ಮುಂಬೈ: ತಮ್ಮ ವಿರುದ್ಧ ವಂಚನೆ ಆರೋಪ ಮಾಡಿದ್ದ ನಟ, ನಿರ್ಮಾಪಕ ವಿದ್ಯಾನ್ ಮಾನೆ ವಿರುದ್ಧ ಸಂಗೀತ ಸಂಯೋಜಕ, ಗಾಯಕ ಪಲಾಶ್ ಮುಚ್ಛಲ್ ಅವರು ₹ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ಪಲಾಶ್, 'ನನ್ನ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು, ಅತಿರೇಕ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿರುವ ಸಾಂಗ್ಲಿ ಮೂಲದ ವಿದ್ಯಾನ್ ಮಾನೆ ಅವರಿಗೆ, ನನ್ನ ವಕೀಲ ಶ್ರೇಯನ್ಶ್ ಮಿಥಾರೆ ಅವರು ₹ 10 ಕೋಟಿ ಮಾನನಷ್ಟ ಮೊಕದ್ದಮೆ ಸಂಬಂಧ ಲೀಗಲ್ ನೋಟಿಸ್ ಕಳುಹಿಸಿದ್ದಾರೆ' ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಸಾಂಗ್ಲಿ ಜಿಲ್ಲಾ ಪೊಲೀಸರನ್ನು ಸಂಪರ್ಕಿಸಿದ್ದ ಮಾನೆ, ಗಾಯಕ ಪಲಾಶ್ ಅವರಿಂದ ₹ 40 ಲಕ್ಷ ವಂಚನೆಗೊಳಗಾಗಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದರು. ಈ ಕುರಿತು ಪೊಲೀಸರೇ ಮಾಹಿತಿ ನೀಡಿದ್ದರು.
ಪಲಾಶ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಾಂಗ್ಲಿಯ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಮಾನೆ ಮಂಗಳವಾರ (ಜ.20) ಭೇಟಿಯಾಗಿದ್ದರು.
ಪಲಾಶ್ ಅವರು ಸಾಂಗ್ಲಿಯಲ್ಲಿ 2023ರ ಡಿಸೆಂಬರ್ 5ರಂದು ತಮ್ಮನ್ನು ಭೇಟಿಯಾಗಿದ್ದರು. ಅವರ 'ನಝಾರಿಯಾ' ಸಿನಿಮಾಗೆ ಬಂಡವಾಳ ಹಾಕುವಂತೆ ಕೇಳಿದ್ದರು. ಸಿನಿಮಾದಲ್ಲಿ ಪಾತ್ರ ನೀಡುವುದಾಗಿಯೂ ಹೇಳಿದ್ದರು. ಅದರಂತೆ, ₹ 40 ಲಕ್ಷ ಹೂಡಿಕೆ ಮಾಡಿದ್ದೆ. ಆದಾಗ್ಯೂ, ಸಿನಿಮಾ ಪೂರ್ಣಗೊಳ್ಳಲಿಲ್ಲ. ಹೀಗಾಗಿ, ಹಣ ವಾಪಸ್ ಮಾಡುವಂತೆ ಕೋರಿದ್ದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮಾನೆ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಇದೇ ವಿಚಾರವಾಗಿ ಪಲಾಶ್ ಅವರು, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

