ರಾಯ್ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ರವಿವಾರ ನಡೆಸಲಾದ ನಕ್ಸಲ್ ನಿಗ್ರಹ ಕಾರ್ಯಾಚರಣೆಯ ವೇಳೆ ಆರು ಸ್ಫೋಟಗಳು ಸಂಭವಿಸಿ 11 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
''ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಚಿಕಿತ್ಸೆಗೆ ರಾಯ್ಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಒಯ್ಯಲಾಗಿದೆ.
ಅವರ ಸ್ಥಿತಿ ಸ್ಥಿರವಾಗಿದೆ ಹಾಗೂ ಅವರು ಚೇತರಿಸಿಕೊಳ್ಳುತ್ತಿದ್ದಾರೆ'' ಎಂದು ಇನ್‌ಸ್ಪೆಕ್ಟರ್ ಜನರಲ್ ಸುಂದರ್‌ರಾಜ್ ಪಿ. ಹೇಳಿದರು.
ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿರುವ ಕರೆಗುಟ್ಟ ಸಮೀಪದ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಇದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಬಾಂಬ್‌ಗಳು ಸ್ಫೋಟಗೊಂಡಿವೆ. ಆ ಪ್ರದೇಶವನ್ನು ಮಾವೋವಾದಿಗಳ ಸಶಸ್ತ್ರ ಘಟಕ 'ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ'ಯ ಮೊದಲ ಬೆಟಾಲಿಯನ್‌ನ ಭದ್ರಕೋಟೆ ಎಂದು ಭಾವಿಸಲಾಗಿದೆ.
ಸ್ಫೋಟಗಳು ವಿವಿಧ ಹಂತಗಳಲ್ಲಿ ಸಂಭವಿಸಿವೆ. ಮೂವರು ಭದ್ರತಾ ಸಿಬ್ಬಂದಿಗೆ ಕಾಲುಗಳಲ್ಲಿ ತೀವ್ರ ಗಾಯಗಳಾಗಿವೆ. ಇತರ ಮೂವರಿಗೆ ಕಣ್ಣಿನ ಗಾಯಗಳಾಗಿವೆ.
ರಾಜ್ಯದಲ್ಲಿ ಈ ವರ್ಷ ನಡೆಸಲಾಗಿರುವ ಮಾವೋ ನಿಗ್ರಹ ಕಾರ್ಯಾಚರಣೆಯಲ್ಲಿ ಒಟ್ಟು 20 ಮಾವೋವಾದಿಗಳು ಹತರಾಗಿದ್ದಾರೆ.

