HEALTH TIPS

ನಾಯಿ ಪ್ರೇಮಿಗಳಿಗೆ ತೊಂದರೆ: ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: 'ನಾಯಿಗಳಿಗೆ ಆಹಾರ ನೀಡುವ ಮಹಿಳೆಯರು ಮತ್ತು ನಾಯಿಗಳ ಕಾಳಜಿ ಮಾಡುವವರಿಗೆ ಆಗುತ್ತಿರುವ ತೊಂದರೆಗಳ ಕುರಿತು ಹೆಚ್ಚು ವಿಚಾರಣೆ ನಡೆಸಲು ಹೋಗುವುದಿಲ್ಲ' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿತು.

'ಇದು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರವಾಗಿದ್ದು, ಸಂಬಂಧಿತ ವ್ಯಕ್ತಿಗಳು ಈ ಬಗ್ಗೆ ಎಫ್‌ಐಆರ್‌ ದಾಖಲಿಸಬೇಕು' ಎಂದು ತಿಳಿಸಿತು.

ಬೀದಿ ನಾಯಿಗಳ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, 'ನಾಯಿಗಳಿಗೆ ಆಹಾರ ನೀಡುವ ಮಹಿಳೆಯರ ವಿರುದ್ಧ ಅವಹೇಳನಾತ್ಮಕ ಹೇಳಿಕೆ ಮತ್ತು ಕಿರುಕುಳ ನೀಡುತ್ತಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿತು.

ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌, ಸಂದೀಪ್‌ ಮೆಹ್ತಾ ಮತ್ತು ಎನ್‌.ವಿ.ಅಂಜಾರಿಯಾ ಅವರ ನೇತೃತ್ವದ ನ್ಯಾಯಪೀಠವು, 'ಇಲ್ಲಿ ನಡೆದ ಕೆಲವು ವಾದವು ವಾಸ್ತವಕ್ಕೆ ವಿರುದ್ಧವಾಗಿದೆ. ಬೀದಿ ನಾಯಿಗಳು ಮಕ್ಕಳು ಮತ್ತು ವಯೋವೃದ್ಧರ ಮೇಲೆ ದಾಳಿ ನಡೆಸಿರುವ ಹಲವು ವಿಡಿಯೊಗಳು ಲಭ್ಯವಿವೆ' ಎಂದು ಹೇಳಿತು.

ಈ ಮುಂಚಿನ ಸುಪ್ರೀಂ ಕೋರ್ಟ್‌ ಆದೇಶವನ್ನು ಪರಿಶೀಲಿಸುವಂತೆ ನಾಯಿ ಪ್ರೇಮಿಗಳು ಸಲ್ಲಿಸಿದ್ದ ಅರ್ಜಿ ಸೇರಿದಂತೆ ನಿರ್ದೇಶನದ ಕಟ್ಟುನಿಟ್ಟಿನ ಪಾಲನೆಗೆ ಸೂಚಿಸಬೇಕೆಂದು ಕೋರಿದ್ದ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸಿತು.

'ಸುಪ್ರೀಂ ಕೋರ್ಟ್‌ನ ಈ ಮುಂಚಿನ ಆದೇಶ ಪಾಲಿಸುವಂತೆ ಹೇಳುತ್ತಾ, ತನಿಖಾ ಸಂಸ್ಥೆಗಳಂತೆ ವರ್ತಿಸುತ್ತಿರುವ ಕೆಲವರು ಮಹಿಳೆಯರನ್ನು ನಿಂದಿಸುತ್ತಿದ್ದಾರೆ, ಅವರನ್ನು ಥಳಿಸುತ್ತಿದ್ದಾರೆ' ಎಂದು ಹಿರಿಯ ವಕೀಲೆ ಮಹಾಲಕ್ಷ್ಮಿ ಪಾವನಿ ಹೇಳಿದರು.

