HEALTH TIPS

ಕರ್ನಾಟಕಕ್ಕೆ 8 ಪದ್ಮ ಗೌರವ; ಶತಾವಧಾನಿ ಆರ್. ಗಣೇಶ್ ರಿಗೆ ಪದ್ಮಭೂಷಣ

ಬೆಂಗಳೂರು: 2026ರ ಪದ್ಮ ಪ್ರಶಸ್ತಿಗಳು ಪ್ರಕಟವಾಗಿದ್ದು, ಈ ಬಾರಿ ಪದ್ಮ ಪ್ರಶಸ್ತಿಗಳಿಗೆ ಕರ್ನಾಟಕದಿಂದ ಎಂಟು ಮಂದಿ ಸಾಧಕರು ಆಯ್ಕೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಅಪೂರ್ವ ಸಾಧನೆ ಸಲ್ಲಿಸಿರುವ ಶತಾವಧಾನಿ ಆರ್. ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.

ಏಳು ಮಂದಿ ಕರ್ನಾಟಕದ ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಸೇವೆಗಾಗಿ ಮಂಡ್ಯದ ಪುಸ್ತಕ ಮನೆಯ ಅಂಕೆ ಗೌಡ, ಸಾಮಾಜಿಕ ಸೇವೆಗಾಗಿ ಎಸ್.ಜಿ. ಸುಶೀಲಮ್ಮ, ಸಾಹಿತ್ಯ ಕ್ಷೇತ್ರದಲ್ಲಿ ಶಶಿ ಶೇಖರ್ ವೆಂಪತಿ, ವೈದ್ಯಕೀಯ ವಿಭಾಗದಲ್ಲಿ ಡಾ. ಸುರೇಶ್ ಹಂಗನವಾಡಿ, ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಟಿ.ಟಿ. ಜಗನ್ನಾಥನ್, ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಶುಭಾ ವೆಂಕಟೇಶ ಅಯ್ಯಂಗಾರ್, ಹಾಗೂ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರಭಾಕರ್ ಬಸವಪ್ರಭು ಕೋರೆ ಅವರಿಗೆ ಪದ್ಮಶ್ರೀ ಗೌರವ ನೀಡಲಾಗಿದೆ.

ಶತಾವಧಾನಿ ಗಣೇಶ್ ಅವರ ಪರಿಚಯ ಇಲ್ಲಿದೆ...

ಬಹುಭಾಷಾ ಪಂಡಿತರಾದ ಶತಾವಧಾನಿ ಆರ್.ಗಣೇಶ ಅವರಿಗೆ ಕಲಾ ಕ್ಷೇತ್ರದಲ್ಲಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯು ಸಂದಿದೆ. ಬಹುಭಾಷಾ ಪಂಡಿತರಾದ ಶತಾವಧಾನಿ ಗಣೇಶ ಅವರು 1962ರಲ್ಲಿ ಕೋಲಾರದಲ್ಲಿ ಜನಿಸಿದರು. ಅವರ ತಂದೆ ಆರ್.ಶಂಕರನಾರಾಯಣ ಅಯ್ಯರ್ ಹಾಗೂ ತಾಯಿ ಅಲಮೇಲಮ್ಮ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಹಾಗೂ ಗೌರಿಬಿದನೂರಿನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು.

ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಅವರು, ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವಿ ಪಡೆದಿದ್ದಾರೆ. ಮೈಸೂರ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

'ಕನ್ನಡದಲ್ಲಿ ಅವಧಾನ ಕಲೆ' ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪ್ರಪ್ರಥಮ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಸಂಸ್ಕೃತ, ಕನ್ನಡ, ತೆಲುಗು ಹೀಗೆ 8 ಭಾಷೆಗಳಲ್ಲಿ ಅವಧಾನವನ್ನು ಪ್ರಸ್ತುತಪಡಿಸಿದ್ದಾರೆ. 'ಚಿತ್ರಕಾವ್ಯ' ಗಣೇಶ್ ಅವರ ವಿಶೇಷತೆಯಾಗಿದ್ದು, ಅಮೆರಿಕ ಮತ್ತು ಯೂರೋಪ್ ದೇಶಗಳಿಗೆ ಭೇಟಿ ನೀಡಿ ಈ ಕುರಿತು ಪ್ರದರ್ಶನ ನೀಡಿದ್ದಾರೆ. ಈ ಕಲೆಯ ಕುರಿತು ಶತಾವಧಾನ ಶಾರದೆ ಹಾಗೂ ಶತಾವಧಾನ ಶ್ರೀವಿದ್ಯೆ ಎರಡು ಕೃತಿಗಳನ್ನು ರಚಿಸಿದ್ದಾರೆ.

ಕಾವ್ಯಮೀಮಾಂಸೆ, ಛಂದಶ್ಯಾಸ್ತ್ರ, ವೇದಾಂತ, ಉಪನಿಷತ್, ಧರ್ಮಶಾಸ್ತ್ರ, ಇತಿಹಾಸ, ಸಂಸ್ಕೃತಿ, ಕಲೆ, ಭಾರತೀಯ ತತ್ವಶಾಸ್ತ್ರ, ವ್ಯಾಕರಣ, ಅಲಂಕಾರ ಶಾಸ್ತ್ರ ವಿಷಯಗಳಲ್ಲಿ ಪರಿಣಿತರಾಗಿರುವ ಗಣೇಶ್ ಅವರು, ಸಂಸ್ಕೃತದಲ್ಲಿ 12ಕ್ಕೂ ಹೆಚ್ಚಿನ ನಾಟಕಗಳನ್ನೂ, 16 ಕಾವ್ಯಗಳನ್ನೂ, ಕನ್ನಡದಲ್ಲಿ 8 ಕಾವ್ಯಗಳನ್ನು, 3 ಕಾದಂಬರಿಗಳನ್ನು ಬರೆದಿದ್ದಾರೆ. 6 ಕೃತಿಗಳನ್ನು ಅನುವಾದ ಮಾಡಿದ್ದಾರೆ.

ಗಣೇಶ ಅವರು ತಮ್ಮ ಮೊದಲ ಶತಾವಧಾನವನ್ನು 1991ರ ಡಿ.15ರಂದು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಪ್ರದರ್ಶಿಸಿದರು. 2012ರ ನವೆಂಬರ್ 30ರಿಂದ ಡಿಸೆಂಬರ್ 2 ರವರೆಗೆ ಅವರು ಕನ್ನಡದಲ್ಲಿ ಮೊದಲ ಶತಾವಧಾನವನ್ನು ಸಂಪೂರ್ಣವಾಗಿ ಪ್ರದರ್ಶಿಸಿದರು. 2014ರ ಫೆ.16 ರಂದು ಬೆಂಗಳೂರಿನಲ್ಲಿ ಅವರು ತಮ್ಮ 1000ನೇ ಅವಧಾನವನ್ನು ಪ್ರದರ್ಶಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries