HEALTH TIPS

ಕಾರ್ಪೊರೇಷನ್ ಕಟ್ಟಡದಲ್ಲಿರುವ ಕಚೇರಿ ಖಾಲಿ ಮಾಡುವಂತೆ ಒತ್ತಾಯ: ಬಿಜೆಪಿ ಕೌನ್ಸಿಲರ್ ಶ್ರೀಲೇಖಾ ವಿರುದ್ಧ CPI(M) ಶಾಸಕ ಆರೋಪ

ತಿರುವನಂತಪುರಂ: ತಿರುವನಂತಪುರಂ ಕಾರ್ಪೊರೇಷನ್ ಕಟ್ಟಡದಲ್ಲಿರುವ ತಮ್ಮ ಶಾಸಕರ ಕಚೇರಿಯನ್ನು ಖಾಲಿ ಮಾಡುವಂತೆ ಬಿಜೆಪಿ ಕೌನ್ಸಿಲರ್ ಆರ್. ಶ್ರೀಲೇಖಾ ಒತ್ತಾಯಿಸಿದ್ದಾರೆ ಎಂದು ವಟ್ಟಿಯೂರ್ಕಾವು ಕ್ಷೇತ್ರದ ಸಿಪಿಐ(ಎಂ) ಶಾಸಕ ವಿ.ಕೆ. ಪ್ರಶಾಂತ್ ಆರೋಪಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ, ನಿವೃತ್ತ ಡಿಜಿಪಿ ಹಾಗೂ ಬಿಜೆಪಿ ಕೌನ್ಸಿಲರ್ ಆರ್.ಶ್ರೀಲೇಖಾ ದೂರವಾಣಿ ಮೂಲಕ ಸಂಪರ್ಕಿಸಿ ಸಾಸ್ತಮಂಗಲಂನಲ್ಲಿರುವ ಕಾರ್ಪೊರೇಷನ್ ಕಟ್ಟಡದ ತಮ್ಮ ಕಚೇರಿಯನ್ನು ತೆರವುಗೊಳಿಸುವಂತೆ ಹೇಳಿದ್ದಾರೆ ಎಂದು ತಿಳಿಸಿದರು.

ನಿವೃತ್ತ ಡಿಜಿಪಿಯಾಗಿರುವ ಶ್ರೀಲೇಖಾ ಅವರು ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ತಿರುವನಂತಪುರಂ ಕಾರ್ಪೊರೇಷನ್‌ ನಲ್ಲಿ 101 ವಾರ್ಡ್‌ ಗಳಲ್ಲಿ ಬಿಜೆಪಿಯು 50 ವಾರ್ಡ್‌ಗಳನ್ನು ಗೆದ್ದು ಅಧಿಕಾರ ವಹಿಸಿಕೊಂಡಿದೆ.

"ಅದೇ ಕಟ್ಟಡದಲ್ಲಿರುವ ಕೌನ್ಸಿಲರ್ ಕಚೇರಿಯಲ್ಲಿ ಸಾಕಷ್ಟು ಸೌಲಭ್ಯಗಳಿಲ್ಲ. ಶಾಸಕರು ಬಳಸುತ್ತಿರುವ ಸ್ಥಳವು ನನಗೆ ಬೇಕು. ಅದನ್ನು ಪಡೆದುಕೊಳ್ಳಲು ಬಯಸಿರುವುದಾಗಿ ಹೇಳಿದ್ದಾರೆ" ಎಂದು ಪ್ರಶಾಂತ್ ಹೇಳಿದರು. ಕಳೆದ ಏಳು ವರ್ಷಗಳಿಂದ ತಮ್ಮ ಶಾಸಕರ ಕಚೇರಿ ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಿಂದೆಯೂ ಬಿಜೆಪಿ ಕೌನ್ಸಿಲರ್‌ ಗಳು ಅದೇ ಕಟ್ಟಡದ ಒಂದು ಭಾಗವನ್ನು ಕಚೇರಿಯಾಗಿ ಬಳಸುತ್ತಿದ್ದರು ಎಂದರು.

ನಾನು ಮೇಯರ್ ಆಗಿದ್ದ ಅವಧಿಯಲ್ಲಿ ವಾರ್ಡ್ ಕೌನ್ಸಿಲರ್‌ ಗಳಿಗೆ ಕಚೇರಿ ಜಾಗ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಶಾಸಕರಾದ ನಂತರ ನಿಗಮಕ್ಕೆ ಅರ್ಜಿ ಸಲ್ಲಿಸಿ, ನಿಯಮಾನುಸಾರ ಕಾರ್ಪೊರೇಷನ್ ನಿಂದ ಬಾಡಿಗೆಗೆ ಪಡೆದುಕೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದರು.

ಕಾರ್ಯವಿಧಾನದ ಪ್ರಕಾರ ಕಚೇರಿ ತೆರವಿಗೆ ಕಾರ್ಪೊರೇಷನ್ ಕಾರ್ಯದರ್ಶಿಯೇ ನೋಟಿಸ್ ನೀಡಬೇಕು. ಆದರೆ ಇಲ್ಲಿ ಕೌನ್ಸಿಲರ್ ನೇರವಾಗಿ ಶಾಸಕರಿಗೆ ಕರೆ ಮಾಡಿ ತೆರವುಗೆ ಒತ್ತಾಯಿಸುತ್ತಿರುವುದು ಅಸಂಗತವಾಗಿದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬಿಜೆಪಿ ಅನುಸರಿಸುತ್ತಿರುವ ನೀತಿಗಳನ್ನು ಇಲ್ಲಿ ಪುನರಾವರ್ತಿಸಲಾಗುತ್ತಿದೆ ಎಂದು ಆರೋಪಿಸಿದರು. ಈ ಕ್ರಮವನ್ನು 'ಬುಲ್ಡೋಝರ್ ರಾಜ್'ಗೆ ಹೋಲಿಸಿದರು.

ಕೌನ್ಸಿಲರ್‌ ಗಾಗಿ ಮೀಸಲಾದ ಜಾಗವನ್ನು ಶಾಸಕರ ಕಚೇರಿ ಆಕ್ರಮಿಸಿಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್, ತಮ್ಮ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುತ್ತಿರುವ ಕಾರಣ ಹೆಚ್ಚುವರಿ ಜಾಗವನ್ನು ಬಳಸಲಾಗುತ್ತಿದೆ ಎಂದರು. ಆದರೆ ಕೌನ್ಸಿಲರ್ ಕಚೇರಿಯೂ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ನಾಮಫಲಕ ಅಳವಡಿಸಲಾಗಿದೆ ಎಂದರು.

"ಯಾವುದೇ ದೂರು ಇದ್ದರೆ ಅದನ್ನು ಪರಿಶೀಲಿಸಬಹುದು. ಒಪ್ಪಂದದ ಅವಧಿ ಮುಗಿಯುವವರೆಗೆ ನಮಗೆ ಮಂಜೂರಾದ ಜಾಗದಲ್ಲಿ ಕಾರ್ಯನಿರ್ವಹಿಸುವ ಹಕ್ಕಿದೆ. ನಮ್ಮ ಕಚೇರಿಗೆ ಮಾರ್ಚ್ 31, 2026ರವರೆಗೆ ಅನುಮತಿ ನೀಡಲಾಗಿದ್ದು, ಮುಂದಿನ ವರ್ಷ ಮೇನಲ್ಲಿ ವಿಧಾನಸಭೆ ಅವಧಿ ಮುಗಿಯಲಿರುವ ಹಿನ್ನೆಲೆಯಲ್ಲಿ ವಿಸ್ತರಣೆಗೆ ಅರ್ಜಿ ಸಲ್ಲಿಸಲಾಗಿದೆ" ಎಂದರು.

ಈ ನಿರ್ಧಾರವನ್ನು ಕೌನ್ಸಿಲರ್ ಸ್ವತಃ ತೆಗೆದುಕೊಂಡಿರಲಿಕ್ಕೆ ಸಾಧ್ಯವಿಲ್ಲ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದರು. "ಮುಂದಿನ ವರ್ಷ ಮಾರ್ಚ್‌ವರೆಗೆ ಜಾಗ ಮಂಜೂರಾಗಿರುವುದರಿಂದ ಅದಕ್ಕೂ ಮೊದಲು ಖಾಲಿ ಮಾಡುವ ಪ್ರಶ್ನೆಯೇ ಇಲ್ಲ. ತಕ್ಷಣ ತೆರವು ಬೇಕಿದ್ದರೆ ಅವರು ಕಾನೂನು ಕ್ರಮಕ್ಕೆ ಮುಂದಾಗಬಹುದು; ಅದನ್ನು ನಾವು ಕಾನೂನುಬದ್ಧವಾಗಿ ಎದುರಿಸುತ್ತೇವೆ," ಎಂದು ಪ್ರಶಾಂತ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries