ತಿರುವನಂತಪುರ: ಪಿಣರಾಯಿ ವಿಜಂiiನ್ ನೇತೃತ್ವದ ಎರಡನೇ ಎಡರಂಗ ಸರ್ಕಾರದ ಕೊನೆಯ ಹಾಗೂ 2026-27 ನೇ ಹಣಕಾಸು ವರ್ಷದ ಮುಂಗಡಪತ್ರವನ್ನು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಮಂಡಿಸಿದರು. ಇದು ಅವರು ಮಂಡಿಸಿದ 6ನೇ ರಾಜ್ಯ ಬಜೆಟ್ ಆಗಿದೆ.
ಹಿರಿಯ ನಾಗರಿಕರ ಸಮಗ್ರ ಕಲ್ಯಾಣಕ್ಕಾಗಿರುವ ‘ಎಲ್ಡರ್ಲಿ’ ಬಜೆಟ್ ಇದಾಗಿದೆಯೆಂದು ಸಚಿವ ಬಜೆಟ್ ಮಂಡನೆ ಆರಂಭಿಸುತ್ತಿದ್ದಂತೆ ತಿಳಿಸಿದ್ದಾರೆ. ನಿರೀಕ್ಷೆಯಂತೆಯೇ ವಿವಿಧ ವಲಯಗಳಿಗೆ ಹೆಚ್ಚಿನ ಆದ್ಯತೆಯನ್ನು ಈ ಬಜೆಟ್‍ನಲ್ಲಿ ಕಲ್ಪಿಸಲಾಗಿದೆ. ಕಾಸರಗೋಡು ಅಭಿವೃದ್ಧಿ ಯೋಜನೆಗಾಗಿ ಬಜೆಟ್‍ನಲ್ಲಿ 80 ಕೋಟಿ ರೂ. ಮೀಸಲಿರಿಸಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಾಲ ಪಡೆಯಲು ಮಂಡಳಿಗೆ ರೂಪು ನೀಡಲಾಗುವುದು. ರಕ್ಷಣಾ ಸಂಶೋಧನಾ ಹಬ್‍ಗೆ 50 ಕೋಟಿ ರೂ, ರ್ಯಾಪಿಡ್ ಅರ್ಥ್ ಕಾರಿಡಾರ್ ಗೆ 100 ಕೋಟಿ ರೂ., ಎಂ.ಸಿ. ರಸ್ತೆ ಅಭಿವೃದ್ಧಿಗೆ 5217 ಕೋಟಿ ರೂ. , ಜಾಗತಿಕ ಗುಣಮಟ್ಟದ ಶಾಲೆಗಳನ್ನು ಸ್ಥಾಪಿಸಲು 10 ಕೋಟಿ ರೂ. ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ. ರಾಜ್ಯದ ಆಟೋ ಸ್ಟ್ಯಾಂಡ್‍ಗಳನ್ನು ಸ್ಮಾರ್ಟ್ ಮೈಕ್ರೋ ಹಬ್‍ಗಳನ್ನಾಗಿ ಪರಿವರ್ತಿಸಲಾಗುವುದು. ರಾಜ್ಯದ ಪ್ರಧಾನ ಕೇಂದ್ರಗಳಲ್ಲಿ ಕೇರಳ ಕಲಾರೂಪ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ನ್ಯೂ ನಾರ್ಮಲ್ ಕೇರಳ ನಿರ್ಮಾಣ ಸರಕಾರದ ಗುರಿಯಾಗಿದೆ. ಮಹಿಳಾ ಸುರಕ್ಷಾ ಪಿಂಚಣಿಗಾಗಿ ಬಜೆಟ್‍ನಲ್ಲಿ 3820 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. 2026-27ನೇ ಆರ್ಥಿಕ ವರ್ಷದಲ್ಲಿ ಕಲ್ಯಾಣ ಪಿಂಚಣಿ ವಿತರಣೆಗಾಗಿ 14500 ಕೋಟಿ ರೂ. ತೆಗೆದಿರಿಸ ಲಾಗಿದೆ. ಆಶಾ ಕಾರ್ಯಕರ್ತೆ ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ತಿಂಗಳ ವೇತನದಲ್ಲಿ ತಲಾ 1000 ರೂ.ನಂತೆ, ಸಹಾಯಕಿಯರ ಗೌರವಧನ 500 ರೂ.ನಂತೆ ಹೆಚ್ಚಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆ ಜನಪ್ರತಿನಿಧಿಗಳ ಗೌರವಧನ ಹೆಚ್ಚಿಸಲಾಗುವುದು. ಜನಪ್ರತಿನಿಧಿಗಳ ಕ್ಷೇಮಕ್ಕಾಗಿ ಕಲ್ಯಾಣ ನಿಧಿ ಯೋಜನೆ ಆರಂಭಿಸಲಾಗುವುದು. ಘನತ್ಯಾಜ್ಯಗಳ ಸಂಸ್ಕರಣೆಗಾಗಿ 160 ಕೋಟಿ ರೂ. ಮೀಸಲಿರಿಸಲಾಗುವುದು. ಶಾಲಾ ಅಡುಗೆ ಕಾರ್ಮಿಕರ ದಿನವೇತನದಲ್ಲಿ ತಲಾ 25 ರೂ.ನಂತೆ ಹೆಚ್ಚಿಸಲಾಗು ವುದು. ಪ್ರೀ ಪ್ರೈಮರಿ ಶಾಲಾ ಅಧ್ಯಾಪಕ ಹಾಗೂ ಸಾಕ್ಷರತಾ ಪ್ರೇರಕ್‍ಗಳ ತಿಂಗಳ ವೇತನದಲ್ಲಿ ತಲಾ 1000 ರೂ.ನಂತೆ ಹೆಚ್ಚಿಸಲಾಗು ವುದು. 1ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಅಪಘಾತ ವಿಮೆ ಯೋಜನೆಯನ್ನು ಜ್ಯಾರಿಗೊಳಿ ಸಲಾಗುವುದು. ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆಗಾಗಿ ಹೊಸ ಯೋಜನೆ ಆರಂಭಿಸಲಾಗುವುದು. ನೇಟಿವಿಟಿ ಕಾರ್ಡ್‍ಗಾಗಿ ಬಜೆಟ್‍ನಲ್ಲಿ 20 ಕೋಟಿ ರೂ. ಮೀಸಲಿಡಲಾಗಿದೆಯೆಂದೂ ಸಚಿವರು ತಿಳಿಸಿದ್ದಾರೆ.

