HEALTH TIPS

ಅಮೆರಿಕ 'ಸೆರೆ'ಯಲ್ಲಿ ವೆನಿಜುವೆಲಾ ಅಧ್ಯಕ್ಷ: ಅಂತರರಾಷ್ಟ್ರೀಯ ಸಮುದಾಯ ಖಂಡನೆ

ಕರಾಕಸ್:: ಅಮೆರಿಕ ಸೇನೆ ಶುಕ್ರವಾರ ತಡರಾತ್ರಿ ವೆನಿಜುವೆಲಾದ ರಾಜಧಾನಿ ಕರಾಕಸ್‌ ಮೇಲೆ ಭಾರಿ ಪ್ರಮಾಣದಲ್ಲಿ ವಾಯುದಾಳಿ ನಡೆಸಿದ್ದು, ಅಧ್ಯಕ್ಷ ನಿಕೊಲಸ್‌ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್‌ ಅವರನ್ನು ಸೆರೆ ಹಿಡಿದಿದೆ. 

'ವೆನಿಜುವೆಲಾದ ಅಧ್ಯಕ್ಷ ಮತ್ತು ಅವರ ಪತ್ನಿಯನ್ನು ವಶಕ್ಕೆ ಪಡೆದು, ದೇಶದಿಂದ ಹೊರಗೆ ಹಾಕಿದ್ದೇವೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 'ಟ್ರುಥ್‌ ಸೋಷಿಯಲ್‌' ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

'ಮಡೂರೊ ಅವರನ್ನು ವೆನಿಜುವೆಲಾದ 'ಭದ್ರಕೋಟೆ'ಯಿಂದ ಸೆರೆ ಹಿಡಿಯಲಾಗಿದೆ. ಅಲ್ಲಿಂದ ಅವರನ್ನು ಹೆಲಿಕಾಪ್ಟರ್‌ ಮೂಲಕ ಅಮೆರಿಕದ ಸೇನೆಯ ಹಡಗಿಗೆ ಕರೆದುಕೊಂಡು ಬರಲಾಗಿದೆ. ಅಲ್ಲಿಂದ ವಿಚಾರಣೆಗಾಗಿ ನ್ಯೂಯಾರ್ಕ್‌ಗೆ ಕರೆದೊಯ್ಯಲಾಗುವುದು. ಈ ಕಾರ್ಯಾಚರಣೆಯಲ್ಲಿ ಅಮೆರಿಕದ ಸೈನಿಕರಿಗೆ ಯಾವುದೇ ಜೀವಹಾನಿ ಆಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆಯಷ್ಟೇ. ಒಟ್ಟಾರೆ ಕಾರ್ಯಾಚರಣೆ ಅದ್ಭುತವಾಗಿ ನಡೆಯಿತು' ಎಂದು ಟ್ರಂಪ್‌ 'ಫಾಕ್ಸ್‌ ನ್ಯೂಸ್‌'ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ‌

- ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷಅಮೆರಿಕ ಸೇನೆಯ ವಿಶೇಷ ಪಡೆ ವೆನಿಜುವೆಲಾ ಅಧ್ಯಕ್ಷ ನಿಕೊಲಸ್‌ ಮಡೂರೊ ಅವರನ್ನು ವಶಕ್ಕೆ ಪಡೆಯುವುದನ್ನು ನೇರವಾಗಿ ವೀಕ್ಷಿಸಿದೆ. ಇದು ಅದ್ಭುತವಾಗಿತ್ತು. ಅಕ್ಷರಶಃ ಟಿವಿ ಶೋ ರೀತಿ ಇತ್ತು

'ನಿಕೊಲಸ್‌ ಮಡೂರೊ ಅಂತರರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲದ ಪ್ರಮುಖ ಸೂತ್ರಧಾರ' ಎಂದು ಆರೋಪಿಸಿ ಅಮೆರಿಕ ಈ ದಾಳಿ ನಡೆಸಿದೆ. ಆದರೆ, ವೆನಿಜುವೆಲಾ ಈ ಆರೋಪವನ್ನು ತಳ್ಳಿಹಾಕಿದ್ದು, 'ಅಮೆರಿಕವು ದೇಶದ ಭಾರಿ ತೈಲ ನಿಕ್ಷೇಪದ ಮೇಲೆ ಕಣ್ಣಿಟ್ಟಿದೆ. ಮಡೂರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ದೇಶದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಯತ್ನಿಸುತ್ತಿದೆ' ಎಂದು ಆರೋಪಿಸಿದೆ.

