ಕೊಲಂಬೊ: ತನ್ನ ಜಲ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಭಾರತದ 11 ಮೀನುಗಾರರನ್ನು ಬಂಧಿಸಿದ್ದು, ಅವರ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.
ಉತ್ತರ ಪ್ರಾಂತ್ಯದ ಕಂಕೆಸಂತುರೈನ ಉತ್ತರ ಭಾಗದಲ್ಲಿ ಗುರುವಾರ ತಡರಾತ್ರಿ ಮೀನುಗಾರರನ್ನು ಬಂಧಿಸಲಾಗಿದೆ ಎಂದು ನೌಕಾಪಡೆಯ ವಕ್ತಾರ ಬುದ್ಧಿಕಾ ಸಂಪತ್ ಶುಕ್ರವಾರ ತಿಳಿಸಿದ್ದಾರೆ.
'ನಮ್ಮ ಜಲ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರು. ಅಲ್ಲಿಂದ ಹೋಗುವಂತೆ ಎಚ್ಚರಿಕೆ ನೀಡಿದರೂ, ಅದನ್ನು ಲೆಕ್ಕಿಸದೆ ಮೀನುಗಾರಿಕೆ ನಡೆಸಿದ್ದರಿಂದ ಬಂಧಿಸಲಾಗಿದೆ. ಮುಂದಿನ ಕ್ರಮಕ್ಕಾಗಿ ಮೈಲಾಡಿಯಲ್ಲಿರುವ ನಿರೀಕ್ಷಣಾ ಕಚೇರಿಗೆ ಕರೆತರಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.

