ತಿರುವನಂತಪುರಂ: ನಾಲ್ಕು ದಶಕಗಳಿಂದ ಎಡ ಪಕ್ಷಗಳ ಭದ್ರಕೋಟೆಯಾಗಿದ್ದ ತಿರುವನಂತಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ, ರಾಜ್ಯದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಹೊಂದಿರುವ ಆರ್. ಶ್ರೀಲೇಖಾ ಅವರ ಹೆಸರು ಮೇಯರ್ ಸ್ಥಾನಕ್ಕೆ ಮುಂಚೂಣಿಯಲ್ಲಿದೆ.
ಪಾಲಿಕೆ ಚುನಾವಣೆಗೆ ಇದೇ ವಾರ ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಇಂದು (ಶನಿವಾರ) ಮತ ಎಣಿಕೆಯಾಗಿದೆ.
ಶಾಸ್ತಮಂಗಲಂ ವಾರ್ಡ್‌ನಿಂದ ಗೆದ್ದಿರುವ ಶ್ರೀಲೇಖಾ ಅವರನ್ನು, ಮೇಯರ್ ಸ್ಥಾನಕ್ಕೆ ಎನ್‌ಡಿಎ ಬಣದ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಬಿಜೆಪಿ ಗೆಲುವಿಗೆ ಅದರಿಂದ ನೆರವಾಗಿದೆ ಎನ್ನಲಾಗುತ್ತಿದೆ.
ಫಲಿತಾಂಶದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಶ್ರೀಲೇಖಾ, ಮತದಾರರಿಗೆ ಧನ್ಯವಾದ ಹೇಳಿದ್ದಾರೆ.
'ಶಾಸ್ತಮಂಗಲಂ ವಾರ್ಡ್‌ನಲ್ಲಿ ಈ ಹಿಂದೆ ಸ್ಪರ್ಧಿಸಿದ್ದ ಯಾವೊಬ್ಬ ಅಭ್ಯರ್ಥಿಯೂ ಇಷ್ಟು ಅಂತರದಿಂದ ಗೆದ್ದಿರಲಿಲ್ಲ ಎಂಬುದು ಈಗಷ್ಟೇ ತಿಳಿಯಿತು. ಇಂತಹ ತೀರ್ಪು ನೀಡಿದ್ದಕ್ಕಾಗಿ ಜನರಿಗೆ ಧನ್ಯವಾದ ಹೇಳುತ್ತೇನೆ' ಎಂದಿದ್ದಾರೆ.
ಮೇಯರ್ ಆಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ಅದನ್ನು ಪಕ್ಷ ನಿರ್ಧರಿಸುತ್ತದೆ ಎಂದಿದ್ದಾರೆ. ಅವರೇನಾದರೂ ಮೇಯರ್ ಆಗಿ ಆಯ್ಕೆಯಾದರೆ, ಬಿಜೆಪಿ ವತಿಯಿಂದ ತಿರುವನಂತಪುರ ಪಾಲಿಕೆಗೆ ಮೇಯರ್ ಆದ ಮೊದಲಿಗರೆಂಬ ಶ್ರೇಯವೂ ಅವರದ್ದಾಗುತ್ತದೆ.
ಪಾಲಿಕೆಯ 101 ವಾರ್ಡ್‌ಗಳ ಪೈಕಿ ಬಿಜೆಪಿ 50ರಲ್ಲಿ ಗೆದ್ದಿದೆ. ಎಲ್‌ಡಿಎಫ್ 29 ಕಡೆ ಮತ್ತು ಯುಡಿಎಫ್ 19 ಸ್ಥಾನಗಳಲ್ಲಿ ಜಯ ಗಳಿಸಿವೆ. ಎರಡು ಕಡೆ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಮತ್ತೊಂದು ಕ್ಷೇತ್ರದ ಫಲಿತಾಂಶ ಇನ್ನಷ್ಟೇ ಬರಬೇಕಿದೆ ಎಂದು ವರದಿಯಾಗಿದೆ.
ಶ್ರೀಲೇಖಾ ಸಾಧನೆ
ತಿರುವನಂತಪುರದಲ್ಲಿ 1960ರ ಡಿಸೆಂಬರ್ 5ರಂದು ಜನಿಸಿದ ಶ್ರೀಲೇಖಾ, 1987ರ ಬ್ಯಾಚ್‌ನ ಐಎಎಸ್ ಅಧಿಕಾರಿ.
ಮೂರು ದಶಕಗಳ ಅವರ ವೃತ್ತಿ ಬದುಕಿನಲ್ಲಿ, ಸಿಬಿಐ, ಕೇರಳ ಅಪರಾಧ ವಿಭಾಗ, ವಿಚಕ್ಷಣ ದಳ, ಅಗ್ನಿಶಾಮಕ ದಳ, ಮೋಟಾರ್ ವಾಹನ ಇಲಾಖೆ, ಬಂಧೀಖಾನೆ ಇಲಾಖೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ಘಟಕಗಳಲ್ಲಿ ಕೆಲಸ ಮಾಡಿದ್ದಾರೆ.
2017ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿಯಾಗಿ ನೇಮಕಗೊಳ್ಳುವ ಮೂಲಕ, ಈ ಹುದ್ದೆಗೇರಿದ ರಾಜ್ಯದ ಮೊದಲ ಮಹಿಳೆ ಎನಿಸಿದ್ದರು.
2020ರ ಡಿಸೆಂಬರ್‌ನಲ್ಲಿ ನಿವೃತ್ತರಾದನಂತರವೂ ಅವರು ಸುದ್ದಿಯಲ್ಲಿದ್ದಾರೆ. 2017ರ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಸಿಲುಕಿಸಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದರು.
ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿರುವ ರಾಹುಲ್ ಮಮ್‌ಕೂತಥಿಲ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗಿದೆ ಎಂದು ಆರೋಪಿಸಿದ್ದರು.
2024ರ ಅಕ್ಟೋಬರ್‌ನಲ್ಲಿ ಬಿಜೆಪಿ ಸೇರಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರೇ ತಮಗೆ ಸ್ಫೂರ್ತಿ ಎಂದಿದ್ದರು.
ಪೊಲೀಸ್ ಅಧಿಕಾರಿಯಾಗಿ ವೃತ್ತಿ ಆರಂಭಿಸಿದ ಬಳಿಕ ತಮ್ಮಲ್ಲಿ ಯಾವುದೇ ರಾಜಕೀಯ ಆಲೋಚನೆಗಳು ಇರಲಿಲ್ಲ. ಎಂದೂ ರಾಜಕೀಯ ಪಕ್ಷಪಾತ ಮಾಡಿಲ್ಲ ಎಂದು ಹೇಳಿಕೊಂಡಿದ್ದರು.

