HEALTH TIPS

14 ಸಾವಿರ ಹುದ್ದೆಗಳನ್ನು ಕಡಿತಗೊಳಿಸಲು ಮುಂದಾದ Amazon

ನವದೆಹಲಿ: ಇ-ಕಾಮರ್ಸ್ ದೈತ್ಯ ಅಮೆಝಾನ್ ಮತ್ತೊಂದು ಮಹತ್ವದ ಸುತ್ತಿನ ಉದ್ಯೋಗ ಕಡಿತಕ್ಕೆ ಸಿದ್ಧತೆ ನಡೆಸಿದ್ದು, ಮುಂದಿನ ವಾರದಿಂದ ಸುಮಾರು 14 ಸಾವಿರ ಕಾರ್ಪೊರೇಟ್ ಹುದ್ದೆಗಳನ್ನು ರದ್ದುಗೊಳಿಸಲು ಯೋಜಿಸಿದೆ. ಇದರಿಂದ ಕಂಪೆನಿಯ ಒಟ್ಟು ಉದ್ಯೋಗ ಕಡಿತ ಸಂಖ್ಯೆ ಸುಮಾರು 30 ಸಾವಿರಕ್ಕೆ ಏರಲಿದ್ದು, ಅಮೆಝಾನ್‌ನ ಮೂರು ದಶಕಗಳ ಇತಿಹಾಸದಲ್ಲೇ ಇದು ಅತಿದೊಡ್ಡ ವಜಾಗೊಳಿಸುವಿಕೆಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಅಕ್ಟೋಬರ್ 2025ರಲ್ಲಿ ನಡೆದ ಮೊದಲ ಸುತ್ತಿನಲ್ಲಿ ಅಮೆಝಾನ್ ಸುಮಾರು 14 ಸಾವಿರ ವೈಟ್-ಕಾಲರ್ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ನಡೆಯಲಿರುವ ಎರಡನೇ ಸುತ್ತು ಸಹ ಅದೇ ಪ್ರಮಾಣದಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಅಮೆಝಾನ್ ವೆಬ್ ಸರ್ವೀಸಸ್ (AWS), ಚಿಲ್ಲರೆ ಕಾರ್ಯಾಚರಣೆಗಳು, ಪ್ರೈಮ್ ವಿಡಿಯೋ ಹಾಗೂ ಮಾನವ ಸಂಪನ್ಮೂಲ ವಿಭಾಗ-ಆಂತರಿಕವಾಗಿ 'ಪೀಪಲ್ ಎಕ್ಸ್‌ಪೀರಿಯನ್ಸ್ ಅಂಡ್ ಟೆಕ್ನಾಲಜಿ' (PXT) ಎಂದು ಕರೆಯಲಾಗುವ ಘಟಕ-ಈ ವಜಾಗೊಳಿಸುವಿಕೆಯಿಂದ ಹೆಚ್ಚು 'ಕಡಿತ' ಎದುರಿಸುವ ಸಾಧ್ಯತೆ ಇದೆ.

'AI ಕಾರಣವಲ್ಲ, ಸಂಸ್ಕೃತಿಯೇ ಕಾರಣ'

ಆರಂಭದಲ್ಲಿ ಅಕ್ಟೋಬರ್‌ನಲ್ಲಿ ನಡೆದ ಉದ್ಯೋಗ ಕಡಿತಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ಉಂಟಾಗುವ ಬದಲಾವಣೆಗಳಿಗೆ ಸಂಬಂಧಿಸಿ ವಿವರಿಸಲಾಗಿತ್ತು. ಆದರೆ ನಂತರ ಮೂರನೇ ತ್ರೈಮಾಸಿಕದ ಆದಾಯ ಪರಿಶೀಲನೆ ವೇಳೆ ಅಮೆಝಾನ್ ಸಿಇಒ ಆಂಡಿ ಜಾಸ್ಸಿ ಸ್ಪಷ್ಟನೆ ನೀಡಿದ್ದು, "ಈ ನಿರ್ಧಾರ ಆರ್ಥಿಕ ಒತ್ತಡದಿಂದಲೂ ಅಲ್ಲ, AI ಕಾರಣದಿಂದಲೂ ಅಲ್ಲ. ಇದು ಸಂಸ್ಥೆಯ ಒಳಗಿನ ಸಂಸ್ಕೃತಿ ಮತ್ತು ಕಾರ್ಯಪದ್ಧತಿಯನ್ನು ಸರಳಗೊಳಿಸುವ ಪ್ರಯತ್ನ" ಎಂದು ಹೇಳಿದ್ದಾರೆ.

ಅತಿಯಾದ ಆಡಳಿತಾತ್ಮಕ ಪದರಗಳು, ನಿರ್ಧಾರ ಪ್ರಕ್ರಿಯೆಯ ಜಟಿಲತೆ, ವಿಸ್ತಾರ ಕಡಿಮೆ ಮಾಡುವ ಉದ್ದೇಶದಿಂದ ನಿರ್ವಹಣಾ ಹಂತಗಳನ್ನು ಕಡಿತಗೊಳಿಸಲಾಗುತ್ತಿದೆ. ಸ್ಟಾರ್ಟ್‌ಅಪ್‌ನಂತಹ ಚುರುಕುತನವನ್ನು ಮರಳಿ ತರುವುದೇ ಈ ಪುನರ್‌ರಚನೆಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಉತ್ತಮ ಕಾರ್ಯಕ್ಷಮತೆಯ ನಡುವೆಯೂ ಉದ್ಯೋಗ ಕಡಿತ

ಯೋಜಿತ ವಜಾಗೊಳಿಸುವಿಕೆಗಳು ಅಮೆಝಾನ್‌ನ ಸುಮಾರು 3.5 ಲಕ್ಷ ಕಾರ್ಪೊರೇಟ್ ಉದ್ಯೋಗಿಗಳಲ್ಲಿ ಶೇ.10ರಷ್ಟನ್ನು ಒಳಗೊಂಡಿವೆ. ಆದರೆ ಗೋಡೌನ್ ಮತ್ತು ವಿತರಣಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವವರನ್ನು ಸೇರಿಸಿ ಒಟ್ಟು 15.8 ಲಕ್ಷ ಉದ್ಯೋಗಿಗಳ ಸಂಖ್ಯೆಯಲ್ಲಿ ಇದು ಶೇ.2ಕ್ಕಿಂತಲೂ ಕಡಿಮೆ.

ಈ ಕುರಿತು PXT ವಿಭಾಗದ ಹಿರಿಯ ಉಪಾಧ್ಯಕ್ಷೆ ಬೆತ್ ಗ್ಯಾಲೆಟ್ಟಿ ಆಂತರಿಕ ಪತ್ರದಲ್ಲಿ, "ಕಂಪೆನಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗಲೇ ಹುದ್ದೆಗಳನ್ನು ಕಡಿತಗೊಳಿಸುವುದೇಕೆ ಎಂಬ ಪ್ರಶ್ನೆ ಸಹಜ" ಎಂದು ಒಪ್ಪಿಕೊಂಡಿದ್ದಾರೆ. ಸ್ಪರ್ಧಾತ್ಮಕವಾಗಿ ಉಳಿಯಲು ಕಡಿಮೆ ಪದರಗಳೊಂದಿಗೆ ಹೆಚ್ಚು ಹೊಣೆಗಾರಿಕೆಯುಳ್ಳ ಹಾಗೂ ಸರಳ ಸಂಘಟನಾ ರಚನೆ ಅಗತ್ಯವಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್ ಸುತ್ತಿನಲ್ಲಿ ವಜಾಗೊಂಡ ಉದ್ಯೋಗಿಗಳಿಗೆ ಆಂತರಿಕ ವರ್ಗಾವಣೆ ಅಥವಾ ಹೊಸ ಉದ್ಯೋಗ ಹುಡುಕಲು 90 ದಿನಗಳ ಅವಧಿ ನೀಡಲಾಗಿತ್ತು. ಮುಂದಿನ ಸುತ್ತಿನಲ್ಲಿಯೂ ವೇತನ ಬೇರ್ಪಡಿಕೆ, ಉದ್ಯೋಗ ಮಾರ್ಗದರ್ಶನ ಸೇವೆಗಳು ಹಾಗೂ ವಿಸ್ತೃತ ಆರೋಗ್ಯ ವಿಮಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ಕಂಪೆನಿ ತಿಳಿಸಿದೆ.

ಇದಲ್ಲದೆ, ಅಸಮರ್ಥತೆಗಳನ್ನು ಗುರುತಿಸಲು ಸಿಇಒ ಜಾಸ್ಸಿ ಜಾರಿಗೆ ತಂದ ಅನಾಮಧೇಯ ದೂರು ವ್ಯವಸ್ಥೆಗೆ ಈಗಾಗಲೇ 1,500ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಲಭಿಸಿದ್ದು, 450ಕ್ಕೂ ಹೆಚ್ಚು ಪ್ರಕ್ರಿಯಾ ಬದಲಾವಣೆಗಳಿಗೆ ಇದು ಕಾರಣವಾಗಿದೆ. ವಾರಕ್ಕೆ ಐದು ದಿನ ಕಚೇರಿಯಲ್ಲಿ ಕೆಲಸ ಮಾಡುವ ಕಡ್ಡಾಯ ನೀತಿಯನ್ನೂ ಅಮೆಝಾನ್ ಜಾರಿಗೆ ತಂದಿದೆ. ಆದರೆ ಈ ಕ್ರಮದಿಂದ ಕಂಪೆನಿ ನಿರೀಕ್ಷಿಸಿದ ಮಟ್ಟದ ಸ್ವಯಂಪ್ರೇರಿತ ರಾಜೀನಾಮೆಗಳು ಸಂಭವಿಸಿಲ್ಲವೆಂದು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries