ಶಿಮ್ಲಾ: ಭಾರಿ ಹಿಮಪಾತದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಒಟ್ಟು 835 ರಸ್ತೆಗಳು ಬಂದ್ ಆಗಿವೆ.
ಈ ನಡುವೆ ರಾಜ್ಯದ ಎತ್ತರದ ಪ್ರದೇಶಗಳಲ್ಲಿ ಸೋಮವಾರದಿಂದ ಭಾರಿ ಹಿಮಪಾತ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು, ರಾಜ್ಯದಾದ್ಯಂತ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಹಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದೂ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಒಟ್ಟು 1,942 ವಿದ್ಯುತ್ ಪರಿವರ್ತಕಗಳು ಹಾಳಾಗಿದ್ದು, ಸಾವಿರಾರು ಮನೆಗಳು ವಿದ್ಯುತ್ ಸಂಪರ್ಕವನ್ನು ಕಳೆದುಕೊಂಡಿವೆ.
ಕುಲ್ಲು, ಕಿನ್ನೌರ್, ಛಂಬಾ, ಲಾಹೌಲ್ ಮತ್ತು ಸ್ಪೀತಿ ಜಿಲ್ಲೆಗಳಲ್ಲಿ ಮಂಗಳವಾರ ಹಿಮಪಾತ ಹಾಗೂ ಮಳೆಯಾಗುವ ಸಂಭವವಿರುವುದರಿಂದ ಇಲ್ಲಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಉಳಿದ 9 ಜಿಲ್ಲೆಗಳಲ್ಲಿ 'ಯಲ್ಲೋ ಅಲರ್ಟ್' ಮುಂದುವರಿಯಲಿದೆ.

