ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲ ಆರ್.ಎನ್.ರವಿ ಅವರು ಸದನ ಉದ್ದೇಶಿಸಿ ಭಾಷಣ ಮಾಡದೇ ಹೊರನಡೆದಿದ್ದಾರೆ. ರಾಜ್ಯಪಾಲ ರವಿ ಅವರ ಈ ನಡೆಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಖಂಡಿಸಿದ್ದಾರೆ.
ಇತ್ತ, 'ಸದನ ಉದ್ದೇಶಿಸಿ ಮಾತನಾಡುವ ವೇಳೆ, ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಭಾಷಣದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿದ್ದಾರೆ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ.
ರಾಜ್ಯಪಾಲ ರವಿ ನಡೆ ವಿರುದ್ಧ ನಿರ್ಣಯ ಅಂಗೀಕಾರ
ತಮಿಳುನಾಡು ವಿಧಾನಸಭೆ ಅಧಿವೇಶನದ ಕಲಾಪ ಆರಂಭವಾಗುತ್ತಿದ್ದಂತೆಯೇ, 'ಡಿಎಂಕೆ ನೇತೃತ್ವದ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಹಲವು 'ದೋಷಗಳಿವೆ' ಎಂದು ಆರೋಪಿಸಿ ರಾಜ್ಯಪಾಲ ರವಿ ಅವರು ಸದನದಿಂದ ಹೊರನಡೆದಿದ್ದಾರೆ.
ಇದರೊಂದಿಗೆ, 2021ರಲ್ಲಿ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರವಿ ಅವರು ವಿಧಾನಸಭೆ ಅಧಿವೇಶನದ ವೇಳೆ ಸದನದಿಂದ ನಾಲ್ಕನೇ ಬಾರಿ ಹೊರ ನಡೆದಂತಾಗಿದೆ.
ರಾಜ್ಯಪಾಲರು ಹೊರನಡೆದ ನಂತರ, ಆಡಳಿತಾರೂಢ ಡಿಎಂಕೆ ಹಾಗೂ ಅದರ ಮಿತ್ರಪಕ್ಷಗಳ ಶಾಸಕರು ಎದ್ದುನಿಂತು ಜೋರಾಗಿ ಕೂಗಾಟ ಆರಂಭಿಸಿದರು. ಇದರಿಂದ ಇಡೀ ಸದನ ಗದ್ದಲದ ಗೂಡಾಯಿತಲ್ಲದೇ, ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಗೊತ್ತಾಗಲಿಲ್ಲ.
ನಂತರ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜ್ಯಪಾಲರ ನಡೆಯನ್ನು ಖಂಡಿಸಿದರು.
'ಈ ರೀತಿ ಹೊರನಡೆಯುವುದು ನಿಯಮಗಳು, ಸಂಪ್ರದಾಯ ಮತ್ತು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಆರ್.ಎನ್.ರವಿ ಅವರದು ಹುದ್ದೆಗೆ ತಕ್ಕ ನಡೆಯಲ್ಲ. ಇದು, ಸದನ ಹಾಗೂ ರಾಜ್ಯಪಾಲರ ಹುದ್ದೆಯ ಘನತೆಗೆ ಮಾಡಿರುವ ಅವಮಾನ' ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.
ನಂತರ, ರಾಜ್ಯಪಾಲರ ನಡೆ ಖಂಡಿಸಿ ಸ್ಟಾಲಿನ್ ಅವರು ಮಂಡಿಸಿದ ನಿರ್ಣಯವನ್ನು ಸದನ ಅಂಗೀಕರಿಸಿತು.
'ಭಾಷಣ ಓದದೇ ಇರುವ ರಾಜ್ಯಪಾಲರ ವರ್ತನೆಯನ್ನು ಸದನ ಒಪ್ಪುವುದಿಲ್ಲ. ಸರ್ಕಾರ ಸಿದ್ಧಪಡಿಸಿರುವ ತಮಿಳು ಭಾಷೆಯಲ್ಲಿರುವ ಭಾಷಣವನ್ನು ಸ್ಪೀಕರ್ ಎಂ. ಅಪ್ಪವು ಓದಿದ್ದು, ಇದು ಮಾತ್ರ ಕಡತಕ್ಕೆ ಹೋಗಲಿದೆ' ಎಂಬ ಅಂಶಗಳನ್ನು ಈ ನಿರ್ಣಯ ಒಳಗೊಂಡಿದೆ.
