ಬದಿಯಡ್ಕ: 12 ವರ್ಷಗಳಿಂದ ಆಧಾರ್ ಕಾರ್ಡ್ ಪಡೆಯಬೇಕೆಂದು ವಿವಿಧ ಅಕ್ಷಯ ಕೇಂದ್ರಗಳನ್ನು ಸುತ್ತಿದರೂ ಅಸೌಖ್ಯದಲ್ಲಿರುವ ಪತ್ನಿಗೆ ಆಧಾರ್ ಕಾರ್ಡ್ ದೊರಕಿಸಿಕೊಡುವಲ್ಲಿ ನೀರ್ಚಾಲು ಸಮೀಪದ ಕುಂಟಿಕಾನ ಮಾಳಿಗೆ ಮನೆಯ 75 ವರ್ಷ ಪ್ರಾಯದ ಕೃಷಿಕ ಶ್ರೀಕೃಷ್ಣ ಭಟ್ಟರಿಗೆ ಸಾಧ್ಯವಾಗಲೇ ಇಲ್ಲ. 68 ವರ್ಷದ ಪತ್ನಿ ಹೇಮಾವತಿ ಅವರಿಗೆ ಒಂದು ಕಣ್ಣು ಪೂರ್ಣವಾಗಿ ಮುಚ್ಚಿಹೋಗಿದ್ದು ಮತ್ತೊಂದು ಕಣ್ಣಿಗೆ ದೃಷ್ಟಿದೋಷವಿದೆ. ಕೈಬೆರಳುಗಳ ರೇಖೆಗಳೂ ಮಾಸಿಹೋದ ಕಾರಣವೋ ಏನೋ ಅವರ ಬೆರಳಚ್ಚನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಗಳಿಂದಾಗಿ ಅವರ ಆಧಾರ್ ಅರ್ಜಿ ಪದೇಪದೇ ತಿರಸ್ಕರಿಸಲ್ಪಡುತ್ತಿತ್ತು. ಸೀತಾಂಗೋಳಿ, ನೀರ್ಚಾಲು, ಕೊಲ್ಲಂಗಾನ ಮೊದಲಾದೆಡೆಗಳಲ್ಲಿ ಅಕ್ಷಯ ಕೇಂದ್ರಗಳನ್ನು ಸಂಪರ್ಕಿಸಿದಾಗಲೂ ಒಂದೇ ಉತ್ತರ ಇವರಿಗೆ ಲಭಿಸುತ್ತಿತ್ತು. ಇವರಿಗೆ ಯಾವುದೇ ಪಿಂಚಣಿಯಾಗಲಿ, ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಾರ್ಡ್ ಅಡ್ಡಿಬರುತ್ತಿತ್ತು.
ಈ ವಿಚಾರವನ್ನು ತಿಳಿದ ಬದಿಯಡ್ಕದ ಶಾಲೆಯೊಂದರ ಅಧ್ಯಾಪಕರು ತಮ್ಮ ಮಾಧ್ಯಮಗಳ ಮೂಲಕ ಗಮನ ಸೆಳೆದಿದ್ದರು. ಇದನ್ನು ಗಮನಿಸಿ ಆಧಾರ್ ರಾಜ್ಯ ಕಛೇರಿಯಿಂದ ಇವರನ್ನು ಸಂಪರ್ಕಿಸಿ ಆಧಾರ್ ಕಾರ್ಡ್ ನೊಂದಾವಣೆಗಿರುವ ತೊಂದರೆಗಳನ್ನು ನಿವಾರಿಸಿದರು.
ನಂತರ ತಿರುವನಂತಪುರದಿಂದ ಸಂಬಂಧಪಟ್ಟ ಅಧಿಕಾರಿಗಳು ಬದಿಯಡ್ಕ ಗ್ರಾಮಪಂಚಾಯಿತಿಯ ಸಂತ್ರಸನ್ನು ಸಂಪರ್ಕಿಸಿ ಆಧಾರ್ ಕಾರ್ಡ್‍ಗಿರುವ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿದರು. ಆಧಾರ್ ಕಾರ್ಡ್‍ನ್ನು ಹೇಮಾವತಿ ಅವರ ಮನೆಗೆ ತೆರಳಿ ನೀಡಲಾಯಿತು. ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ.ಡಿ. ಹಾಗೂ ನೀರ್ಚಾಲು ವಾರ್ಡು ಸದಸ್ಯ ಶ್ಯಾಮಪ್ರಸಾದ ಸರಳಿ ಆಧಾರ್ ಕಾರ್ಡ್ ಹಸ್ತಾಂತರಿಸಿದರು. ಗ್ರಾಮಪಂಚಾಯಿತಿ ಸದಸ್ಯ ಹರೀಶ ಎ., ಅಧ್ಯಾಪಕ ಉಣ್ಣಿಕೃಷ್ಣನ್, ಶಾಲಾ ಸಿಬ್ಬಂದಿಗಳಾದ ಕೃಷ್ಣ ಪೆರಡಾಲ, ಬಿಎಲ್‍ಒ ಯಜ್ಞೇಶ ಈಳಂತೋಡಿ ಮೊದಲಾದ ಉಪಸ್ಥಿತರಿದ್ದರು.
ಅಭಿಮತ:
1)
12 ವರ್ಷಗಳಿಂದ `ಆಧಾರ್‍ಕಾರ್ಡ್' ಎಂಬ ಆಧಾರವಿಲ್ಲದೆ ಸಂಕಷ್ಟಪಡುತ್ತಿದ್ದ ಕುಟುಂಬಕ್ಕೆ ಇಂದು ಸಮಾಧಾನವಿದೆ ಎಂಬುದು ಆ ಹಿರಿಯರ ಮಾತಿನಿಂದ ವ್ಯಕ್ತವಾಗುತ್ತದೆ. ಇದಕ್ಕಾಗಿ ಸಹಕರಿಸಿದ ಎಲ್ಲ ಅಧಿಕಾರಿ ವರ್ಗಕ್ಕೆ ಬದಿಯಡ್ಕ ಗ್ರಾಮಪಂಚಾಯಿತಿಯು ಆಭಾರಿಯಾಗಿದೆ.
- ಡಿ. ಶಂಕರ, ಅಧ್ಯಕ್ಷರು. ಬದಿಯಡ್ಕ ಗ್ರಾಮಪಂಚಾಯಿತಿ.
2)
ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವುದರೊಂದಿಗೆ ಸಾಮಾಜಿಕ ಕಳಕಳಿಯಿಂದ ಮಹತ್ತರವಾದ ಕಾರ್ಯವನ್ನೂ ಅಧ್ಯಾಪಕರು ಮಾಡುತ್ತಾರೆ ಎಂಬುದಕ್ಕೆ ಪೆರಡಾಲ ನವಜೀವನ ಶಾಲೆಯ ಅಧ್ಯಾಪಕ ಉಣ್ಣಿಕೃಷ್ಣನ್ ಅವರೇ ಸಾಕ್ಷಿ. ಹೇಮಾವತಿ ಅವರಿಗೆ ಆಧಾರ್ ಒದಗಿಸಿಕೊಡುವಲ್ಲಿ ಅವರ ಶ್ರಮ ಶ್ಲಾಘನೀಯ.
- ಶ್ಯಾಮಪ್ರಸಾದ ಸರಳಿ, ವಾರ್ಡು ಸದಸ್ಯರು ಬದಿಯಡ್ಕ ಗ್ರಾಮಪಂಚಾಯಿತಿ.

.jpg)
.jpg)
