HEALTH TIPS

ಇರಾನ್ ಗಲಭೆ: ಮೃತರ ಸಂಖ್ಯೆ 203ಕ್ಕೆ ಏರಿಕೆ

ದುಬೈ: 'ಇರಾನ್‌ ಮೇಲೆ ಅಮೆರಿಕ ಏನಾದರೂ ದಾಳಿ ನಡೆಸಿದರೆ, ಅಮೆರಿಕ ಸೇನಾ ನೆಲೆಗಳು ಮತ್ತು ಇಸ್ರೇಲ್‌ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕಾಗುತ್ತದೆ' ಎಂದು ಇರಾನ್‌ ದೇಶವು ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. 

ಇರಾನ್‌ ಆಡಳಿತವನ್ನು ಪ್ರಶ್ನಿಸಿ ದೇಶವ್ಯಾಪಿ ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆ ಭಾನುವಾರವೂ ಮುಂದುವರಿದಿದ್ದು, ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 203ಕ್ಕೆ ಏರಿದೆ.

ಈ ಪೈಕಿ 162 ಮಂದಿ ಪ್ರತಿಭಟನಕಾರರಾಗಿದ್ದರೆ, 41 ಮಂದಿ ಭದ್ರತಾ ಸಿಬ್ಬಂದಿ.

'ದೇಶದಲ್ಲಿ ಅಶಾಂತಿ ಸೃಷ್ಟಿಯಾಗಲು ವಿದೇಶಿ ಪ್ರಭಾವವೇ ಕಾರಣ' ಎಂದು ಆರೋಪಿಸಿರುವ ಇರಾನ್ ಸರ್ಕಾರ, ಅಮೆರಿಕ ಮತ್ತು ಇಸ್ರೇಲ್‌ ವಿಧ್ವಂಸಕರನ್ನು ಬೆಂಬಲಿಸುತ್ತಿವೆ ಎಂದು ದೂರಿದೆ. ಪ್ರತಿಭಟನಕಾರರನ್ನು ಬೆಂಬಲಿಸುವವರು ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದೂ ಹೇಳಿದೆ.

ಇರಾನ್‌ ಪ್ರತಿಭಟನೆಯಲ್ಲಿ ಅಮೆರಿಕ ಮಧ್ಯಪ್ರವೇಶಿಸುವ ಸಾಧ್ಯತೆ ಹೆಚ್ಚಿರುವ ಕುರಿತು ಇಸ್ರೇಲ್‌ ಎಚ್ಚರವಹಿಸಿದೆ ಎಂಬುದಾಗಿ ಮೂಲಗಳಿಂದ ತಿಳಿದ ಬೆನ್ನಲ್ಲೇ ಇರಾನ್‌ ಕಠಿಣ ಸಂದೇಶ ರವಾನಿಸಿದೆ.

ಟ್ರಂಪ್‌ ಬೆಂಬಲ:

ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರತಿಭಟನಕಾರರಿಗೆ ಬೆಂಬಲ ಸೂಚಿಸಿದ್ದಾರೆ. 'ಇರಾನ್‌ನ ಜನರು ಸ್ವಾತಂತ್ರ್ಯಕ್ಕಾಗಿ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಹೋರಾಡುತ್ತಿದ್ದಾರೆ. ಅವರಿಗೆ ಸಹಾಯ ಮಾಡಲು ಅಮೆರಿಕ ಸಿದ್ಧವಿದೆ' ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ.

'ಇರಾನ್‌ ಮೇಲೆ ದಾಳಿ ನಡೆಸಲು ಸಜ್ಜಾಗಿರುವಂತೆ ಟ್ರಂಪ್‌ ಅವರು ಸೇನೆಗೆ ಈಗಾಗಲೇ ಸೂಚಿಸಿದ್ದಾರೆ. ಆದರೆ ದಾಳಿ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ' ಎಂದು ಮೂಲಗಳು ಮಾಹಿತಿ ನೀಡಿವೆ.

'ಟ್ರಂಪ್‌ ಜತೆ ಆಟ ಬೇಡ'

ಈ ಬೆಳವಣಿಗೆಗಳ ಬೆನ್ನಲ್ಲೇ ಅಮೆರಿಕದ ವಿದೇಶಾಂಗ ಇಲಾಖೆಯು ಇರಾನ್‌ಗೆ ಎಚ್ಚರಿಕೆ ನೀಡಿದ್ದು, 'ಅಧ್ಯಕ್ಷ ಟ್ರಂಪ್‌ ಜತೆ ಆಟವಾಡಬೇಡಿ. ಅವರು ಏನನ್ನಾದರೂ ಮಾಡುತ್ತೇನೆ ಎಂದು ಹೇಳಿದರೆ ಅದನ್ನು ಮಾಡದೇ ಬಿಡುವುದಿಲ್ಲ' ಎಂದಿದೆ.