ತಡರಾತ್ರಿ ದಾಳಿ: ಕರಾಕಸ್‌ ಮೇಲೆ ಶುಕ್ರವಾರ ಮಧ್ಯರಾತ್ರಿ ಅಮೆರಿಕದ ಸೇನಾ ವಿಮಾನಗಳು ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿವೆ. ಇದರ ಬೆನ್ನಲ್ಲೇ ಕನಿಷ್ಠ 7 ಸ್ಫೋಟಗಳು ಸಂಭವಿಸಿವೆ. ಟ್ರಂಪ್ ಅವರು, ದಾಳಿ ನಡೆಸಿರುವುದನ್ನು ಶನಿವಾರ ಬೆಳಗಿನ ಜಾವ 4.30ಕ್ಕೆ ಖಚಿತಪಡಿಸಿದರು. 'ಅಮೆರಿಕದ ಕಾನೂನು ಜಾರಿ ಸಂಸ್ಥೆಯ ಸಯೋಗದೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ' ಎಂದೂ ಮಾಹಿತಿ ನೀಡಿದರು.

ದಾಳಿಯ ಬೆನ್ನಲ್ಲೇ, ಕರಾಕಸ್‌ ನಗರದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತು. ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬರುತ್ತಿರುವ, ಬಾನೆತ್ತರಕ್ಕೆ ಹೊಗೆ ಆವರಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. 'ಶನಿವಾರ ಬೆಳಗಿನ ಜಾವದವರೆಗೆ ಯಾವುದೇ ಜೀವಹಾನಿ ವರದಿಯಾಗಿಲ್ಲ. ವಾಯುದಾಳಿ 30 ನಿಮಿಷ ಮುಂದುವರಿಯಿತು' ಎಂದು ಮೂಲಗಳು ಹೇಳಿವೆ.

'ಮಾದಕ ವಸ್ತು ಮತ್ತು ಭಯೋತ್ಪಾದನೆ ಪ್ರಕರಣದಲ್ಲಿ ಮಡೂರೊ ಹಾಗೂ ಅವರ ಪತ್ನಿ ಅಮೆರಿಕದ ನೆಲದಲ್ಲಿ, ಅಮೆರಿಕದ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ' ಎಂದು ಅಮೆರಿಕದ ಅಟಾರ್ನಿ ಜನರಲ್‌ ಪಮೆಲಾ ಬಾಂಡಿ ಹೇಳಿದ್ದಾರೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿ:

ಅಮೆರಿಕ ಸೇನೆಯು ವೆನಿಜುವೆಲಾದ ನಾಗರಿಕರು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಇದು ಸರ್ವಾಧಿಕಾರಿ ಧೋರಣೆ ಎಂದು ಆರೋಪಿಸಿರುವ ಮಡೂರೊ ಸರ್ಕಾರ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಡಿಯೊಸ್‌ ಡಾಡೊ ಕಬೆಲ್ಲೊ, ವೆನಿಜುವೆಲಾದ ಗೃಹ ಸಚಿವಅಮೆರಿಕದ ಮಿಲಿಟರಿ ದಬ್ಬಾಳಿಕೆ ಮತ್ತು ಸರ್ವಾಧಿಕಾರ ಕೊನೆಗೊಳಿಸಲು ವೆನಿಜುವೆಲಾದ ಎಲ್ಲ ಸಾಮಾಜಿಕ ಮತ್ತು ರಾಜಕೀಯ ಶಕ್ತಿಗಳು ಒಂದಾಗಬೇಕು.

ಮಿಲಿಟರಿ ಕಾರ್ಯಾಚರಣೆ ಮತ್ತು ಸ್ಫೋಟದ ಬೆನ್ನಲ್ಲೇ, ಫೆಡರಲ್‌ ಏವಿಯೇಷನ್‌ ಅಮೆರಿಕದ ವಾಣಿಜ್ಯ ವಿಮಾನಗಳಿಗೆ ವೆನಿಜುವೆಲಾದ ವಾಯುಪ್ರದೇಶ ಪ್ರವೇಶಿಸುವುದನ್ನು ನಿಷೇಧಿಸಿದೆ.

'ಅಮೆರಿಕದ ದಾಳಿಗೆ ಮೂರು ಕಾರಣ'

ವೆನಿಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಲು 'ವಲಸೆ' 'ಮಾದಕವಸ್ತು' ಮತ್ತು 'ಮಾದಕ ವಸ್ತು ಭಯೋತ್ಪಾದನೆ' ಸೇರಿ ಮೂರು ಕಾರಣಗಳನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಅಮೆರಿಕದ ದಕ್ಷಿಣ ಗಡಿಯ ಮೂಲಕ 2013ರಿಂದ ಈಚೆಗೆ ವೆನಿಜುವೆಲಾದ ಸುಮಾರು 80 ಲಕ್ಷದಷ್ಟು ವಲಸಿಗರು ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದಾರೆ ಎನ್ನುವುದು ಟ್ರಂಪ್‌ ಆರೋಪ. ಅಧ್ಯಕ್ಷ ಮಡೂರೊ ತನ್ನ ದೇಶದ ಕೈದಿಗಳನ್ನು ಅಮೆರಿಕಕ್ಕೆ ವಲಸೆ ಹೋಗುವಂತೆ ಬಲವಂತಪಡಿಸುತ್ತಿದ್ದು ಅಲ್ಲಿನ ಜೈಲುಗಳನ್ನು ಖಾಲಿ ಮಾಡಿಸುತ್ತಿದ್ದಾರೆ ಎಂದು ಟ್ರಂಪ್‌ ದೂರಿದ್ದಾರೆ.

ಅಮೆರಿಕಕ್ಕೆ ಫೆಂಟಾನಿಲ್ ಕೊಕೇನ್‌ ಸೇರಿದಂತೆ ಹಲವು ಮಾದಕದ್ರವ್ಯಗಳ ಕಳ್ಳಸಾಗಣೆಗೆ ವೆನಿಜುವೆಲಾ ಪ್ರಮುಖ ಮಾರ್ಗವಾಗಿದೆ. ಅಮೆರಿಕದ ದಾಳಿಗೆ ಇದು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮಡೂರೊ ವಿರುದ್ಧ ಮಾದಕ ವಸ್ತುಗಳ ಭಯೋತ್ಪಾದನೆ ಆರೋಪವನ್ನು ಅಮೆರಿಕ ಈಗಾಗಲೇ ಹೊರಿಸಿದೆ. ಕೆರಿಬಿಯನ್ ಸಮುದ್ರ ಮತ್ತು ಪೂರ್ವ ಪೆಸಿಫಿಕ್ ಸಾಗರದ ಮೂಲಕ ನಡೆಯುವ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಅಮೆರಿಕವು ಸೆಪ್ಟೆಂಬರ್‌ನಿಂದಲೇ ದಾಳಿ ನಡೆಸುತ್ತಿದೆ. ಇದುವರೆಗೆ ಈ ದಾಳಿಯಲ್ಲಿ 115ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೇರವಾಗಿ ವೆನಿಜುವೆಲಾದ ನೆಲದಲ್ಲಿ ದಾಳಿ ನಡೆಸಿದ್ದು ವಾರದ ಹಿಂದೆ. ಅಮೆರಿಕದ ಸೆಂಟ್ರಲ್‌ ಇಂಟಲಿಜೆನ್ಸ್‌ ಏಜೆನ್ಸಿಯು (ಸಿಐಎ) ಕಳೆದ ವಾರ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ವೆನಿಜುವೆಲಾದ ಬೋಟ್‌ಗಳನ್ನು ಗುರಿಯಾಗಿಸಿ ಡ್ರೋನ್‌ ದಾಳಿ ನಡೆಸಿತ್ತು.

ಬಸ್‌ ಚಾಲಕರಾಗಿದ್ದ ಮಡೂರೊ ಅವರು ವೆನಿಜುವೆಲಾದ ಕಾರ್ಮಿಕ ಮುಖಂಡರೊಬ್ಬರ ಪುತ್ರ. 1992ರಲ್ಲಿ ಸೇನಾಧಿಕಾರಿ ಹ್ಯೂಗೊ ಚಾವೆಜ್‌ ವಿರುದ್ಧ ದಂಗೆ ಯತ್ನ ನಡೆದಾಗ ಅವರು ಬಸ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಚಾವೆಜ್‌ ಪರವಾಗಿ ಹೋರಾಟ ನಡೆಸುವ ಮೂಲಕ ಅಲ್ಲಿನ ರಾಜಕೀಯದಲ್ಲಿ ಮುಂಚೂಣಿಗೆ ಬಂದ ಮಡೂರೊ 1998ರ ಚುನಾವಣೆಯಲ್ಲಿ ಗೆದ್ದು ವಿದೇಶಾಂಗ ಸಚಿವರಾಗಿದ್ದರು. ತೈಲ-ಹಣಕಾಸು ಕಾರ್ಯಕ್ರಮಗಳ ಮೂಲಕ ಅಂತರರಾಷ್ಟ್ರೀಯ ಮೈತ್ರಿಯನ್ನು ಬಲಪಡಿಸಿಕೊಂಡಿದ್ದರು. ಚಾವೆಜ್‌ ತಮ್ಮ ಉತ್ತರಾಧಿಕಾರಿಯಾಗಿ ಮಡೂರೊ ಅವರನ್ನು ಆಯ್ಕೆ ಮಾಡಿದ್ದರು. 2013ರಲ್ಲಿ ಚಾವೆಜ್‌ ನಿಧನದ ನಂತರ ವೆನಿಜುವೆಲಾದ ಅಧ್ಯಕ್ಷರಾಗಿ ಆಯ್ಕೆಯಾದರು. ವೆನಿಜುವೆಲಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು. ಅಮೆರಿಕ ನಡೆಸಿರುವ ಏಕಪಕ್ಷೀಯ ಮಿಲಿಟರಿ ಕ್ರಮವನ್ನು ವಿಶ್ವಸಂಸ್ಥೆ ಗಮನಿಸಬೇಕು - ಗುಸ್ತಾವೊ ಪೆಟ್ರೊ ಕೊಲಂಬಿಯಾ ಅಧ್ಯಕ್ಷ

- ಕ್ಯೂಬಾವೆನಿಜುವೆಲಾದ ಜನರ ಮೇಲೆ ಅಮೆರಿಕ ನಡೆಸಿರುವ ದಾಳಿ ಕ್ರಿಮಿನಲ್‌ ಅಪರಾಧ. ಅಂತರರಾಷ್ಟ್ರೀಯ ಸಮುದಾಯ ಇದರ ವಿರುದ್ಧ ತುರ್ತಾಗಿ ಸ್ಪಂದಿಸಬೇಕು.- ಐರೋಪ್ಯ ಒಕ್ಕೂಟವೆನಿಜುವೆಲಾದಲ್ಲಿ ಸಂಯಮ ಪಾಲಿಸಬೇಕು. ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಅಮೆರಿಕ ಗೌರವ ಕೊಡಬೇಕು.- ಆಯತೊಲ್ಲಾ ಅಲಿ ಖಮೇನಿ, ಇರಾನ್‌ನ ಪರಮೋಚ್ಚ ನಾಯಕ ನಾವು ಶತ್ರುಗಳಿಗೆ ಮಣಿಯುವುದಿಲ್ಲ. ದೇವರು ಬಯಸಿದರೆ ದೇವರ ಅನುಗ್ರಹವಿದ್ದರೆ ನಾವು ಶತ್ರುವನ್ನು ನಮ್ಮ ಮುಂದೆ ಮಂಡಿಯೂರುವಂತೆ ಮಾಡುತ್ತೇವೆ - ರಷ್ಯಾದ ವಿದೇಶಾಂಗ ಸಚಿವಾಲಯ ವೆನಿಜುವೆಲಾದ ಅಧ್ಯಕ್ಷ ಮತ್ತು ಪತ್ನಿಯನ್ನು ಸೆರೆಹಿಡಿದು ಬಲವಂತಾಗಿ ದೇಶದಿಂದ ಹೊರಗೆ ಹಾಕಿರುವುದು ರಾಷ್ಟ್ರದ ಸಾರ್ವಭೌಮತ್ವಕ್ಕೆ ವಿರುದ್ಧವಾದದ್ದು. ಅಮೆರಿಕ ತುರ್ತಾಗಿ ಸ್ಪಷ್ಟನೆ ನೀಡಬೇಕು - ಗೇಬ್ರಿಯೆಲ್ ಬೊರಿಕ್‌ ಚಿಲಿ ಅಧ್ಯಕ್ಷ ವೆನಿಜುವೆಲಾದಲ್ಲಿ ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸುತ್ತೇವೆ ಮತ್ತು ಕಳವಳ ವ್ಯಕ್ತಪಡಿಸುತ್ತೇವೆ. ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು. - ಗುಸ್ತಾವೊ ಪೆಟ್ರೊ, ಕೊಲಂಬಿಯಾ ಅಧ್ಯಕ್ಷ ವೆನಿಜುವೆಲಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು. ಅಮೆರಿಕ ನಡೆಸಿರುವ ಏಕಪಕ್ಷೀಯ ಮಿಲಿಟರಿ ಕ್ರಮವನ್ನು ವಿಶ್ವಸಂಸ್ಥೆ ಗಮನಿಸಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries