ಕಾಸರಗೋಡು: ಮಲೆಯಾಳಂ ಭಾಷಾ ಕಲಿಕೆ ಕಡ್ಡಾಯ ಮಸೂದೆ ಸಂಬಂಧ ಗಡಿನಾಡ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳ ಜಂಟಿ ಸಭೆ ಕಾಸರಗೋಡು ಬೀರಂತಬೈಲಿನ ಕನ್ನಡ ಮಾಧ್ಯಮ ಅಧ್ಯಾಫಕರ ಭವನದಲ್ಲಿ ಜರುಗಿತು. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಮೆಲೆ ಬಲವಂತದ ಮಲಯಾಳ ಹೇರಿಕೆಗಾಗಿ ಭಾಷಾ ವಿಧೇಯಕವನ್ನು ಮಂಡಿಸಲಾಗಿದ್ದು, ಮಲಯಾಳಂ ಕಲಿಕೆ ಕಡ್ಡಾಯ ಮಸೂದೆ ಅನುಷ್ಠಾನಗೊಂಡಲ್ಲಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಗಂಭೀರ ಸಮಸ್ಯೆ ಅನುಭವಿಸಬೇಕಾಗಿ ಬರಲಿದೆ. ಈ ನಿಟ್ಟಿನಲ್ಲಿ ಮಲಯಾಳಂ ಕಲಿಕೆ ಕಡ್ಡಾಯ ಆದೇಶದಿಂದ ಇಲ್ಲಿನ ಕನ್ನಡ ಮಾಧ್ಯಮ ಶಾಲೆಗಳನ್ನು ಹೊರತುಪಡಿಸುವಂತೆ ಕೇರಳ ಸರ್ಕಾರಕ್ಕೆ ಶೀಘ್ರ ಮನವಿ ಸಲ್ಲಿಸಲು ಸಭೆ ನಿರ್ಧರಿಸಿತು.
ಕರ್ನಾಟಕ ಸಮಿತಿ ನೇತೃತ್ವದಲ್ಲಿ ನಡೆದ ಕನ್ನಡಪರ ಸಂಘಟನೆಗಳ ಜಂಟಿ ಸಭೆಯಲ್ಲಿ ಕರ್ನಾಟಕ ಸಮಿತಿ ಅಧ್ಯಕ್ಷ, ವಕೀಲ ಕೆ.ಮುರಳೀಧರ ಬಳ್ಳುಕ್ಕರಾಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಈಗಾಗಲೇ ಕೇರಳದಲ್ಲಿ ಮಲಯಾಳ ಭಾಷೆ ರಾಜ್ಯಾದ್ಯಂತ ಜಾರಿಯಲ್ಲಿದೆ. ಈ ಮಧ್ಯೆ ತರಾತುರಿಯಿಂದ ಮಲಯಾಳ ಭಾಷಾ ಮಸೂದೆ ಜಾರಿಗೊಳಿಸುವ ಮೂಲಕ ಭಾಷಾ ಅಲ್ಪಸಂಖ್ಯಾತರ ಹಕ್ಕು ಕಸಿಯುವ ತಂತ್ರ ಅಡಕವಾಗಿದೆ. ಕಾಸರಗೋಡನ್ನು ಹೊರತುಪಡಿಸಿ ಭಾಷಾ ವಿಧೇಯಕ ಜಾರಿಗೊಳಿಸುವಲ್ಲಿ ಕನ್ನಡಿಗರ ವಿರೋಧವಿಲ್ಲ. ಕೇರಳ ಸರ್ಕಾರ ಜಾರಿಗೆ ಮುಂದಾಗಿರುವ ಮಲಯಾಳ ಭಾಷಾ ಮಸೂದೆಯಲ್ಲಿ ದುರುದ್ದೇಶ ಅಡಗಿದೆ. ಈಗಾಗಲೇ ಕನ್ನಡದ ಸ್ಥಳನಾಮ ಮಲಯಾಳೀಕರಣ ಹಾಗೂ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಶಿಕ್ಷಕರನ್ನು ನೇಮಿಸುವ ಮೂಲಕ ಭಾಷಾ ಅಲ್ಪಸಂಖ್ಯಾತರನ್ನು ಸಮಸ್ಯೆಗೆ ತಳ್ಳಿರುವ ಕೇರಳ ಸರ್ಕಾರ, ಪ್ರಸಕ್ತ ಭಾಷಾ ಮಸೂದೆ ಜಾರಿಗೊಳಿಸಿ ಕನ್ನಡವನ್ನು ನಿರ್ನಾಮ ಮಾಡಲು ಹವಣಿಸುತ್ತಿರುವುದಾಗಿ ತಿಳಿಸಿದರು.
ಹೋರಾಟಕ್ಕೆ ಚಾಲನೆ:
ಗಡಿನಾಡ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಮತ್ತು ವಕೀಲರ ವಲಯದಿಂದ ಆಯ್ದ ಮಂದಿಯನ್ನು ಸೇರಿಸಿ ಸಮಿತಿ ರಚಿಸುವುದರೊಂದಿಗೆ ಜಿಲ್ಲೆಯಾದ್ಯಂತ ಪ್ರತಿಭಟನಾ ಸಭೆಗಳನ್ನು ಶೀಘ್ರದಲ್ಲಿ ನಡೆಸಲು ಸಭೆ ತೀರ್ಮಾನಿಸಿತು. ಮಸೂದೆಯಲ್ಲಿ ತರಬೇಕಾದ ತಿದ್ದುಪಡಿ ಹಾಗೂ ಮುಂದೆ ನಡೆಸಬೇಕಾದ ಹೋರಾಟದ ಬಗ್ಗೆ ರೂಪುರೇಷೆ ತಯಾರಿಸಲಾಯಿತು. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಹೋರಾಟ ನಡೆಸುವುದು, ಜತೆಗೆ ಸಹಿ ಸಂಗ್ರಹ, ಮನವಿ ಸಲ್ಲಿಕೆ, ವಿದ್ಯಾರ್ಥಿಗಳಿಂದ ಪತ್ರ ರವಾನೆಯಂತಹ ಚಳವಳಿ ನಡೆಸಲು ಸಭೆ ತೀರ್ಮಾನಿಸಲಾಯಿತು.
ಸರ್ಕಾರ ಮಂಡಿಸಿರುವ 'ಕೇರಳ ರಾಜ್ಯ ಭಾಷಾ ಮಸೂದೆ-2025' ಈ ಹಿಂದಿನ ಭಾಷಾ ವಿಧೇಯಕಕ್ಕಿಂತಲೂ ಗಂಭೀರ ಪರಿಣಾಮ ತಂದೊಡ್ಡಲಿದ್ದು, ಕನ್ನಡಿಗರೆಲ್ಲರೂ ಅಪಾಯ ಎದುರಿಸಬಾಕಾಗಿಬರಬಹುದು. ಮಸೂದೆ ಜಾರಿಯಾದಲ್ಲಿನ ಗಂಭೀರತೆ ಮನಗಂಡು ಪ್ರತಿಯೊಬ್ಬ ಕನ್ನಡಿಗ ಎಚ್ಚೆತ್ತು ಹೋರಾಟಕ್ಕೆ ತಯಾರಾಗಬೇಕು ಎಂದು ಸಭೆ ಅಭಿಪ್ರಾಯಪಟ್ಟಿತು.
ವಿವಿಧ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳಾದ ತೆಕ್ಕೇಕೆರೆ ಶಂಕರನಾರಾಯಣ ಭಟ್, ಎನ್.ಕೆ.ಮೋಹನದಾಸ್, ಥಾಮಸ್ ಡಿಸೋಜಾ, ಎಂ.ವಿ ಮಹಾಲಿಂಗೇಶ್ವರ ಭಟ್, ಆಯಿಷಾ ಎ.ಎ.ಪೆರ್ಲ, ಡಾ. ಬೇ.ಸಿ ಗೋಪಾಲಕೃಷ್ಣ, ಡಾ.ರತ್ನಾಕರ ಮಲ್ಲಮೂಲೆ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ, ಎಸ್.ಎಲ್ ಭಾರಧ್ವಾಜ್, ಭಾಸ್ಕರ ಕೆ, ಕೆ.ವಿ ಶ್ರೀನಿವಾಸ, ಶೇಖರ ಶೆಟ್ಟಿ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ವಿಶಾಲಾಕ್ಷ ಪುತ್ರಕಳ, ಜಯನಾರಾಯಣ ತಾಯನ್ನೂರು, ಸುಕೇಶ ಎ., ಕೆ.ಶಶಿಧರ ಶೆಟ್ಟಿ, ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ, ರವಿ ನಾಯ್ಕಾಪು, ಅಖಿಲೇಶ್ ನಗುಮುಗಂ, ಸುಂದರ ಬಾರಡ್ಕ, ಕಾರ್ತಿಕ್ ಪಡ್ರೆ, ಪಿ. ದಿವಾಕರ, ಶರತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಅಧ್ಯಾಪ್ಕರ ಸಂಘಟನೆ ಸಂಘಟನಾ ಕಾರ್ಯದರ್ಶಿ ಜಬ್ಬಾರ್ ಬಿ. ವಂದಿಸಿದರು.



