ಗಾಜಿಯಾಬಾದ್: ಅಕ್ರಮ ವಲಸಿಗರ ಪರಿಶೀಲನೆ ವೇಳೆ ಕೊಳಗೇರಿ ನಿವಾಸಿಗಳ ಬೆನ್ನಿಗೆ ಮೊಬೈಲ್‌ನಂತಹ ಸಾಧನವಿಟ್ಟು ಪೌರತ್ವ ಪರಿಶೀಲಿಸಿದ ಘಟನೆಯ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸರ ನಡವಳಿಕೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಡಿಸೆಂಬರ್ 23ರಂದು ಕೌಶಂಬಿಯ ಭೋವಾಪುರ ಕೊಳಗೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಕ್ರಮ ವಲಸಿಗರ ಪರಿಶೀಲನೆ ಭಾಗವಾಗಿ ಸಿಆರ್‌ಪಿಎಫ್‌ನ ಸಿಬ್ಬಂದಿಯೊಂದಿಗೆ ಬಂದ ಗಾಜಿಯಾಬಾದ್ ಪೊಲೀಸರು, ಸ್ಥಳೀಯರ ಆಧಾರ್ ಕಾರ್ಡ್, ಮತದಾರರ ಚೀಟಿ ಮತ್ತು ಪಾಸ್‌ಪೋರ್ಟ್‌ನಂತಹ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ನಿವಾಸಿಗಳ ಬಳಿ ಮೂಲತಃ ನೀವು ಎಲ್ಲಿಂದ ಬಂದವರು? ಎಂದು ಪ್ರಶ್ನಿಸುತ್ತಿರುವುದು ವಿಡಿಯೊದಲ್ಲಿ ಕಾಣಬಹುದಾಗಿದೆ.
ಇದೇ ವೇಳೆ, ಕೌಶಂಬಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಜಯ್ ಶರ್ಮಾ ಅವರು ವ್ಯಕ್ತಿಯೊಬ್ಬರ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಾ, ನೀನು ಎಲ್ಲಿಂದ ಬಂದವನು? ಎಂದು ಕೇಳಿದ್ದಾರೆ. ಆಗ ಆತ 'ಬಿಹಾರದಿಂದ' ಎಂದು ಉತ್ತರಿಸಿದ್ದಾನೆ. ಅದಕ್ಕೆ ಶರ್ಮಾ, ಬಿಹಾರದವನಾ? ಅಥವಾ ಬಾಂಗ್ಲಾದೇಶದವನಾ? ಎಂದು ಕೇಳುವುದು ಕೇಳಿಸುತ್ತದೆ.
ಮುಂದುವರಿದು, ವ್ಯಕ್ತಿಯೊಬ್ಬನ ಮೂಲವನ್ನು ತಿಳಿಯುವ ಯಂತ್ರ ತಮ್ಮಲ್ಲಿರುವುದಾಗಿಯೂ, ಅದನ್ನು ತರುವಂತೆ ಸಹೋದ್ಯೋಗಿಯೊಬ್ಬರಿಗೆ ಶರ್ಮಾ ಹೇಳುತ್ತಾರೆ. ನಂತರ ಮೊಬೈಲ್‌ನಂತಹ ಆ ಸಾಧನವನ್ನು ಆ ವ್ಯಕ್ತಿಯ ಬೆನ್ನಿಗೆ ಇಟ್ಟು, 'ಈ ಯಂತ್ರ ನೀನು ಬಾಂಗ್ಲಾದೇಶದವನು ಎಂದು ತೋರಿಸುತ್ತಿದೆ' ಎಂದು ಹೇಳುತ್ತಾರೆ.
ನಂತರ ಅಲ್ಲಿನ ನಿವಾಸಿಗಳು ಆತ ಬಿಹಾರದವನು ಎಂದು ಪೊಲೀಸರಿಗೆ ಮನವರಿಕೆ ಮಾಡಿದ್ದಾರೆ.
ಈ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಪೌರತ್ವವನ್ನು ಪತ್ತೆ ಮಾಡುವ ಯಂತ್ರ ಅಸ್ತಿತ್ವದಲ್ಲಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಪೌರತ್ವ ಪರಿಶೀಲನೆ ಹೆಸರಿನಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವವರನ್ನು ಶೋಷಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಕ್ರಮಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿದ ಗಾಜಿಯಾಬಾದ್ ಪೊಲೀಸ್ ಕಮೀಷನರ್, 'ಇದು ಅಪರಾಧ ನಿಯಂತ್ರಣ ಪ್ರಕ್ರಿಯೆಯ ಭಾಗವಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ಮತ್ತು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ' ಎಂದು ಹೇಳಿದೆ.

