1971ರ ಡಿ.16ರಂದು ಬಾಂಗ್ಲಾದೇಶ ಉದಯವಾದ (ಬಾಂಗ್ಲಾ ವಿಮೋಚನೆ) ದಿನವನ್ನು ವಿಜಯ ದಿವಸವನ್ನಾಗಿ ಆಚರಿಸಲಾಗುತ್ತಿದೆ. ಇದರ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ..
ಹಿನ್ನೆಲೆ
1971ರ ಬಾಂಗ್ಲಾದೇಶ ವಿಮೋಚನಾ ಹೋರಾಟವು ದಕ್ಷಿಣ ಏಷ್ಯಾದ ಇತಿಹಾಸದಲ್ಲಿಯೇ ಪ್ರಮುಖ ಘಟನೆ.
ಇದು ಬಂಗಾಳೀಯರು ತಮ್ಮ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸುದೀರ್ಘ ಹೋರಾಟ ಕಥನವಾಗಿದೆ.
ಬಾಂಗ್ಲಾ ವಿಮೋಚನಾ ಯುದ್ಧಕ್ಕಿಂತ ಮೊದಲು, ಈಗ ಬಾಂಗ್ಲಾದೇಶ ಎಂದು ಕರೆಯುವ ಪ್ರದೇಶವು ಪಾಕಿಸ್ತಾನದ ಭಾಗವಾಗಿತ್ತು. ಅದನ್ನು ಪೂರ್ವ ಪಾಕಿಸ್ತಾನವೆಂದು ಕರೆಯಲಾಗುತ್ತಿತ್ತು. 1970ರಲ್ಲಿ ನಡೆದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನೆಲೆಯಾಗಿದ್ದ ಶೇಕ್ ಮುಜೀಬರ್ ರಹಮಾನರ ನೇತೃತ್ವದ ಅವಾಮಿ ಲೀಗ್ ಸ್ಪಷ್ಟ ಬಹುಮತ ಪಡೆಯಿತು. ಆದರೆ ಸೇನೆಯ ಮೇಲೆ ಹಿಡಿತ ಹೊಂದಿದ್ದ ಪಾಕಿಸ್ತಾನವು, ಅವಾಮಿ ಲೀಗ್ ಅಧಿಕಾರ ಸ್ವೀಕರಿಸುವುದನ್ನು ಹತ್ತಿಕ್ಕಲು ಢಾಕಾದಲ್ಲಿ 'ಆಪರೇಷನ್ ಸರ್ಚ್‌ಲೈಟ್' ಹೆಸರಿನಲ್ಲಿ ನರಮೇಧ ನಡೆಸಿತು. ಢಾಕಾ ವಿಶ್ವವಿದ್ಯಾಲಯದ ಬುದ್ಧಿಜೀವಿಗಳನ್ನು ಚಿಂತ್ರಹಿಂಸೆ ನೀಡಿ ಕೊಲ್ಲಲಾಯಿತು.
1971ರ ಮಾರ್ಚ್ 25ರಂದು ಪೂರ್ವ ಪಾಕಿಸ್ತಾನವನ್ನು ಸ್ವತಂತ್ರ, ಸಾರ್ವಭೌಮ ಬಾಂಗ್ಲಾದೇಶ ಎಂದು ಘೋಷಿಸಲಾಯಿತು. ಇದರ ವಿರುದ್ಧ ಪಾಕಿಸ್ತಾನವು ಬಾಂಗ್ಲಾದೇಶದಲ್ಲಿ ಇತಿಹಾಸದಲ್ಲಿ ಕೇಳರಿಯದಂತಹ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ ಆರಂಭಿಸಿತು.
ಆ ಅವಧಿಯಲ್ಲಿ 10 ಲಕ್ಷದಷ್ಟು ಬಂಗಾಳಿಗಳು ಜೀವ ಉಳಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ವಲಸೆ ಬಂದರು. ಬಾಂಗ್ಲಾದೇಶದ ಜನರು ದೇಶದ ರಕ್ಷಣೆಗಾಗಿ ಪಾಕಿಸ್ತಾನ ಸೇನೆಯ ವಿರುದ್ಧ ಹೋರಾಡಲು ಸಂಘಟಿತರಾದರು. ಈ ಹೋರಾಟಕ್ಕೆ ಭಾರತವು ಎಲ್ಲಾ ರೀತಿಯ ನೆರವು ನೀಡಿತ್ತು.
