ವಾಷಿಂಗ್ಟನ್: ಇರಾನ್ ಜೊತೆ ವಾಣಿಜ್ಯ ಸಂಬಂಧ ಹೊಂದಿರುವ ದೇಶಗಳು ಅಮೆರಿಕ ಜೊತೆ ನಡೆಸುವ ಎಲ್ಲ ವ್ಯಾಪಾರಗಳ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಈ ಕುರಿತು ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ 'ಟ್ರೂಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಈ ಸುಂಕ ತಕ್ಷಣದಿಂದಲೇ ಜಾರಿಗೆ ಬರಲಿದೆ' ಎಂದು ಘೋಷಿಸಿದ್ದಾರೆ.
'ಈ ಆದೇಶ ಅಂತಿಮ ಹಾಗೂ ನಿರ್ಣಾಯಕ' ಎಂದೂ ಹೇಳಿರುವ ಅವರು, ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಟ್ರಂಪ್ ಅವರ ಈ ಹೊಸ ಘೋಷಣೆಯಂತೆ, ಇರಾನ್‌ನೊಂದಿಗೆ ವ್ಯಾಪಾರ ನಡೆಸುವ ದೇಶಗಳಿಂದ ಅಮೆರಿಕವು ಆಮದು ಮಾಡಿಕೊಳ್ಳುವ ಸರಕುಗಳಿಗೆ ಈ ಸುಂಕ ವಿಧಿಸಲಾಗುತ್ತದೆ.
ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹತ್ತಿಕ್ಕುತ್ತಿರುವ ಇರಾನ್ ಮೇಲೆ ಮತ್ತಷ್ಟು ಒತ್ತಡ ಹೇರುವ ಕ್ರಮದ ಭಾಗವಾಗಿ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.
ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ದನಿ ಅಡಗಿಸಲು ಭದ್ರತಾ ಪಡೆಗಳನ್ನು ಬಳಸುವುದು ಕಂಡುಬಂದಲ್ಲಿ, ಇರಾನ್ ಸರ್ಕಾರಕ್ಕೆ ತನ್ನ ಸೇನೆ ಮೂಲಕವೇ ಉತ್ತರ ನೀಡುವುದಾಗಿ ಟ್ರಂಪ್ ಬೆದರಿಕೆ ಒಡ್ಡುತ್ತಲೇ ಇದ್ದಾರೆ. ಈಗ, ಹೊಸದಾಗಿ ಶೇ 25ರಷ್ಟು ಸುಂಕ ವಿಧಿಸುವ ಅಸ್ತ್ರವನ್ನು ಝಳಪಿಸಿದ್ದಾರೆ.
ಇರಾನ್, ತೈಲ ಉತ್ಪಾದಿಸುವ ರಾಷ್ಟ್ರಗಳ ಗುಂಪು 'ಒಪೆಕ್'ನ ಸದಸ್ಯ ದೇಶ. ತೈಲ ರಫ್ತು ಮಾಡುವ ಪ್ರಮುಖ ರಾಷ್ಟ್ರವೂ ಆಗಿದೆ. ಇರಾನ್‌ನಿಂದ ತೈಲ ಖರೀದಿಸುವ ಪ್ರಮುಖ ದೇಶಗಳಲ್ಲಿ ಭಾರತ, ಚೀನಾ, ಬ್ರೆಜಿಲ್, ಟರ್ಕಿ, ಯುಎಇ ಹಾಗೂ ರಷ್ಯಾ ಸೇರಿವೆ.
ಅಮೆರಿಕದಲ್ಲಿನ ಚೀನಾ ರಾಯಭಾರ ಕಚೇರಿತನ್ನ ವ್ಯಾಪ್ತಿ ಮೀರಿ ಸುಂಕ ವಿಧಿಸುವುದಕ್ಕೆ ಹಾಗೂ ಅಕ್ರಮವಾಗಿ ಕೈಗೊಳ್ಳುವ ಏಕಪಕ್ಷೀಯ ನಿರ್ಧಾರವನ್ನು ಚೀನಾ ವಿರೋಧಿಸುತ್ತದೆ. ದೇಶದ ಹಿತಾಸಕ್ತಿ ಕಾಪಾಡಿಕೊಳ್ಳುವುದಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು
ಅಧಿಕೃತ ಮಾಹಿತಿ ಇಲ್ಲ: ಸುಂಕಕ್ಕೆ ಸಂಬಂಧಿಸಿ ಟ್ರಂಪ್ ಅವರ ಈ ಘೋಷಣೆ ಕುರಿತಂತೆ ಶ್ವೇತಭವನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ಕುರಿತು ಶ್ವೇತಭವನದ ವೆಬ್‌ಸೈಟ್‌ನಲ್ಲಿ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅಲ್ಲದೇ, ಯಾವ ಕಾನೂನಿನ ಅನ್ವಯ ಈ ಸುಂಕ ವಿಧಿಸಲು ಟ್ರಂಪ್ ಮುಂದಾಗಿದ್ದಾರೆ ಅಥವಾ ಇರಾನ್ ಜೊತೆ ವ್ಯಾಪಾರ ನಡೆಸುವ ಎಲ್ಲ ದೇಶಗಳಿಗೂ ಈ ಸುಂಕ ವಿಧಿಸಲಾಗುತ್ತದೆಯೇ ಎಂಬ ಬಗ್ಗೆಯೂ ಮಾಹಿತಿ ಇಲ್ಲ ಎಂದೂ ಸಂಸ್ಥೆ ವರದಿ ಮಾಡಿದೆ.
