ಪ್ಯಾರಿಸ್: ಇರಾನ್‌ನಲ್ಲಿ ಈಚೆಗೆ ನಡೆದ ಪ್ರತಿಭಟನೆಯಲ್ಲಿ 3,117 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಇರಾನ್ ಸರ್ಕಾರ ಮೃತಪಟ್ಟವರ ಸಂಖ್ಯೆ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು ಇದೇ ಮೊದಲು.
ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಆಡಳಿತವು ಕಠಿಣ ಕ್ರಮ ಕೈಗೊಂಡಿದ್ದರಿಂದ ಸಾವಿನ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ ಎಂದು ಹೋರಾಟಗಾರರು ಪ್ರತಿಕ್ರಿಯಿಸಿದ್ದಾರೆ.
ಇರಾನ್‌ನಲ್ಲಿ ಆರ್ಥಿಕತೆಯ ಕುಸಿತದಿಂದ ಸರ್ಕಾರದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿತ್ತು. ಜ.8ರಿಂದ ಹಲವು ದಿನ ಜನರು ಬೀದಿಗಿಳಿದು ಪ್ರತಿಭಟಿಸಿದ್ದರು.
'ಮೃತರಲ್ಲಿ 2,427 ಜನರನ್ನು ಹುತಾತ್ಮರು ಎಂದು ಪರಿಗಣಿಸಲಾಗಿದೆ. ಇದರಲ್ಲಿ ಭದ್ರತಾ ಪಡೆ ಸಿಬ್ಬಂದಿ ಸೇರಿದಂತೆ ಅಮಾಯಕ ನಾಗರಿಕರೂ ಇದ್ದಾರೆ. ಉಳಿದ 690 ಮಂದಿಯನ್ನು ಭಯೋತ್ಪಾದಕರು, ಗಲಭೆಕೋರರು ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದವರು ಎಂಬುದಾಗಿ ಗುರುತಿಸಲಾಗಿದೆ' ಎಂದು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ ಅಲಿ ಅಕ್ಬರ್ ಮಾಹಿತಿ ನೀಡಿದ್ದಾರೆ.
'ಪ್ರತಿಭಟನೆ ಸಮಯದಲ್ಲಿ ಕನಿಷ್ಠ 25 ಸಾವಿರ ಮಂದಿ ಕೊಲ್ಲಲ್ಪಟ್ಟಿದ್ದಾರೆ ಎಂಬುದನ್ನು ಇರಾನ್‌ನಲ್ಲಿ ಲಭ್ಯವಿರುವ ಎಲ್ಲ ಪುರಾವೆಗಳು ಸೂಚಿಸುತ್ತಿವೆ' ಎಂದು ನಾರ್ವೆ ಮೂಲದ ಇರಾನ್ ಮಾನವ ಹಕ್ಕುಗಳ (ಐಎಚ್‌ಆರ್) ಎನ್‌ಜಿಒ ನಿರ್ದೇಶಕ ಮಹಮೂದ್ ಅಮೀರಿ ಮೊಘದ್ದಮ್ ತಿಳಿಸಿದ್ದಾರೆ.