ಬಾಂಗ್ಲಾ ವಿಮೋಚನಾ ಯುದ್ಧದ ತುರ್ತು ಸಂದರ್ಭವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಅತ್ಯಂತ ಚಾಣಾಕ್ಷತನ ಮತ್ತು ರಾಜತಾಂತ್ರಿಕ ನೈಪುಣ್ಯದಿಂದ ನಿರ್ವಹಿಸಿದರು.
ಪಾಕಿಸ್ತಾನವು ಡಿಸೆಂಬರ್ 3ರಂದು ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಿತು. ತಕ್ಷಣವೇ ಎಚ್ಚೆತ್ತ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ದಾಳಿ ಆರಂಭಿಸಿತು. ನೌಕಾಪಡೆ ಮತ್ತು ವಾಯುಪಡೆಗಳೂ ಬಾಂಗ್ಲಾ ವಿಮೋಚನೆಗಾಗಿ ಕಾರ್ಯಾಚರಣೆ ಆರಂಭಿಸಿದವು. ಇದರ ಬೆನ್ನಲ್ಲೇ ಸೋಲೊಪ್ಪಿಕೊಂಡ ಪಾಕಿಸ್ತಾನ ಸೇನೆಯು ಡಿಸೆಂಬರ್ 16ರಂದು ಭಾರತೀಯ ಸೇನೆಗೆ ಶರಣಾಯಿತು.
ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಅವರು 93,000 ಸೈನಿಕರೊಂದಿಗೆ ಭಾರತೀಯ ಸೇನೆಗೆ ಶರಣಾದರು. ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಎದುರು ನಿಯಾಜಿ ಶರಣಾಗತಿ ಪತ್ರಕ್ಕೆ ಸಹಿ ಹಾಕಿದರು.
1972ರಲ್ಲಿ ನಡೆದ ಶಿಮ್ಲಾ ಒಪ್ಪಂದದಲ್ಲಿ ಪಾಕಿಸ್ತಾನವು, ಬಾಂಗ್ಲಾದೇಶವನ್ನು ಸ್ವತಂತ್ರ ದೇಶವೆಂದು ಮಾನ್ಯ ಮಾಡಿತು. ಭಾರತಕ್ಕೆ ಶರಣಾಗಿದ್ದ ಪಾಕಿಸ್ತಾನ ಸೇನೆಯ ಸಾವಿರಾರು ಯುದ್ಧ ಕೈದಿಗಳನ್ನು ನಂತರದ ಐದು ತಿಂಗಳಲ್ಲಿ ಬಿಡುಗಡೆ ಮಾಡಲಾಯಿತು. ಯುದ್ಧ ಕೈದಿಗಳನ್ನು ಬಿಡುಗಡೆ ಮಾಡುವಲ್ಲಿ ಭಾರತ ಉದಾರವಾಗಿ ನಡೆದುಕೊಂಡಿತೆಂಬ ಟೀಕೆ ವ್ಯಕ್ತವಾದರೂ, ಗೆದ್ದವರು ಯಾವಾಗಲೂ ಉದಾರವಾಗಿ ಇರಬೇಕೆಂಬ ತತ್ವವನ್ನು ಇಂದಿರಾ ಗಾಂಧಿ ಅವರು ಜಗತ್ತಿಗೆ ಸಾರಿದರು.
ಬಾಂಗ್ಲಾ ವಿಮೋಚನೆಯ ಹಾದಿ
1947: ಭಾರತದಲ್ಲಿ ಬ್ರಿಟಿಷರ ಅಧಿಪತ್ಯ ಅಂತ್ಯವಾಗಿ, ದೇಶವು ವಿಭಜನೆಯಾಯಿತು. ಬಹುಸಂಖ್ಯಾತ ಮುಸ್ಲಿಮರಿಂದ ಕೂಡಿದ 'ಪಾಕಿಸ್ತಾನ' ಉದಯವಾಯಿತು
1949: ಪಶ್ಚಿಮ ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ಪೂರ್ವ ಪಾಕಿಸ್ತಾನವನ್ನು ಅಸ್ತಿತ್ವಕ್ಕೆ ತರುವ ಉದ್ದೇಶದಿಂದ 'ಅವಾಮಿ ಲೀಗ್ ಸಂಘಟನೆ' ಹುಟ್ಟಿಕೊಂಡಿತು
