ಇದೀಗ ಸಿಎಂ ಸಿದ್ದರಾಮಯ್ಯ ಪತ್ರಕ್ಕೆ ಕೇರಳ ಸಿಎಂ ಪಿಣರಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಹೊರರಾಜ್ಯ, ವಿದೇಶಿ ವಿದ್ಯಾರ್ಥಿಗಳಿಗೆ ಮಲಯಾಳಂ ಪರೀಕ್ಷೆ ಕಡ್ಡಾಯ ಅಲ್ಲ ಎಂದು ಹೇಳಿದ್ದಾರೆ. 9, 10ನೇ ತರಗತಿ, ಪಿಯುಸಿಗೆ ಮಲಯಾಳಂ ಪರೀಕ್ಷೆ ಕಡ್ಡಾಯಗೊಳಿಸಿಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಸೂದೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲಾಗಿದೆ. ಕನ್ನಡ, ತಮಿಳು ಮಾತನಾಡುವ ಭಾಷಾ ಅಲ್ಪಸಂಖ್ಯಾತರ ಹಕ್ಕು ರಕ್ಷಣೆಗಾಗಿ ಈ ಮಸೂದೆಯನ್ನು ತರಲಾಗಿದೆ. ಹಕ್ಕು ರಕ್ಷಣೆಗೆ ಮಸೂದೆಯ ಸೆಕ್ಷನ್ 7ರಲ್ಲಿ ರಕ್ಷಣಾತ್ಮಕ ನಿಯಮ ಅಳವಡಿಕೆ ಮಾಡಲಾಗಿದೆ. ಸಚಿವಾಲಯ, ಇಲಾಖೆ ಮುಖ್ಯಸ್ಥರ ಜತೆ ಪತ್ರ ವ್ಯವಹಾರವನ್ನು ಕೂಡ ತಮ್ಮ ಭಾಷೆಯಲ್ಲೇ ನಡೆಸಬಹುದು ಎಂದು ಹೇಳಿದ್ದಾರೆ. ಕಚೇರಿಗಳಲ್ಲೂ ತಮ್ಮ ಮಾತೃಭಾಷೆಯಲ್ಲೇ ಪತ್ರ ವ್ಯವಹಾರಕ್ಕೆ ಅವಕಾಶ ನೀಡಲಾಗಿದೆ. ಜತೆಗೆ ಕೇರಳ ಸಚಿವಾಲಯ ಹಾಗೂ ಕಚೇರಿಗಳ ನಿಮ್ಮ ಭಾಷೆಯಲ್ಲೇ ಉತ್ತರಿಸುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮದ ಅನ್ವಯ ಲಭ್ಯವಿರುವ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಭಾರತೀಯ ಸಂವಿಧಾನದ 346 ಮತ್ತು 347ನೇ ವಿಧಿಗಳು ಹಾಗೂ 1963ರ ಅಧಿಕೃತ ಭಾಷಾ ಕಾಯ್ದೆಗೆ ಈ ಭಾಷಾ ನೀತಿ ಅನುಗುಣವಾಗಿದೆ. ಕೇರಳ ಸರ್ಕಾರ ಒಕ್ಕೂಟ ವ್ಯವಸ್ಥೆಯ ಹಕ್ಕುಗಳನ್ನು ಎತ್ತಿಹಿಡಿಯುತ್ತಿದೆ. ಪ್ರತಿಯೊಬ್ಬ ನಾಗರಿಕನ ಭಾಷಾ ಗುರುತನ್ನು ರಕ್ಷಿಸಲು ಸರ್ಕಾರ ಬದ್ಧ ಎಂದು ಹೇಳಿದ್ದಾರೆ.
ಮಲಯಾಳ ಭಾಷಾ ಮಸೂದೆಯಲ್ಲೇನಿದೆ?
ಈ ಮಸೂದೆ ಕೇರಳದಾದ್ಯಂತ ಮಲಯಾಳವನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಮಸೂದೆ. 016 ರಲ್ಲಿ ಮಂಡಿಸಲಾದ ಈ ಮಸೂದೆಯನ್ನು ಭಾಷಾ ಅಲ್ಪಸಂಖ್ಯಾತರಿಗೆ ವಿರುದ್ದವಾಗಿದೆ ಎಂದು ಅಂದಿನ ರಾಜ್ಯಪಾಲರು ತಿರಸ್ಕರಿಸಿದ್ದರು. 1 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಯೂ ಸೇರಿದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯಗೊಳಿಸುವುವ ಬಗ್ಗೆ ಈ ಮಸೂದೆಯಲ್ಲಿ ಉಲ್ಲೇಖವಾಗಿದೆ. ರಾಜ್ಯಪಾಲರು ತಿರಸ್ಕರಿಸಿದ್ದ ನಂತರ ಇದರಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದು, ಮತ್ತೆ ಈ ಮಸೂದೆಯನ್ನು ಮಂಡಿಸಲು ಮುಂದಾಗಿದೆ.