ಮುಂದುವರಿದ ಪ್ರತಿಭಟನೆ

ಟೆಹರಾನ್‌, ಮಶ್ಹಾದ್‌ ಸೇರಿ ದೇಶದ ವಿವಿಧ ನಗರಗಳಲ್ಲಿ ಜನರು ಭಾನುವಾರವೂ ಬೀದಿಗಿಳಿದು ಇರಾನ್‌ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ಅಮೆರಿಕದ ಎಚ್ಚರಿಕೆ ನಡುವೆಯೂ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಪ್ರತಿಭಟನಕಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆಗಳನ್ನು ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸುವವರನ್ನು 'ದೇವರ ಶತ್ರುಗಳು' ಎಂದು ಪರಿಗಣಿಸಿ, ಮರಣದಂಡನೆ ವಿಧಿಸಲಾಗುತ್ತದೆ ಎಂದು ಇರಾನ್‌ನ ಅಟಾರ್ನಿ ಜನರಲ್‌ ಮೊಹಮ್ಮದ್‌ ಮೊವಾಹೆದಿ ಆಜಾದ್‌ ಎಚ್ಚರಿಸಿದ್ದಾರೆ.

'ಗಲಭೆಕೋರರಿಗೆ ನೆರವು ನೀಡುವವರು ಅದೇ ರೀತಿಯ ಆರೋಪಗಳನ್ನು ಎದುರಿಸಬೇಕಾಗುತ್ತದೆ' ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಪ್ರಕಟಿಸಿದೆ.

'ಗಲಭೆಕೋರರಿಂದ ಸಮಾಜ ನಾಶ'

ಪ್ರತಿಭಟನಕಾರರ ಅಹವಾಲನ್ನು ಅಧಿಕಾರಿಗಳು ಆಲಿಸಲಿದ್ದಾರೆ ಎಂದ ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌, ಗಲಭೆಕೋರರ ಬಗ್ಗೆ ಎಚ್ಚರದಿಂದ ಇರುವಂತೆ ನಿರ್ದೇಶಿಸಿದ್ದಾರೆ.

'ಗಲಭೆಕೋರರು ಇಡೀ ಸಮಾಜವನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ. ಅವರ ಬಗ್ಗೆ ಎಚ್ಚರದಿಂದ ಇರಬೇಕು ಮತ್ತು ಅವರ ಉದ್ದೇಶ ಈಡೇರದಂತೆ ನೋಡಿಕೊಳ್ಳಬೇಕು' ಎಂದು ಅಧ್ಯಕ್ಷರು ಸೂಚಿಸಿದ್ದಾರೆ.

ಇರಾನ್‌ ಸುಮ್ಮನಿರಲ್ಲ: ಸ್ಪೀಕರ್‌

'ಇಸ್ಲಾಮಿಕ್‌ ಗಣರಾಜ್ಯವಾದ ಇರಾನ್‌ ಮೇಲೆ ಅಮೆರಿಕ ದಾಳಿ ನಡೆಸಿದರೆ ನಾವು ಸುಮ್ಮನಿರುವುದಿಲ್ಲ. ಅಮೆರಿಕ ಸೇನೆ ಮತ್ತು ಇಸ್ರೇಲ್‌ಗೆ ತಕ್ಕ ಪಾಠ ಕಲಿಸಲಿದ್ದೇವೆ' ಎಂದು ಇರಾನ್‌ ಸಂಸತ್ತಿನ ಸ್ಪೀಕರ್‌ ಖಲೀಬಾಫ್‌ ಎಚ್ಚರಿಸಿದರು. ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಭಾನುವಾರ ಇರಾನ್‌ ಸಂಸತ್ತು ಸಭೆ ಸೇರಿ ಚರ್ಚೆ ನಡೆಸಿತು. ಈ ವೇಳೆ ಪೀಠದ ಮುಂಭಾಗ ಬಂದ ಸಂಸದರು 'ಅಮೆರಿಕ ಅಂತ್ಯವಾಗಬೇಕು' ಎಂದು ಕೂಗಿ ಆಕ್ರೋಶ ಹೊರಹಾಕಿದರು.

ಆಗ ಮಾತನಾಡಿದ ಸ್ಪೀಕರ್‌ 'ಅಮೆರಿಕ ದಾಳಿ ಮಾಡಿದರೆ ಅದಕ್ಕೆ ಇರಾನ್‌ ತಕ್ಕ ಪಾಠ ಕಲಿಸಲಿದೆ' ಎಂದರು. ಪ್ರತಿಭಟನೆಯನ್ನು ಸಮರ್ಥವಾಗಿ ನಿಯಂತ್ರಿಸುತ್ತಿರುವುದಕ್ಕೆ ಪೊಲೀಸರು ಅರೆಸೈನಿಕ ಪಡೆ ಮತ್ತು ಸ್ವಯಂ ಸೇವಕರನ್ನು ಸ್ಪೀಕರ್‌ ಇದೇ ವೇಳೆ ಶ್ಲಾಘಿಸಿದರು. 'ಅಮೆರಿಕ ದಾಳಿ ಮಾಡಿದರೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಅಮೆರಿಕ ಸೇನೆಯ ಎಲ್ಲ ಕೇಂದ್ರಗಳು ನೆಲೆಗಳು ಮತ್ತು ಹಡಗುಗಳನ್ನು ಗುರಿಯಾಗಿಸುತ್ತೇವೆ. ಎದುರಾಳಿ ದಾಳಿ ನಡೆಸಿದ ಬಳಿಕ ನಾವು ಪ್ರತಿಕ್ರಿಯಿಸುತ್ತೇವೆ ಎಂದುಕೊಳ್ಳಬೇಡಿ. ನಮ್ಮ ವಿರುದ್ಧದ ಬೆದರಿಕೆಯ ಯಾವುದೇ ಕುರುಹು ಲಭ್ಯವಾದರೂ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ' ಎಂದು ಸ್ಪೀಕರ್‌ ಗುಡುಗಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries