ಪ್ರಯಾಗ್‌ರಾಜ್ : ಮಾಘ ಮೇಳದ ಅಂಗವಾಗಿ ಭಾನುವಾರ ಇಲ್ಲಿನ ಸಂಗಮಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ. ಕೊರೆಯುತ್ತಿರುವ ಚಳಿಯನ್ನೂ ಲೆಕ್ಕಿಸದೇ ಗಂಗೆಯಲ್ಲಿ ಮಿಂದು, ಭಕ್ತಿಯ ಅನುಭೂತಿ ಪಡೆದಿದ್ದಾರೆ.
ಮೇಳ ಪ್ರದೇಶದಲ್ಲಿನ ಅಕ್ಷಯವಟ ಮಾರ್ಗದಲ್ಲಿ ಭಾನುವಾರ ಬೆಳಗ್ಗಿನಿಂದಲೂ ಸಂಗಮದತ್ತ ಸಾಗುವ ಭಕ್ತರ ಸಂಖ್ಯೆ ಹೇರಳವಾಗಿತ್ತು.
ಹೀಗಾಗಿ ಭದ್ರತೆಯನ್ನೂ ಬಿಗಿಗೊಳಿಸಲಾಗಿತ್ತು ಎಂದು ಭಕ್ತರೊಬ್ಬರು ಮಾಹಿತಿ ನೀಡಿದ್ದಾರೆ.
ಜನರ ಪಾಪಗಳನ್ನು ಪರಿಹರಿಸುವ ವ್ರತ ಎಂದು ನಂಬಲಾಗಿರುವ ಕಲ್ಪವಾಸಿ ವ್ರತವು ಪುಷ್ಯ ಪೂರ್ಣಿಮೆಯ ಶನಿವಾರ ಆರಂಭಗೊಂಡಿದ್ದು, ಭಾನುವಾರ ಸುಮಾರು 5 ಲಕ್ಷ ಮಂದಿ ಕಲ್ಪವಾಸಿಗಳು ಕೂಡ ಗಂಗೆಯಲ್ಲಿ ಮಿಂದು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತ್ರಿವೇಣಿ ಸಂಗಮದ ಆರತಿ ಸೇವಾ ಸಮಿತಿಯ ಅಧ್ಯಕ್ಷ ಆಚಾರ್ಯ ರಾಜೇಂದ್ರ ಮಿಶ್ರಾ ತಿಳಿಸಿದ್ದಾರೆ.