1970: ಪೂರ್ವ ಪಾಕಿಸ್ತಾನದಲ್ಲಿ ನಡೆದ ಚುನಾವಣೆಗಳಲ್ಲಿ ಅವಾಮಿ ಲೀಗ್ ಪ್ರಚಂಡ ಜಯಭೇರಿ ಬಾರಿಸಿತು. ಆದರೆ ಫಲಿತಾಂಶವನ್ನು ಒಪ್ಪಲು ಪಶ್ಚಿಮ ಪಾಕಿಸ್ತಾನ ಸಿದ್ಧವಿರಲಿಲ್ಲ. ಇದು ಗಲಭೆಗೆ ಕಾರಣವಾಯಿತು. ಈ ವೇಳೆ ಅಪ್ಪಳಿಸಿದ ದೊಡ್ಡ ಚಂಡಮಾರುತವು ಈ ಭಾಗದ 5 ಲಕ್ಷ ಜನರನ್ನು ಬಲಿ ಪಡೆಯಿತು
1971: ಸ್ವತಂತ್ರ 'ಬಾಂಗ್ಲಾದೇಶ' ಉದಯವನ್ನು ಅವಾಮಿ ಲೀಗ್ ಘೋಷಿಸಿತು. ಆದರೆ ಇದಕ್ಕೆ ಪಶ್ಚಿಮ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿತು. ಆದರೆ ಭಾರತದ ಸೇನಾ ಸಹಕಾರದೊಂದಿಗೆ ನಡೆದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸೋಲಾಯಿತು. ಈ ಯುದ್ಧದಲ್ಲಿ ಭಾರತದ ಬಲಿಷ್ಠ ಸೇನಾ ಸಾಮರ್ಥ್ಯ ಅನಾವರಣಗೊಂಡಿತು
1972: ಶೇಕ್ ಮುಜೀಬರ್ ರಹಮಾನ್ ಅವರು ದೇಶದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಪ್ರಮುಖ ಉದ್ದಿಮೆಗಳನ್ನು ಅವರು ರಾಷ್ಟ್ರೀಕರಣ ಮಾಡಿದರು ಆದರೆ,1975ರಲ್ಲಿ ನಡೆದ ಸೇನಾ ದಂಗೆಯಲ್ಲಿ ಅವರ ಹತ್ಯೆಯಾಯಿತು
ಹೋರಾಟಕ್ಕೆ ಕಾರಣಗಳು
ರಾಜಕೀಯ ನಾಯಕರ ಅಸಡ್ಡೆ: ಪಶ್ಚಿಮ ಪಾಕಿಸ್ತಾನದ ರಾಜಕೀಯ ನಾಯಕರು ಪೂರ್ವ ಪಾಕಿಸ್ತಾನದ ಬಗ್ಗೆ ಗಮನ ಹರಿಸುವುದಿಲ್ಲ ಎಂಬ ಅಸಮಾಧಾನ.
ಆರ್ಥಿಕ ಶೋಷಣೆ: ಪಶ್ಚಿಮ ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಪೂರ್ವ ಪಾಕಿಸ್ತಾನದ ಆರ್ಥಿಕ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಬರಿದು ಆಗಿ, ವ್ಯಾಪಕ ಬಡತನಕ್ಕೆ ಕಾರಣವಾಯಿತು.
ಭಾಷಾ ಆಂದೋಲನ: ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿ ಭಾಷೆ ಚಾಲ್ತಿಯಲ್ಲಿದ್ದರೆ ಪಶ್ಚಿಮ ಪಾಕಿಸ್ಥಾನದಲ್ಲಿ ಉರ್ದು ಭಾಷೆ ಚಾಲ್ತಿಯಲ್ಲಿತ್ತು. ಉರ್ದು ಭಾಷಿಗರು ಬಂಗಾಳಿ ಭಾಷೆಗೆ ಮನ್ನಣೆ ನೀಡುತ್ತಿರಲಿಲ್ಲ. 1952ರಲ್ಲಿ ಭಾಷಾ ಚಳವಳಿ ನಡೆದು ಇದರಲ್ಲಿ ಬಂಗಾಳಿಗಳು ತಮ್ಮ ಭಾಷೆಯಾದ ಬಂಗಾಳಿಗೆ ಪಾಕಿಸ್ತಾನದ ಅಧಿಕೃತ ಭಾಷೆ ಎಂಬ ಮನ್ನಣೆ ನೀಡಬೇಕೆಂದು ಹೋರಾಡಿದರು.
ಅವಾಮಿ ಲೀಗ್ ಮತ್ತು ಸಿಕ್ಸ್-ಪಾಯಿಂಟ್ ಚಳವಳಿ: ಶೇಖ್ ಮುಜಿಬುರ್ ರೆಹಮಾನ್ ನೇತೃತ್ವದ ಅವಾಮಿ ಲೀಗ್, ಪೂರ್ವ ಪಾಕಿಸ್ತಾನಕ್ಕೆ ಹೆಚ್ಚಿನ ಸ್ವಾಯತ್ತತೆ ಮತ್ತು ಸಿಕ್ಸ್-ಪಾಯಿಂಟ್(ಆರು ಅಂಶಗಳ) ಚಳುವಳಿಯ ಅನುಷ್ಠಾನಕ್ಕೆ ಒತ್ತಾಯಿಸಿತು.
ಆಪರೇಷನ್ ಸರ್ಚ್‌ಲೈಟ್: ಯುದ್ಧಕ್ಕೆ ತಕ್ಷಣದ ಕಾರಣ ಆಪರೇಷನ್ ಸರ್ಚ್‌ಲೈಟ್. ಇದು ಮಾರ್ಚ್ 25, 1971ರಂದು ಪಾಕಿಸ್ತಾನಿ ಮಿಲಿಟರಿಯಿಂದ ನಡೆಸಲಾದ ಮಿಲಿಟರಿ ಕಾರ್ಯಾಚರಣೆಗೆ ಇಟ್ಟ ಹೆಸರು. ಇದು ಪೂರ್ವ ಪಾಕಿಸ್ತಾನದಲ್ಲಿ ಸ್ವಾಯತ್ತತೆಯ ಬೇಡಿಕೆಗಳ ಬಗ್ಗೆ ನಡೆಯುತ್ತಿರುವ ಹೋರಾಟಗಳನ್ನು ನಿಗ್ರಹಿಸುವ ಗುರಿ ಇತ್ತು. ಅನೇಕ ಸಾಮಾನ್ಯ ನಾಗರಿಕರ ಹತ್ಯೆ, ಬುದ್ಧಿಜೀವಿಗಳನ್ನು ಗುರಿಯಾಗಿಸಿದ ಹತ್ಯಾಕಾಂಡಗಳು ನಡೆದವು.
ಯುದ್ಧದ ಪ್ರಮುಖ ಘಟನೆಗಳು
ಸ್ವಾತಂತ್ರ್ಯದ ಘೋಷಣೆ: ಮಾರ್ಚ್ 26, 1971ರಂದು, ಶೇಖ್ ಮುಜಿಬುರ್ ರೆಹಮಾನ್ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಘೋಷಿಸಿದ್ದು ಇದಕ್ಕೆ ಬಂಗಾಳೀಯರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಭಾರತದ ಒಳಗೊಳ್ಳುವಿಕೆ : ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಭಾರತವು ಬಾಂಗ್ಲಾದೇಶದ ಪಡೆಗಳಿಗೆ ಬೆಂಬಲವನ್ನು ನೀಡಿತು. ಅಂತಿಮವಾಗಿ ಡಿಸೆಂಬರ್ 1971ರಲ್ಲಿ ಭಾರತದ ಮಿಲಿಟರಿಶಕ್ತಿಯು ನೇರವಾಗಿ ಮಧ್ಯಪ್ರವೇಶಿಸಿತು. ಇದು ಯುದ್ಧದಲ್ಲಿ ನಿರ್ಣಾಯಕ ತಿರುವಿಗೆ ಕಾರಣವಾಯಿತು.
ಪಾಕಿಸ್ತಾನಿ ಪಡೆಗಳ ಶರಣಾಗತಿ: ಡಿಸೆಂಬರ್ 16, 1971 ರಂದು, ಪಾಕಿಸ್ತಾನಿ ಮಿಲಿಟರಿಯು ಢಾಕಾದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಪಡೆಗಳಿಗೆ ಶರಣಾಗುವುದರೊಂದಿಗೆ ಯುದ್ಧ ಅಂತ್ಯಗೊಂಡಿತು . ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಯಿತು.
ಪರಿಣಾಮಗಳು
ಅಪಾರ ಜೀವಹಾನಿ: ಯುದ್ಧದಿಂದ ಅಂದಾಜು 3 ಲಕ್ಷದಿಂದ 30 ಲಕ್ಷ ಸಾವು-ನೋವುಗಳು ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಪಾಕಿಸ್ತಾನಿ ಮಿಲಿಟರಿಯ ದೌರ್ಜನ್ಯ ಎಲ್ಲೆ ಮೀರಿತು.
ರಾಜಕೀಯ ಬದಲಾವಣೆಗಳು: ಬಾಂಗ್ಲಾದೇಶ ಸಂಸದೀಯ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿತು ಮತ್ತು ರಾಷ್ಟ್ರದ ಪುನರ್‌ನಿರ್ಮಾಣ ಮತ್ತು ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಎದುರಿಸಲು ಉತ್ತಮ ನೀತಿಗಳನ್ನು ಅನುಸರಿಸಿತು.