'ಭಾರತದ ಮೇಲೆ ಪರಿಣಾಮ'
'ಇರಾನ್ ಜೊತೆ ವ್ಯಾಪಾರ ನಡೆಸುವ ದೇಶಗಳಿಂದ ತಾನು ಆಮದು ಮಾಡಿಕೊಳ್ಳುವ ಸರಕುಗಳಿಗೆ ಸಂಬಂಧಿಸಿ ಶೇ 25ರಷ್ಟು ಸುಂಕ ವಿಧಿಸಲಾಗುವುದು' ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆಯು ಇರಾನ್ ಜೊತೆ ವ್ಯಾಪಾರ ನಡೆಸುವ ಪ್ರಮುಖ ದೇಶಗಳಾದ ಭಾರತ ಯುಎಇ ಹಾಗೂ ಚೀನಾ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಮಹಾ ನಿರ್ದೇಶಕ ಅಜಯ್ ಸಹಾಯ್'ಟ್ರಂಪ್ ಅವರ ಈ ಘೋಷಣೆ ಕಳವಳಕಾರಿಯಾಗಿದ್ದು ಈ ಬಗ್ಗೆ ಇನ್ನಷ್ಟು ಸ್ಪಷ್ಟತೆ ಬೇಕು' ಎಂದು ಹೇಳಿದ್ದಾರೆ.
'ಇರಾನ್ ಮೇಲಿನ ನಿರ್ಬಂಧಗಳಿಗೆ ಸಂಬಂಧಿಸಿ ವಿದೇಶ ಸ್ವತ್ತುಗಳ ನಿಯಂತ್ರಣ ಕಚೇರಿ(ಒಎಫ್‌ಎಸಿ) ನೀಡಿರುವ ಆದೇಶಗಳನ್ನು ಭಾರತದ ಕಂಪನಿಗಳು ಹಾಗೂ ಬ್ಯಾಂಕುಗಳು ಸಂಪೂರ್ಣವಾಗಿ ಪಾಲನೆ ಮಾಡುತ್ತಿವೆ. ಪ್ರಮುಖವಾಗಿ ಆಹಾರ ಮತ್ತು ಔಷಧಗಳು ಸೇರಿದಂತೆ ಮಾನವೀಯ ಆಧಾರದಲ್ಲಿ ನಡೆಸಬಹುದಾದ ವ್ಯಾಪಾರಕ್ಕೆ ಒಎಫ್‌ಎಸಿ ಅನುಮತಿ ನೀಡಿದೆ' ಎಂದು ಹೇಳಿದ್ದಾರೆ.
ಇನ್ನೊಂದೆಡೆ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ. ಆ ರಾಷ್ಟ್ರಕ್ಕೆ ಬಾಸ್ಮತಿ ಅಕ್ಕಿ ರಫ್ತು ಮಾಡುವ ಭಾರತದ ಉದ್ದಿಮೆಗಳ ಮೇಲೂ ಪರಿಣಾಮ ಉಂಟಾಗಲಿದೆ ಎಂದು ಮೂಲಗಳು ಹೇಳಿವೆ.
'ದೇಶೀಯ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿ ದರದಲ್ಲಿ ಭಾರಿ ಇಳಿಕೆಯಾಗುವುದು. ಮತ್ತೊಂದೆಡೆ ಅಕ್ಕಿ ಪೂರೈಕೆಗೆ ಸಂಬಂಧಿಸಿದ ಹಣದ ಪಾವತಿಯಲ್ಲಿ ಮತ್ತಷ್ಟು ವಿಳಂಬವಾಗಲಿದೆ' ಎಂದು ರಫ್ತುದಾರರ ಸಂಘಟನೆ ಹೇಳಿದೆ.
ಕಳೆದ ವರ್ಷ ಮೊದಲ 10 ತಿಂಗಳಲ್ಲಿ ಭಾರತ ಮತ್ತು ಇರಾನ್‌ನ ದ್ವಿಪಕ್ಷೀಯ ವ್ಯಾಪಾರ ₹12 ಸಾವಿರ ಕೋಟಿಯಷ್ಟಿತ್ತು. ಬಾಸ್ಮತಿ ಅಕ್ಕಿ ಹಣ್ಣುಗಳು ತರಕಾರಿಗಳು ಔಷಧಗಳು ಇರಾನ್‌ಗೆ ಭಾರತ ರಫ್ತು ಮಾಡುವ ಪ್ರಮುಖ ಉತ್ಪನ್ನಗಳಾಗಿವೆ ಎಂದು ಭಾರತದ ವಾಣಿಜ್ಯ ಸಚಿವಾಲಯ ತಿಳಿಸಿದೆ.

