ನವದೆಹಲಿ: ದೆಹಲಿಯಲ್ಲಿ ನಡೆದ 36 ನೇ ಆವೃತ್ತಿಯ ದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ನೀಡಿದ ಅಮೂಲ್ಯ ಕೊಡುಗೆಗಾಗಿ 12 ಮಂದಿ ಮಹಿಳೆಯರನ್ನು ಸನ್ಮಾನಿಲಾಯಿತು.
ಮೊನ್ನೆ ಸೋಮವಾರ ಸಾಯಂಕಾಲ ದೆಹಲಿಯ ಐಟಿಸಿ ಮೌರ್ಯ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮ ಕೇವಲ ಭಾಷಣಗಳು ಅಥವಾ ಪ್ರದರ್ಶನಗಳಿಂದಲ್ಲ, ಬದಲಾಗಿ ಮಹಿಳೆಯರ ಪ್ರಾಬಲ್ಯವನ್ನು ಸೂಚಿಸುತ್ತಿತ್ತು; ಪರಿಶ್ರಮ, ಬುದ್ಧಿಶಕ್ತಿ ಮತ್ತು ಉದ್ದೇಶದ ಮೂಲಕ ತಮ್ಮ ಜಗತ್ತನ್ನು ರೂಪಿಸಿಕೊಂಡ ಮಹಿಳೆಯರ ಆಚರಣೆಯಾಗಿತ್ತು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮುಖ್ಯ ಅತಿಥಿಯಾಗಿದ್ದರು. ಮುಖ್ಯಮಂತ್ರಿ ರೇಖಾ ಗುಪ್ತಾ ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು, ಎಕ್ಸ್‌ಪ್ರೆಸ್ ಪಬ್ಲಿಕೇಷನ್ಸ್ (ಮಧುರೈ) ಪ್ರೈವೇಟ್ ಲಿಮಿಟೆಡ್ ಸಿಇಒ ಲಕ್ಷ್ಮಿ ಮೆನನ್ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು.
EPMPL ಸಿಎಂಡಿ ಮನೋಜ್ ಸೊಂಥಾಲಿಯಾ ದೀಪ ಬೆಳಗಿಸಿದರು. ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ, ಲಕ್ಷ್ಮಿ ಮೆನನ್ ಮತ್ತು ಸಂಪಾದಕಿ ಸಾಂತ್ವಾನ ಭಟ್ಟಾಚಾರ್ಯ ಮುಖ್ಯ ಅತಿಥಿಗಳೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾರತದ ಇತಿಹಾಸ ಮತ್ತು ಸಮಾಜವನ್ನು ರೂಪಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು. ಮನ್ನಣೆ ಒಬ್ಬರ ಕೆಲಸದ ಗುಣಮಟ್ಟದಿಂದ ಬರುತ್ತದೆ. ಒಬ್ಬ ವ್ಯಕ್ತಿಯ ಕೆಲಸವು ಅವರ ಟ್ರೇಡ್‌ಮಾರ್ಕ್ ಆಗುತ್ತದೆ ಎಂದು ಹೇಳಿದರು.
ಕೌಶಲ್ಯ ಮತ್ತು ಅರ್ಹತೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಗೌರವವನ್ನು ಬೇಡಬಾರದು; ಅದನ್ನು ಆಜ್ಞಾಪಿಸಬೇಕು" ಎಂದರು. ಭಾರತವು ದೀರ್ಘಕಾಲದಿಂದ ಮಹಿಳೆಯರನ್ನು ಸಬಲೀಕರಣಗೊಳಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದರು. ರಾಣಿ ಲಕ್ಷ್ಮಿಬಾಯಿಯಿಂದ ಕಲ್ಪನಾ ಚಾವ್ಲಾವರೆಗೆ, ಮಹಿಳೆಯರು ಅಡೆತಡೆಗಳನ್ನು ಮುರಿದು ಹೆಮ್ಮೆಯಿಂದ ಸಮಾಜದಲ್ಲಿ ಭದ್ರವಾಗಿ ನಿಂತಿದ್ದಾರೆ ಎಂದರು.
ದೇವಿ ಪ್ರಶಸ್ತಿ ಸನ್ಮಾನಿತರು
ಸನ್ಮಾನಿಸಲ್ಪಟ್ಟ ಮಹಿಳೆಯರಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ANI ಸಂಪಾದಕಿ ಮತ್ತು CEO ಸ್ಮಿತಾ ಪ್ರಕಾಶ್; ಜಪಾನ್‌ನಲ್ಲಿ ನಡೆದ 2024 ರ ಪ್ಯಾರಾ ಚಾಂಪಿಯನ್‌ಶಿಪ್‌ನಲ್ಲಿ ಪ್ಯಾರಾಲಿಂಪಿಯನ್ ಈಜುಗಾರ್ತಿ ಮತ್ತು ಚಿನ್ನದ ಪದಕ ವಿಜೇತೆ ಸಿಮ್ರಾನ್ ಶರ್ಮಾ; ಮತ್ತು ಮಕ್ಕಳ ಅಪೌಷ್ಟಿಕತೆ ವಿರುದ್ಧ ಕೆಲಸ ಮಾಡುವ ಮಕ್ಕಳ ತಜ್ಞೆ ಮತ್ತು ಸಾರ್ವಜನಿಕ ಆರೋಗ್ಯ ತಜ್ಞೆ ಡಾ. ರಾಧಿಕಾ ಬಾತ್ರಾ ಸೇರಿದ್ದಾರೆ.
ಆಣ್ವಿಕ ಜೀವಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ಪ್ರಾಧ್ಯಾಪಕಿ ಮತ್ತು ತಳಿಶಾಸ್ತ್ರಜ್ಞೆ ಸುಧಾ ಭಟ್ಟಾಚಾರ್ಯ; ಕಥಕ್ ಮತ್ತು ಸಮಕಾಲೀನ ನೃತ್ಯದಲ್ಲಿ ಸಾಧನೆಗೆ ನರ್ತಕಿ ಮತ್ತು ಶಿಕ್ಷಕಿ ಅದಿತಿ ಮಂಗಲದಾಸ್; ಮತ್ತು ಕಾನೂನು ವ್ಯವಹಾರಗಳಿಗೆ ನೀಡಿದ ಕೊಡುಗೆಗಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಸೋನಿಯಾ ಮಾಥುರ್ ಅವರನ್ನು ಸಹ ಸನ್ಮಾನಿಸಲಾಯಿತು.
ಉದ್ಯಮ ಕ್ಷೇತ್ರದಲ್ಲಿನ ಸಾಧನೆಗೆ ರುಕಮ್ ಕ್ಯಾಪಿಟಲ್‌ನ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ಪಾಲುದಾರೆ ಅರ್ಚನಾ ಜಹಗೀರ್ದಾರ್; ಎವರೆಸ್ಟ್ ಪರ್ವತಾರೋಹಿ ಅನಿತಾ ಕುಂಡು; ಭಾರತದ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದಕ್ಕಾಗಿ ಯುವರ್‌ಸ್ಟೋರಿಯ ಸಂಸ್ಥಾಪಕಿ ಮತ್ತು CEO ಶ್ರದ್ಧಾ ಶರ್ಮಾ; ಭಾರತೀಯ ಇತಿಹಾಸ ಮತ್ತು ಧರ್ಮದ ಕುರಿತು ಮಾಡಿರುವ ಕೆಲಸಕ್ಕೆ ಸಂಸದೆ ಮೀನಾಕ್ಷಿ ಜೈನ್; ಫ್ಯಾಷನ್ ಡಿಸೈನರ್ ಮತ್ತು ಉದ್ಯಮಿ ರೀನಾ ಢಾಕಾ ಅವರ ಹೊಸ ಯುಗದ ಫ್ಯಾಷನ್ ವಿಧಾನಕ್ಕಾಗಿ; ಮತ್ತು ಭಾರತೀಯ ಯುವ ಶಕ್ತಿ ಟ್ರಸ್ಟ್‌ನ ಸಂಸ್ಥಾಪಕಿ ಲಕ್ಷ್ಮಿ ವಿ ವೆಂಕಟೇಶನ್, ಯುವಜನರೊಂದಿಗೆ ಅವರ ಸ್ಪೂರ್ತಿದಾಯಕ ಕೆಲಸಕ್ಕಾಗಿ ಸಹ ಸನ್ಮಾನಿಸಲಾಯಿತು.