ನ್ಯಾಯಮೂರ್ತಿ ವಿಕ್ರಮ್‌ ನಾಥ್‌ ಅವರು, 'ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ನಿಮ್ಮನ್ನು ತಡೆದಿರುವುದು ಯಾರು' ಎಂದು ಪ್ರಶ್ನಿಸಿದರು.

'ಇಂಥ ಪ್ರತಿಯೊಂದು ಪ್ರಕರಣವನ್ನೂ ನ್ಯಾಯಾಲಯವು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಅದು ಕಾನೂನು ಸುವ್ಯವಸ್ಥೆ ಸಮಸ್ಯೆ. ಮಹಿಳೆಯರಿಗೆ ತೊಂದರೆ ನೀಡುವುದು ಅಪರಾಧ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ತಿಳಿಸಿತು.

ನಂತರ ಪ್ರಕರಣದ ವಿಚಾರಣೆಯು ಜ. 13ರಂದು ಮುಂದುವರಿಯಲಿದೆ ಎಂದು ಹೇಳಿತು.

'ಶರ್ಮಿಳಾ ಹೇಳಿಕೆ ವಾಸ್ತವಕ್ಕೆ ದೂರ'

'ಬೀದಿಗಳನ್ನು ನಾಯಿಗಳಿಂದ ಮುಕ್ತವಾಗಿರಿಸುವುದೊಂದೇ ಎಲ್ಲ ಸಮಸ್ಯೆಗೆ ಪರಿಹಾರ ಅಲ್ಲ' ಎಂಬ ನಟಿ ಶರ್ಮಿಳಾ ಟ್ಯಾಗೋರ್‌ ಅವರ ವಾದವು ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಶರ್ಮಿಳಾ ಪರ ವಕೀಲರು 'ಜನಸ್ನೇಹಿ ನಾಯಿಗಳು ಏಮ್ಸ್‌ನಲ್ಲಿ ಹಲವು ವರ್ಷಗಳಿಂದಲೂ ಇವೆ' ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು 'ಬೀದಿ ನಾಯಿಗಳನ್ನು ಶಸ್ತ್ರಚಿಕಿತ್ಸೆ ಕೊಠಡಿಗೂ ಕೊಂಡೊಯ್ಯುತ್ತೀರಾ? ಬೀದಿ ನಾಯಿಗಳಲ್ಲಿ ಉಣ್ಣೆ ಹುಳುಗಳು ಇರುತ್ತವೆ. ಇಂಥ ನಾಯಿಗಳು ಆಸ್ಪತ್ರೆ ಆವರಣದಲ್ಲಿ ಇರುವುದರಿಂದ ಆಗುವ ಅಪಾಯದ ಬಗ್ಗೆ ಅರಿವಿದೆಯೇ? ಬೀದಿ ನಾಯಿಗಳು ಆಸ್ಪತ್ರೆಗಳಲ್ಲೂ ಇರುತ್ತವೆ ಎಂಬುದನ್ನು ವೈಭವೀಕರಿಸಬೇಡಿ' ಎಂದು ತೀಕ್ಷ್ಣವಾಗಿ ಹೇಳಿತು. 'ಆಕ್ರಮಣಕಾರಿ ನಾಯಿಗಳನ್ನು ಗುರುತಿಸಲು ಬಣ್ಣ ಆಧರಿತ ಕಾಲರ್ ಅಳವಡಿಸಬಹುದು. ಜಾರ್ಜಿಯಾ ಮತ್ತು ಅರ್ಮೇನಿಯಾಗಳಲ್ಲಿ ಇದು ಚಾಲ್ತಿಯಲ್ಲಿದೆ' ಎಂದು ವಕೀಲರು ಸಲಹೆ ನೀಡಿದರು. ಈ ವಾದವನ್ನೂ ಅಲ್ಲಗಳೆದ ನ್ಯಾಯಾಲಯ 'ಆ ದೇಶಗಳ ಜನಸಂಖ್ಯೆ ಎಷ್ಟಿದೆ? ದಯವಿಟ್ಟು ವಾಸ್ತವಕ್ಕೆ ಬನ್ನಿ' ಎಂದು ಹೇಳಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries