್ಪೇಸ್ ಪ್ರಚಾರ ನಿರ್ದೇಶನಾಲಯದ ನಿರ್ದೇಶಕ ವಿನೋದ್ ಕುಮಾರ್ ಅವರು ತಿಳಿಸಿದ್ದಾರೆ.
ಯೋಜನೆಯ ಒಟ್ಟು ವೆಚ್ಚದ ಶೇ 75ರಷ್ಟನ್ನು ಇನ್‌ಸ್ಪೇಸ್ ಭರಿಸುತ್ತದೆ. ಪ್ರತಿ ಸಂಸ್ಥೆಗೆ ಗರಿಷ್ಠ ₹5 ಕೋಟಿಯಷ್ಟು ನೀಡಲಾಗುತ್ತದೆ. ಪ್ರಸ್ತಾವ ಸಲ್ಲಿಸುವ ಸಂಸ್ಥೆಗಳು 5 ವರ್ಷಕ್ಕಿಂತ ಮೊದಲು ಸ್ಥಾಪಿತವಾಗಿರಬೇಕು, ಎನ್‌ಐಆಆರ್‌ಎಫ್ ಶ್ರೇಯಾಂಕ 200ಕ್ಕಿಂತ ಕೆಳಗಿರಬೇಕು ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕಲಿಕೆಯ ಸೌಲಭ್ಯಗಳನ್ನು ಹೊಂದಿರಬೇಕು.

