HEALTH TIPS

ಜೈಪುರ ಸಾಹಿತ್ಯ ಉತ್ಸವ ಆರಂಭ: 25 ದೇಶಗಳ ಚಿಂತಕರು, ಲೇಖಕರು, ತಜ್ಞರ ಸಮ್ಮಿಲನ

ಜೈಪುರ: ಪ್ರತಿಷ್ಠಿತ ಜೈಪುರ ಸಾಹಿತ್ಯ ಉತ್ಸವದ (ಜೆಎಲ್‌ಎಫೋ‌) 19ನೇ ಆವೃತ್ತಿ ಗುರುವಾರ (ಜ.15) ಆರಂಭವಾಗಿದೆ. 'ಪಿಂಕ್ ಸಿಟಿʼಯ ಕ್ಲಾರ್ಕ್ಸ್ ಆಮೆರ್ ಹೋಟೆಲ್‌ನಲ್ಲಿ 19ರವರೆಗೂ ದೇಶ ಹಾಗೂ ಜಾಗತಿಕ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಯಲಿದೆ.

ಹಿಂದೆಂದಿಗಿಂತಲೂ ಹೆಚ್ಚಿನ ಗೋಷ್ಠಿಗಳಿಗೆ ಈ ಬಾರಿ ಸಾಹಿತ್ಯಪ್ರಿಯರು ಸಾಕ್ಷಿಯಾಗಲಿದ್ದಾರೆ.

300ಕ್ಕೂ ಹೆಚ್ಚಿನ ಗೋಷ್ಠಿಗಳು ಆಯೋಜನೆಯಾಗಿದ್ದು, ಭಾರತವೂ ಸೇರಿದಂತೆ ಜಗತ್ತಿನ ವಿವಿಧ ದೇಶ- ಭಾಷೆಗಳ 500ಕ್ಕೂ ಹೆಚ್ಚು ವಿಷಯ ತಜ್ಞರು ತಮ್ಮ ಹೊಳಹುಗಳನ್ನು ಹಂಚಿಕೊಳ್ಳಲಿದ್ದಾರೆ.

ಸಾಹಿತ್ಯ, ಇತಿಹಾಸ, ರಾಜಕಾರಣ, ವಿಜ್ಞಾನ, ತಂತ್ರಜ್ಞಾನ, ಹವಾಮಾನ ಬದಲಾವಣೆ, ಜಾಗತಿಕ ವಿದ್ಯಮಾನ ಸೇರಿದಂತೆ ವೈವಿಧ್ಯಮಯ ವಿಚಾರಗಳು ಉತ್ಸವದಲ್ಲಿ ಭಾಗವಹಿಸಲಿರುವ ಸಾಹಿತ್ಯಾಸಕ್ತರಿಗೆ ವಿಶಿಷ್ಟ ಅನುಭವ ನೀಡಲಿವೆ ಎನ್ನುವುದು ಆಯೋಜಕರ ವಿಶ್ವಾಸ.

ಗಾಢ ಕಲ್ಪನೆ ಮತ್ತು ದಿಟ್ಟ ನಿರೂಪಣೆಗಳಿಂದ ಕೂಡಿದ ಸಾಹಿತ್ಯ ಕೃತಿಗಳು ಈ ಬಾರಿ ಉತ್ಸವದಲ್ಲಿ ಚರ್ಚೆಯಾಗಲಿವೆ. ಕನ್ನಡದ ಬಾನು ಮುಷ್ತಾಕ್ ಅವರ, ದೀಪಾ ಭಾಸ್ತಿ ಅನುವಾದಿಸಿರುವ ಅಂತರರಾಷ್ಟ್ರೀಯ ಬುಕರ್ ವಿಜೇತ ಕೃತಿ 'ದ ಹಾರ್ಟ್ ಲ್ಯಾಂಪ್ʼ ಬಗ್ಗೆ ಸಂವಾದ ನಡೆಯಲಿದೆ. ಇದರ ಜತೆಗೆ, ಕಿರಣ್ ದೇಸಾಯಿ, ಗೋಪಾಲಕೃಷ್ಣ ಗಾಂಧಿ ಅವರ ಕೃತಿಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ನೊಬೆಲ್ ಪ್ರಶಸ್ತಿ ಪುರಸ್ಕೃತರು, ಲೇಖಕರು, ಇತಿಹಾಸಕಾರರು ಉತ್ಸವದ ಭಾಗವಾಗಲಿದ್ದಾರೆ. ಎಸ್ತರ್ ಡುಫ್ಲೋ, ಆನ್ ಆಪಲ್‌ಬಾಮ್, ಸ್ಟೀಫನ್ ಗ್ರೀನ್‌ಬ್ಲಾಟ್, ಟಿಮ್ ಬರ್ನರ್ಸ್-ಲೀ ಮತ್ತು ಫ್ರೆಡ್ರಿಕ್ ಲೋಗೆವಾಲ್ ಅವರಂತಹ ಜಾಗತಿಕ ಗಣ್ಯರ ಜತೆಗೆ ಭಾರತದ ಸುಧಾ ಮೂರ್ತಿ, ಶೋಭಾ ಡೇ, ಪ್ರಸೂನ್ ಜೋಶಿ, ನವತೇಜ್ ಸರ್ನಾ, ಅನುರಾಧ ರಾಯ್, ಜೀತ್ ಥೈಲ್, ಅಶ್ವಿನ್ ಸಂಘಿ, ಗುರುಚರಣ್ ದಾಸ್ ಮತ್ತು ಆನಂದ್ ನೀಲಕಂಠನ್‌ ಮುಂತಾದವರು ಇರಲಿದ್ದಾರೆ. ಚಿತ್ರ ಸಾಹಿತಿ ಜಾವೇದ್‌ ಅಖ್ತರ್, ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌ ಅವರು ಸಭಿಕರ ಮುಂದೆ ತಮ್ಮ ಬದುಕಿನ ಪುಟಗಳನ್ನು ತೆರೆದಿಡಲಿದ್ದಾರೆ.

ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾಗಿರುವ ಖ್ಯಾತ ಬ್ರಿಟಿಷ್ ಲೇಖಕ, ನಟ ಸ್ಟೀಫನ್ ಫ್ರೈ ಅವರು ರಂಗಭೂಮಿ, ದೃಶ್ಯ ಮಾಧ್ಯಮ, ಸಾಹಿತ್ಯ ಮತ್ತು ಹಾಸ್ಯ ಇತ್ಯಾದಿ ಪ್ರಕಾರಗಳಲ್ಲಿನ ತಮ್ಮ ಸಾಧನೆಯ ಕುರಿತ ಒಳನೋಟಗಳನ್ನು ತಮ್ಮ ಎಂದಿನ ಹಾಸ್ಯದೊಂದಿಗೆ ಅನಾವರಣಗೊಳಿಸಲಿದ್ದಾರೆ.

ಜಗತ್ತಿನ ವಿವಿಧ ದೇಶಗಳ ಪ್ರತಿಭಾಶಾಲಿಗಳೂ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತರಾದ ಪರ್ಸಿವಲ್ ಎವರೆಟ್, ಜನಪ್ರಿಯ ಲೇಖಕ ಮತ್ತು ಆಧ್ಯಾತ್ಮಿಕ ಮಾರ್ಗದರ್ಶಕ ಗೌರ್ ಗೋಪಾಲ್ ದಾಸ್, ಪ್ರಮುಖ ನ್ಯೂಟ್ರಿಷಿಯನ್ ಋಜುತಾ ದ್ವಿವೇಕರ್, ಹೆಸರಾಂತ ಹಾಸ್ಯ ಕಲಾವಿದ, ನಟ ವೀರ್ ದಾಸ್, ವರ್ಲ್ಡ್ ವೈಡ್ ವೆಬ್‌ನ ಸಂಶೋಧಕ ಸರ್ ಟಿಮ್ ಬೆರ್ನರ್ಸ್ ಲೀ, ವಿಕಿಪಿಡಿಯಾದ ಸಹಸಂಸ್ಥಾಪಕ ಜಿಮ್ಮಿ ವೇಲ್ಸ್ ಮುಂತಾದವರು ತಮ್ಮ ಸಾಧನೆಗಳ ಬಗ್ಗೆ ಮಾತನಾಡಲಿದ್ದಾರೆ.

ಸಂಜಯ್‌ ಕೆ.ರಾಯ್ ಲೇಖಕ ಜೆಎಲ್‌ಎಫ್ ಸಹ ಸಂಸ್ಥಾಪಕ25ಕ್ಕೂ ಹೆಚ್ಚು ದೇಶಗಳ ಭಾಷಣಕಾರರು ಭಾಗವಹಿಸುತ್ತಿದ್ದು ಸಾಂಸ್ಕೃತಿಕ ವಿನಿಮಯದ ಶಕ್ತಿ ಮತ್ತು ಸಾರ್ವಜನಿಕ ಸಂವಾದದ ನಿರಂತರ ಮೌಲ್ಯಕ್ಕೆ ಈ ಬಾರಿಯ ಸಾಹಿತ್ಯ ಉತ್ಸವ ಸಾಕ್ಷಿಯಾಗಲಿದೆ

ಸಾಹಿತ್ಯವಷ್ಟೇ ಅಲ್ಲ

ಸಾಹಿತ್ಯದ ಜತೆಯಲ್ಲೇ ಮನುಷ್ಯರ ಜೀವನವನ್ನು ಪ್ರಭಾವಿಸುವ ಇತರ ಅಂಶಗಳ ಬಗೆಗೂ ಗೋಷ್ಠಿಗಳನ್ನು ನಡೆಸುವುದು ಜೈಪುರ ಸಾಹಿತ್ಯ ಉತ್ಸವದಲ್ಲಿ ಹಿಂದಿನಿಂದಲೂ ನಡೆದುಬಂದಿದೆ. ಈ ಬಾರಿ ದೇವೇಶ್ ಕಪೂರ್ ಮತ್ತು ಅರವಿಂದ ಸುಬ್ರಮಣಿಯನ್ ಅವರು ಭಾರತದ ಅಭಿವೃದ್ಧಿ ಆರ್ಥಿಕ ಬದಲಾವಣೆ ಪ್ರಜಾಪ್ರಭುತ್ವದ ಅಸಾಮಾನ್ಯ ಪಯಣವನ್ನು ವಿಶ್ಲೇಷಿಸಿದರೆ ರಾಮನ್ ಮ್ಯಾಗ್ಸೆಸೆ ಪುರಸ್ಕೃತರಾದ ಸಫೀನಾ ಹುಸೇನ್ ಅವರು ಶಿಕ್ಷಣ ಸಮಾನತೆ ಸಾಮಾಜಿಕ ಬದಲಾವಣೆಯ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಕಲಾವಿದರೂ ಗೂಗಲ್ ಡೀಪ್‌ ಮೈಂಡ್‌ನ ಸಂಶೋಧಕ ಅಲಿ ಎಸ್ಲಮಿ ಅವರು ಡಿಜಿಟಲ್ ಸೃಜನಶೀಲತೆ ಮತ್ತು ಭವಿಷ್ಯದ ತಂತ್ರಜ್ಞಾನಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries