ತಿರುವನಂತಪುರಂ: ಸಂಘರ್ಷಪೀಡಿತ ಇರಾನ್‌ನಲ್ಲಿ ಸಿಲುಕಿಕೊಂಡಿರುವ 24 ಮಲಯಾಳಿಗರು ಮರಳಿ ಸ್ವದೇಶಕ್ಕೆ ಕರೆತರುವಂತೆ ಕೇರಳದ ಅನಿವಾಸಿಗರ ಇಲಾಖೆಗೆ (ನೊರ್ಕಾ ರೂಟ್) ಮನವಿ ಮಾಡಿದ್ದಾರೆ.
ಇದರಲ್ಲಿ 12 ಮಂದಿ ವೈದ್ಯಕೀಯ ವಿದ್ಯಾರ್ಥಿಗಳಿದ್ದು, ಉಳಿದವರು ನಾವಿಕರಾಗಿದ್ದಾರೆ.
'ಭಾರತಕ್ಕೆ ಮರಳಿ ಬರಲು ಬಯಸುತ್ತಿರುವವರ ಸಂಖ್ಯೆ ಕಲೆ ಹಾಕಲಾಗುತ್ತಿದ್ದು, ರಾಯಭಾರ ಕಚೇರಿ ಹಾಗೂ ವಿದೇಶಾಂಗ ಇಲಾಖೆಯ ಜೊತೆಗೂ ಹಂಚಿಕೊಳ್ಳಲಾಗುವುದು' ಎಂದು ನೊರ್ಕಾ ರೂಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕೊಲಶ್ಯೇರಿ ತಿಳಿಸಿದ್ದಾರೆ.
ಈಗಿರುವ ಮಾಹಿತಿ ಪ್ರಕಾರ, ಇರಾನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಲಯಾಳಿಗರು ಇಲ್ಲ. ಈಗಿನ ಅಂದಾಜಿನ ಪ್ರಕಾರ, 50 ವಿದ್ಯಾರ್ಥಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ಉಳಿದವರು ವ್ಯಾಪಾರ ನಿಮಿತ್ತ ಅಲ್ಲಿಗೆ ತೆರಳಿದ್ದಾರೆ. ನಾವಿಕರು ಈಗಲೂ ಹಡಗಿನಲ್ಲಿಯೇ ಇದ್ದು, ಅವರೆಲ್ಲರೂ ಕೂಡ ಯುಇಎ ಹಾಗೂ ಗಲ್ಫ್‌ನಿಂದ ಬಂದವರಾಗಿದ್ದಾರೆ.
ಕೆರ್ಮನ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮನ್ನು ಕರೆದೊಯ್ಯಲು ಮನವಿ ಸಲ್ಲಿಸಿದ್ದಾರೆ. ಅವರು ಈಗಲೂ ಕೂಡ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದು, ಅವರೆಲ್ಲರೂ ಕೂಡ ಕಾಸರಗೋಡು, ಮಲಪ್ಪುರಂ, ಕೊಟ್ಟಾಯಂ ಹಾಗೂ ಎರ್ನಾಕುಲಂ ಜಿಲ್ಲೆಯವರು.
ಇಂಟರ್‌ನೆಟ್ ಕಡಿತಗೊಳಿಸಿರುವ ಕಾರಣ, ಮಕ್ಕಳ ಜೊತೆ ಸಂಪರ್ಕ ಸಾಧ್ಯವಾಗಿಲ್ಲ ಎಂದು ಪೋಷಕರು ಸ್ಥಳೀಯ ಮಾಧ್ಯಮಗಳ ಮುಂದೆ ಆತಂಕ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್‌ನ ಕೊಠಡಿಯಲ್ಲಿ ಉಳಿದುಕೊಳ್ಳುವಂತೆ ಕಠಿಣ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

