ಗ್ಯಾಂಗ್ಟಕ್: ಉತ್ತರ ಸಿಕ್ಕಿಂನ ಭಾರತ-ಚೀನಾ ಗಡಿಯ ಬಳಿ ಸುಮಾರು 15,000 ಅಡಿ ಎತ್ತರದಲ್ಲಿರುವ ಮುಗುಥಾಂಗ್ ಗ್ರಾಮದಲ್ಲಿ ಭಾರತೀಯ ಸೇನೆಯ ತ್ರಿಶಕ್ತಿ ಕಾರ್ಪ್ಸ್ 10 ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದೆ ಎಂದು ಅಧಿಕೃತ ಹೇಳಿಕೆ ಸೋಮವಾರ ತಿಳಿಸಿದೆ.
ಮುಗುಥಾಂಗ್ ಅತಿ ಕಡಿಮೆ ಜನಸಂಖ್ಯೆಯ ಗಡಿ ಗ್ರಾಮವಾಗಿದ್ದು, 10 ಕುಟುಂಬಗಳ 32 ನಿವಾಸಿಗಳು ವಾಸಿಸುತ್ತಿದ್ದಾರೆ.
ಕೇಂದ್ರದ 'ವೈಬ್ರಂಟ್ ವಿಲೇಜಸ್ ಪ್ರೋಗ್ರಾಂ'ಗೆ ಹೊಂದಿಕೆಯಾಗುವ ಈ ಉಪಕ್ರಮವು, ಸುಸ್ಥಿರ ವಿದ್ಯುತ್ ಸರಬರಾಜನ್ನು ಖಚಿತಪಡಿಸಿ ದೂರದ ಗಡಿ ಪ್ರದೇಶಗಳಲ್ಲಿ ಜೀವನ ಗುಣಮಟ್ಟ ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಅದು ಹೇಳಿದೆ.
'ಈ ಸ್ಥಾವರವು ಹಳ್ಳಿಯ ಎಲ್ಲಾ ಮನೆಗಳಿಗೆ ವಿದ್ಯುತ್ ಒದಗಿಸಿ, ವರ್ಷಪೂರ್ತಿ ವಾಸಕ್ಕೆ ಅನುವು ಮಾಡಿಕೊಡುತ್ತದೆ. ರಾತ್ರಿಯ ಸುರಕ್ಷತೆಯನ್ನು ಸುಧಾರಿಸಿ, ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಕಠಿಣ ಚಳಿಗಾಲದಲ್ಲಿ ನಡೆಯುವ ವಲಸೆಯನ್ನು ನಿವಾರಿಸುತ್ತದೆ' ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

