ಕಣ್ಣೂರು: 2008ರಲ್ಲಿ ನಡೆದಿದ್ದ ಸಿಪಿಐ(ಎಂ) ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲಶ್ಶೇರಿಯ ನ್ಯಾಯಾಲಯವು ಗುರುವಾರ ಏಳು ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ವಿಮಲ್ ಜೆ. ಸುಮಿತ್ ಅಲಿಯಾಸ್ ಕುಟ್ಟನ್, ಕೆ.ಕೆ ಪ್ರಜೇಶ್ ಬಾಬು, ಬಿ.ನಿಧಿನ್, ಕೆ.ಸನಲ್, ಸ್ಮಿಜೋಶ್, ಸಜೀಶ್ ಮತ್ತು ವಿ ಜಯೇಶ್ ಅವರನ್ನು ತಪ್ಪಿತಸ್ಥರು ಎಂದು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಘೋಷಿಸಿದ್ದಾರೆ.
ಆರೋಪಿಗಳಾದ ಸಂತೋಷ್ ಕುಮಾರ್, ಬಿ.ಶರತ್, ಇ.ಕೆ. ಸನೀಶ್ ಮತ್ತು ಕುನ್ನುಂಪ್ರತ್ ಅಜೇಶ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಆದರೆ, ಎಂಟನೇ ಆರೋಪಿ ಕೆ. ಅಜಿತ್ ವಿಚಾರಣೆಯ ವೇಳೆ ಮೃತಪಟ್ಟಿದ್ದರು.
2008ರ ಡಿಸೆಂಬರ್ 31ರಂದು ತಲಶ್ಶೇರಿಯ ಬಳಿಯ ಥಲೈನಲ್ಲಿ ಸಿಪಿಐ(ಎಂ) ಕಾರ್ಯಕರ್ತ ಲತೀಶ್ ಅವರನ್ನು ಹತ್ಯೆ ಮಾಡಲಾಗಿತ್ತು. ರಾಜಕೀಯ ದ್ವೇಷದ ಭಾಗವಾಗಿ ನಡೆದ ದಾಳಿಯಲ್ಲಿ ಲತೀಶ್ ಸ್ನೇಹಿತ ಕೂಡ ಗಾಯಗೊಂಡಿದ್ದರು.
ಆರೋಪಿಗಳ ಮೇಲೆ ಗಲಭೆ, ಕ್ರಿಮಿನಲ್ ಬೆದರಿಕೆ, ಪಿತೂರಿ, ಕೊಲೆ, ಕೊಲೆ ಯತ್ನ ಸೇರಿದಂತೆ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

