ಕಾಸರಗೋಡು: ಕುಂಬಳೆ ಆರಿಕ್ಕಾಡಿಯಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಟೋಲ್ ಪ್ಲಾಜ ಕಾನೂನು ವಿರುದ್ಧ ಮತ್ತು ಕೇಂದ್ರ ಸಾರಿಗೆ ಇಲಾಖೆಯ ನಿಲುವುಗಳಿಗೆ ವಿರುದ್ಧವಾಗಿದ್ದು, ಈ ಕುರಿತಾದ ಸಮಸ್ಯೆಯನ್ನು ಕೇಂದ್ರ ಬಿಜೆಪಿ ನೇತೃತ್ವದ ಗಮನಕ್ಕೆ ತರಲಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂಬಳೆಯ ಟೋಲ್ ಪ್ಲಾಜ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಶೀಘ್ರವೇ ಕೇಂದ್ರ ನೇತೃತ್ವದಿಂದ ತೀರ್ಮಾನ ಉಂಟಾಗಲಿದೆ. ಅನಧಿಕೃತವಾಗಿ ನಿರ್ಮಾಣಗೊಳ್ಳುತ್ತಿರುವ ಟೋಲ್ ಪ್ಲಾಜಾದ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಲಾಗಿದ್ದು, ಸಮಸ್ಯೆ ಬಗ್ಗೆ ಕೇಂದ್ರ ಮಧ್ಯ ಪ್ರವೇಶಿಸಲಿದ್ದು,ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದೆ. ಟೋಲ್ ಬೂತ್ ಸ್ಥಾಪಿಸುವುದನ್ನು ಬಿಜೆಪಿ ಹಿಂದಿನಿಂದಲೂ ವಿರೋಧಿಸಿಸುತ್ತಾ ಬಂದಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರೀಜಿನಲ್ ಆಫೀಸರ್ ಸಹಿತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ಪ್ರಾಧಿಕಾರದ ಕೆಲವು ಹಿರಿಯ ಅಧಿಕಾರಿಗಳ ಹಠಮಾರಿ ಧೋರಣೆಯಿಂದ ಈ ಸಮಸ್ಯೆ ಉಂಟಾಗಿದೆ. ಇದನ್ನು ಕೇಂದ್ರ ಬಿಜೆಪಿ ಮತ್ತು ಸಾರಿಗೆ ಇಲಾಖೆ ಗಮನಕ್ಕೆ ತರಲಾಗಿದೆ. ಟೋಲ್ ವಸೂಲಿ ಜಾರಿಗೆ ಬಂದಲ್ಲಿ ಕಾಸರಗೋಡು, ಮಂಜೇಶ್ವರ ತಾಲೂಕಿನ ಜನತೆ ಎದುರಿಸಬೇಕಾದ ಸಮಸ್ಯೆಯನ್ನು ಕೇಂದ್ರಕ್ಕೆ ತಿಳಿಸಲಾಗಿದೆ. ಪ್ರಸಕ್ತ ವಿಷಯದಲ್ಲಿ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಯೊಂದಿಗೆ ಸಮಾಲೋಚಿಸಿ ಪರಿಹಾರ ಒದಗಿಸುವ ಭರವಸೆಯನ್ನು ಕೇಂದ್ರ ನೇತೃತ್ವ ನೀಡಿದೆ.
ಕುಂಬಳೆ ಟೋಲ್ ಪ್ಲಾಜಾ ಹೆಸರಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ನಡೆಸುತ್ತಿರುವ ಸತ್ಯಾಗ್ರಹ ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂದು ಟೀಕಿಸಿದ ಅವರು ಜನಪ್ರತಿನಿಧಿ ಎಂಬ ನೆಲೆಯಲ್ಲಿ ಹೆದ್ದಾರಿ ನಿರ್ಮಾಣ ಸಂದರ್ಭ ಸೂಕ್ತ ರೀತಿಯಲ್ಲಿ ಸ್ಪಂದಿಸದೆ, ತನ್ನ ತಪ್ಪನ್ನು ಮರೆಮಾಚಲು ಸತ್ಯಾಗ್ರಹದ ನಾಟಕವಾಡುತ್ತಿರುವುದಾಗಿ ಎಂ. ಎಲ್. ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.


