ನವದೆಹಲಿ: 2020ರ ದೆಹಲಿ ಗಲಭೆಗೆ ಸಂಚು ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿಗಳ ಪೈಕಿ ಐವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ಬೆನ್ನಿಗೆ, ಮತ್ತೊಬ್ಬ ಆರೋಪಿಯು ಜಾಮೀನು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.
ಸಿಎಎ/ಎನ್‌ಆರ್‌ಸಿ ವಿರೋಧಿ ಸಭೆಯ 11 ಸಂಘಟಕರು ಮತ್ತು ಭಾಷಣಕಾರರಲ್ಲಿ ಒಬ್ಬರಾದ ಸಲೀಂ ಮಲಿಕ್ ಅಲಿಯಾಸ್ ಮುನ್ನಾ ಅವರು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೈ ಮುಂದೆ ತಮ್ಮ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಕ್ರಿಮಿನಲ್ ಪಿತೂರಿ ಆರೋಪದಡಿ ಸಲೀಂ ವಿರುದ್ಧ ನ್ಯಾಯಾಲಯದಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ. ಇದೇ ರೀತಿಯ ಆರೋಪ ಎದುರಿಸುತ್ತಿರುವ ಮತ್ತೊಬ್ಬ ಆರೋಪಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿತ್ತು. ಮಲಿಕ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಜ.8ರಂದು ವಿಚಾರಣೆಗಾಗಿ ಪಟ್ಟಿ ಮಾಡಿದೆ.
ಬಿಡುಗಡೆ ಆದೇಶ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿರುವ ಗುಲ್‌ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಂ ಖಾನ್ ಅವರನ್ನು ಬಿಡುಗಡೆ ಮಾಡುವಂತೆ ದೆಹಲಿ ನ್ಯಾಯಾಲಯವು ಬುಧವಾರ ಆದೇಶ ಹೊರಡಿಸಿದೆ.
ಪ್ರಕರಣದ ಐದನೇ ಆರೋಪಿ ಶದಾಬ್ ಅಹ್ಮದ್ ಅವರಿಗೂ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿತ್ತು. ಆದರೆ, ಜಾಮೀನಿಗೆ ಸಂಬಂಧಿಸಿದ ಭದ್ರತಾ ಬಾಂಡ್‌ಗಳನ್ನು ಸಲ್ಲಿಸಲು ಅವರು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ.

