ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಶೀತಗಾಳಿ ನಡುವೆ ಮಳೆ: ಉತ್ತರ ಭಾರತದಾದ್ಯಂತ ದಟ್ಟ, ಮಂಜು ಶೀತಗಾಳಿ ಮುಂದುವರೆದಿದೆ. ಈ ನಡುವೆಯೇ ಪಶ್ಚಿಮ ಹಿಮಾಲಯಪ್ರದೇಶದ ಮತ್ತು ಪಕ್ಕದ ಪ್ರದೇಶಗಳ ಅಲ್ಲಲ್ಲಿ ಮುಂದಿನ ಹಲವು ದಿನಗಳವರೆಗೆ ಮಳೆ ಹಾಗೂ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಇಂದು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ವ್ಯಾಪಕವಾಗಿ ಮಳೆ ಮತ್ತು ಹಿಮ ಬೀಳಲಿದೆ ಎಂದು ಭಾರತ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಪರಿಣಾಮ ವಾಹನ ಸವಾರರಿಗೆ ಅಡಚಣೆಯಾಗುವ ಸಾಧ್ಯತೆಯಿದೆ. ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದೆ.
ರಾಷ್ಟ್ರ ರಾಜಧಾನಿ ಹವಾಮಾನ ವಿವರ: ಇದೀಗ ರಾಷ್ಟ್ರ ರಾಜಧಾನಿ ನವದೆಹಲಿ ಹವಾಮಾನದಲ್ಲಿ ಬದಲಾವಣೆ ಆಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಇಂದು (ಜನವರಿ 23) ಪ್ರತ್ಯೇಕವಾಗಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಂಟೆಗೆ ಸುಮಾರು 30-40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ ಎಂದು ತಿಳಿಸಿದೆ.
ಎರಡು ದಿನ ಭಾರೀ ಮಳೆ: ವಾಯುವ್ಯ ಭಾರತದಾದ್ಯಂತ, ಜನವರಿ 23 ಮತ್ತು 24 ರಂದು ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಚಂಡೀಗಢದಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಜನವರಿ 23ರಂದು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತದ ಜೊತೆಗೆ ಮಳೆಯಾಗುವ ಮುನ್ಸೂಚನೆ ಇದ್ದು, ಈ ಪ್ರದೇಶದ ಪ್ರಯಾಣಿಕರು ಮತ್ತು ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದೆ.
ದಟ್ಟ ಮಂಜು ಕವಿಯುವ ಮುನ್ಸೂಚನೆ: ಗಂಗಾ ನದಿ ಬಯಲು ಪ್ರದೇಶಗಳಲ್ಲಿ, ಹರಿಯಾಣ, ಪಂಜಾಬ್, ಚಂಡೀಗಢ ಮತ್ತು ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಮುಂಜಾನೆ ಮತ್ತು ರಾತ್ರಿಯ ವೇಳೆ ಪ್ರತ್ಯೇಕ ಪ್ರದೇಶಗಳಲ್ಲಿ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದ್ದು, ರಸ್ತೆ, ರೈಲು ಮತ್ತು ವಿಮಾನ ಪ್ರಯಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಈಗಾಗಲೇ ಸದ್ಯ ಭಾರೀ ಶೀತಗಾಳಿ ಹಿನ್ನೆಲೆ ಬಹುತೇಕ ಭಾಗಗಳಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಲ್ಲಿ ಬೆಳಗ್ಗೆ, ಸಂಜೆ ವೇಳೆ ಭಾರೀ ಚಳಿಗಾಳಿ ಬೀಸುತ್ತಿದೆ. ಪರಿಣಾಮ ಜನರು ಈ ವೇಳೆ ಮನೆಯಿಂದ ಹೊತರಬರದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ವೇಳೆ ಹೊರಗಡೆ ಹೊರಡುವಾಗ ಹತ್ತಿ ಬಟ್ಟೆಯಿಂದ ತಯಾರಿಸಲಾದ ಉಡುಪುಗಳನ್ನು ಧರಿಸುವುದು ಸೂಕ್ತ. ಅಲ್ಲದೆ, ಬೆಳಗ್ಗೆ ಹಾಗೂ ಸಂಜೆ ವೇಳೆ ಭೀಕರ ಚಳಿ ಹಿನ್ನೆಲೆ ಈ ವೇಳೆ ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗಡೆ ಹೋಗದಂತೆ ತಡೆಯಬೇಕು ಎಂದು ಸಲಹೆ ನೀಡಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಚಳಿಗಾಳಿ ಪ್ರಮಾಣ ಕಡಿಮೆ ಆಗಲಿದ್ದು, ಬೇಸಿಗೆ ಎಂಟ್ರಿ ಕೊಡಲಿದೆ. ಈ ನಡುವೆ ಮಳೆಯೂ ಕೂಡ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

