ಕೋಲ್ಕತ್ತಾ: ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ನಡೆಸುತ್ತಿದೆ.
ಕರಡು ಮತದಾರರ ಪಟ್ಟಿ ಪ್ರಕಟಿಸುವ ಕೆಲವೇ ಗಂಟೆಗಳ ಮೊದಲು, ಚುನಾವಣಾ ಆಯೋಗ ಮಂಗಳವಾರ ಬೆಳಗ್ಗೆ ತನ್ನ ವೆಬ್‌ಸೈಟ್‌ನಲ್ಲಿ ಡಿಲೀಟ್ ಮಾಡಲಾದ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ 2025 ರಲ್ಲಿ ರಾಜ್ಯದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲ್ಪಟ್ಟಿದ್ದರೂ 2026ರ ಕರಡು ಪಟ್ಟಿಯಿಂದ ಡಿಲೀಟ್ ಆದ ಮತದಾರರಿದ್ದಾರೆ. ಪಟ್ಟಿಯು ಪ್ರಸ್ತುತ ಆಯೋಗದ ಪೋರ್ಟಲ್ ಲಿಂಕ್ ceowestbengal.wb.gov.in/asd_sir ನಲ್ಲಿ ಲಭ್ಯವಿದೆ.
ಆಯೋಗದ ಮೂಲಗಳ ಪ್ರಕಾರ, "ಸಂಗ್ರಹಿಸಲಾಗದ SIR ಎಣಿಕೆ ನಮೂನೆಗಳ" ಸಂಖ್ಯೆ 58 ಲಕ್ಷ ಮೀರಿದ್ದು, ಅವರು ನೋಂದಾಯಿತ ವಿಳಾಸಗಳಲ್ಲಿ ಲಭ್ಯವಿಲ್ಲ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ, ಇಲ್ಲವೆ ಮೃತಪಟ್ಟಿರಬಹುದು ಅಥವಾ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ 'ನಕಲಿ' ಮತದಾರರೆಂದು ಗುರುತಿಸಲ್ಪಟ್ಟಿರುವ ಆಧಾರದ ಮೇಲೆ ಡಿಲೀಟ್ ಮಾಡಲಾಗಿದೆ.
"16/12/2025 ರಿಂದ 15/01/2026 ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಕರಡು ಪಟ್ಟಿಯನ್ನು ಪ್ರಕಟಿಸಿದ ನಂತರ, ಬಾಧಿತ ವ್ಯಕ್ತಿಗಳು ತಮ್ಮ ಹಕ್ಕುಗಳನ್ನು ನಮೂನೆ 6 ರಲ್ಲಿ ಘೋಷಣೆ ನಮೂನೆ ಮತ್ತು ಪೋಷಕ ದಾಖಲೆಗಳೊಂದಿಗೆ ಸಲ್ಲಿಸಬಹುದು" ಎಂದು ಆಯೋಗದ ವೆಬ್‌ಸೈಟ್ ತಿಳಿಸಿದೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ.