ಬಳಿಕ, ಎಲ್ಲ ಶಾಸಕರಿಗೆ ಧನ್ಯವಾದ ಹೇಳಿದ ಸ್ಟಾಲಿನ್,'ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದುವುದನ್ನು ರಾಜ್ಯಪಾಲರು ಪ್ರತಿ ವರ್ಷ ನಿರಾಕರಿಸುತ್ತಿದ್ದು, ಇದು ಉತ್ತಮ ನಡೆಯಲ್ಲ. ರಾಜ್ಯಪಾಲರು ಈ ರೀತಿ ತೊಂದರೆ ನೀಡುತ್ತಿರುವುದು ತಮಿಳುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಇತರ ಹಲವು ರಾಜ್ಯಗಳಲ್ಲಿನ ರಾಜ್ಯಪಾಲರು ಕೂಡ ಅಲ್ಲಿನ ಸರ್ಕಾರಗಳಿಗೆ ತೊಂದರೆ ನೀಡುತ್ತಿದ್ದಾರೆ' ಎಂದರು.
'ವರ್ಷದ ಮೊದಲ ಅಧಿವೇಶನ ಆರಂಭವಾಗುವಾಗ, ಸರ್ಕಾರ ನೀತಿಗಳನ್ನು ಒಳಗೊಂಡ ಲಿಖಿತ ಭಾಷಣವನ್ನು ರಾಜ್ಯಪಾಲರು ಓದುವುದು ಮೊದಲಿನಿಂದಲೂ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯ. ಆದರೆ, ಇಂತಹ ಶಿಷ್ಟಾಚಾರವನ್ನು ರಾಜ್ಯಪಾಲರು ಪದೇಪದೇ ಉಲ್ಲಂಘನೆ ಮಾಡುತ್ತಿದ್ದರೆ, ಇಂತಹ ನಿಯಮ ಅಥವಾ ಸಂಪ್ರದಾಯ ಯಾಕಿರಬೇಕು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ' ಎಂದು ಸ್ಟಾಲಿನ್ ಹೇಳಿದರು.
ಸ್ಟಾಲಿನ್ ಹೇಳಿದ್ದು
ಸಂವಿಧಾನದ 176ನೇ ವಿಧಿ ಪ್ರಕಾರ, ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣವನ್ನು ರಾಜ್ಯಪಾಲರು ಪೂರ್ತಿಯಾಗಿ ಓದುವುದು ಕಡ್ಡಾಯ
ಸರ್ಕಾರ ಸಿದ್ಧಪಡಿಸಿರುವ ಭಾಷಣ ಓದುವ ವೇಳೆ, ಭಾಷಣಕ್ಕೆ ಸಂಬಂಧಿಸಿ ರಾಜ್ಯಪಾಲರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಇಲ್ಲವೇ ಭಾಷಣದಲ್ಲಿನ ಕೆಲ ಅಂಶಗಳನ್ನು ತೆಗೆದುಹಾಕಲು ಅವಕಾಶ ಇಲ್ಲ
ಭಾರಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿರುವ ಸರ್ಕಾರಕ್ಕೆ ರಾಜ್ಯಪಾಲರು ಸಹಕಾರ ನೀಡಬೇಕು
ರಾಜ್ಯಪಾಲ ರವಿ ಅವರು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕ ವೇದಿಕೆಗಳಲ್ಲಿ ರಾಜಕೀಯ ಭಾಷಣ ಮಾಡುವ ಮೂಲಕ ಸುಳ್ಳು ಹಬ್ಬಿಸುತ್ತಿದ್ದಾರೆ. ಇಂಥದೇ ಪ್ರಯತ್ನವನ್ನು ಸದನದಲ್ಲಿಯೂ ಮಾಡುತ್ತಿದ್ದು, ಇದನ್ನು ಒಪ್ಪಲು ಸಾಧ್ಯ ಇಲ್ಲ
ಸದನ ಉದ್ದೇಶಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಾತನಾಡಿದರು ಪಿಟಿಐ ಚಿತ್ರ
ತಿರುವನಂತಪುರದಲ್ಲಿರುವ ವಿಧಾನಸಸೌದಲ್ಲಿ ನಡೆದ ಬಜೆಟ್ ಅಧಿವೇಶನದ ಮೊದಲ ದಿನದ ಕಲಾಪ ಉದ್ದೇಶಿಸಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಮಂಗಳವಾರ ಮಾತನಾಡಿದರು ಪಿಟಿಐ ಚಿತ್ರ ಎಂ.ಕೆ.ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿವರ್ಷದ ಆರಂಭದಲ್ಲಿ ನಡೆಯುವ ವಿಧಾನಸಭೆ ಅಧಿವೇಶನ ವೇಳೆ ಸದನ ಉದ್ಧೇಶಿಸಿ ರಾಜ್ಯಪಾಲರು ಭಾಷಣ ಮಾಡುವುದನ್ನು ಕಡ್ಡಾಯಗೊಳಿಸಿರುವ ಅವಕಾಶಗಳನ್ನು ಸಂವಿಧಾನದಿಂದ ತೆಗೆದುಹಾಕಬೇಕು. ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರುವುದಕ್ಕಾಗಿ ಡಿಎಂಕೆ ಪಕ್ಷ ಪ್ರಯತ್ನಿಸಲಿದೆವಿ.ಡಿ.ಸತೀಶನ್ ಕೇರಳ ವಿಧಾನಸಭೆ ವಿಪಕ್ಷ ನಾಯಕರಾಜ್ಯದ ಕೆಲ ಜ್ವಲಂತ ಸಮಸ್ಯೆಗಳ ಕುರಿತು ಸರ್ಕಾರದ ಬಳಿ ಉತ್ತರ ಇಲ್ಲ. ಹೀಗಾಗಿ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ ರಾಜ್ಯಪಾಲ ಮತ್ತು ಸರ್ಕಾರ ನಡುವೆ ಬಿಕ್ಕಟ್ಟು ತಲೆದೋರಿದೆ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆಕೇಂದ್ರದ ವಿರುದ್ಧದ ಭಾಗಗಳನ್ನು ಓದಿಲ್ಲ:
ಣರಾಯಿ ಟೀಕೆ 'ವಿಧಾನಸಭೆ ಅಧಿವೇಶನ ಆರಂಭದಲ್ಲಿ ಸದನ ಉದ್ದೇಶಿಸಿ ಭಾಷಣ ಓದಿರುವ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಕೇಂದ್ರ ಸರ್ಕಾರ ವಿರುದ್ಧದ ಕೆಲ ಭಾಗಗಳನ್ನು ಕೈಬಿಟ್ಟಿದ್ದಾರೆ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದರು. ತಮ್ಮ ಭಾಷಣ ಮುಗಿಸಿದ ಬಳಿಕ ರಾಜ್ಯಪಾಲ ಅರ್ಲೇಕರ್ ಸದನದಿಂದ ನಿರ್ಗಮಿಸಿದ ಬಳಿಕ ಮುಖ್ಯಮಂತ್ರಿ ವಿಜಯನ್ ಮಾತನಾಡಿದರು. 'ಕೇಂದ್ರ
ಸರ್ಕಾರ ವಿರುದ್ಧದ ಕೆಲ ಭಾಗಗಳನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿಲ್ಲ. ಆದರೆ ಸಂವಿಧಾನದ ಪ್ರಕಾರ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವ ಭಾಷಣಕ್ಕೇ ಪ್ರಾಧಾನ್ಯ ಇರಲಿದೆ' ಎಂದು ಹೇಳಿದರು. 'ರಾಜ್ಯ ಸಚಿವ ಸಂಪುಟ ಅನುಮೋದಿಸಿರುವ ಸಂಪೂರ್ಣ ಭಾಷಣವನ್ನು ಓದಲಾಗಿದೆ ಎಂಬುದಾಗಿ ಪರಿಗಣಿಸಲಾಗುವುದು' ಎಂದು ಸ್ಪೀಕರ್ ಎ.ಎನ್ ಶಂಸೀರ್ ಘೋಷಿಸಿದರು.
ಕೈಬಿಟ್ಟ ಭಾಗಗಳಲ್ಲಿ ಏನಿದೆ?: ಕೇಂದ್ರ ಸರ್ಕಾರದ ನಡೆ ಹಾಗೂ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕುವುದಕ್ಕೆ ವಿಳಂಬ ಮಾಡಿದ್ದರಿಂದ ರಾಜ್ಯ ಸರ್ಕಾರ ಹಣಕಾಸು ಬಿಕ್ಕಟ್ಟು ಎದುರಿಸಬೇಕಾಯಿತು ಎಂಬ ಆರೋಪಗಳಿರುವ ಭಾಗವನ್ನು ರಾಜ್ಯಪಾಲರು ತಮ್ಮ ಭಾಷಣದಿಂದ ಕೈಬಿಟ್ಟಿದ್ದಾರೆ.
'ಸಾಮಾಜಿಕ ಹಾಗೂ ಸಾಂಸ್ಥಿಕ ವಿಚಾರವಾಗಿ ಕೇರಳ ಹಲವು ಸಾಧನೆಗಳನ್ನು ಮಾಡಿದೆ. ಅದರೆ ಕೇಂದ್ರ ಸರ್ಕಾರ ಕೈಗೊಂಡ ಹಲವಾರು ಪ್ರತಿಕೂಲ ಕ್ರಮಗಳಿಂದಾಗಿ ರಾಜ್ಯವು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುವಂತಾಗಿದೆ. ಕೇಂದ್ರದ ಈ ನಡೆಯು ಸಂವಿಧಾನದಲ್ಲಿ ಹೇಳಿರುವ 'ವಿತ್ತೀಯ ಒಕ್ಕೂಟ ವ್ಯವಸ್ಥೆ'ಯನ್ನು ಬುಡಮೇಲು ಮಾಡುವಂತಿದೆ' ಎಂಬ ಭಾಗವನ್ನು ಸಹ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಓದಿಲ್ಲ. 'ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳು ದೀರ್ಘಕಾಲದಿಂದ ಅಂಕಿತಕ್ಕಾಗಿ ಬಾಕಿ ಉಳಿದಿವೆ. ಈ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ರಾಜ್ಯದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ' ಎಂಬ ಅಂಶವನ್ನೂ ಅರ್ಲೇಕರ್ ಓದಿಲ್ಲ. ರಾಜ್ಯವು ಸಾಲ ಪಡೆಯುವ ಮಿತಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ನಿರ್ಬಂಧಗಳನ್ನು ಹೇರಿರುವುದು ಹಾಗೂ ತೆರಿಗೆ ಪಾಲು ಕುರಿತ ಭಾಗಗಳನ್ನು ರಾಜ್ಯಪಾಲರು ಓದಿದ್ದಾರೆ. 'ಮನರೇಗಾಗೆ ತಿದ್ದುಪಡಿ ತಂದು ಅದನ್ನು ವಿಬಿ-ರಾಮ್-ಜಿ ಎಂದು ಬದಲಾಯಿಸಿರುವುದರಿಂದ ಕೇರಳಕ್ಕೆ ಹಿನ್ನಡೆಯಾಗಿದೆ' ಎಂಬ ಅಂಶವನ್ನು ಸಹ ಅವರು ಓದಿದ್ದಾರೆ.
ವಿವಾದ ಅನಗತ್ಯ:
ಕೇರಳ ಲೋಕಭವನ ತಿರುವನಂತಪುರ:'ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ವಿಧಾನಸಭೆ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣಕ್ಕೆ ಸಂಬಂಧಿಸಿ ಉಂಟಾಗಿರುವ ವಿವಾದ 'ಅನಗತ್ಯ' ಹಾಗೂ 'ಆಧಾರರಹಿತ'' ಎಂದು ಕೇರಳ ಲೋಕಭವನ ಮಂಗಳವಾರ ಹೇಳಿದೆ. 'ಕೇಂದ್ರ ಸರ್ಕಾರದ ನಡೆಗಳನ್ನು ಟೀಕಿಸಿ ಹಾಗೂ ಅಂಕಿತಕ್ಕೆ ಬಾಕಿ ಉಳಿದಿರುವ ಮಸೂದೆಗಳ ಕುರಿತ ಭಾಗಗಳನ್ನು ರಾಜ್ಯಪಾಲರು ಓದಿಲ್ಲ' ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ ಬೆನ್ನಲ್ಲೇ ಲೋಕಭವನ ಈ ಪ್ರತಿಕ್ರಿಯೆ ನೀಡಿದೆ. 'ಭಾಷಣದಲ್ಲಿ ಕೆಲವು 'ದಾರಿತಪ್ಪಿಸುವ ಅಂಶ'ಗಳು ಇದ್ದು ಅವುಗಳನ್ನು ತೆಗೆದು ಹಾಕುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದರು. ಆದರೆ ರಾಜ್ಯಪಾಲರಿಗೆ ಸೂಕ್ತ ಎನಿಸಿದಲ್ಲಿ ತಿದ್ದುಪಡಿಯೊಂದಿಗೆ ಭಾಷಣ ಓದಬಹುದು ಎಂದು ಸರ್ಕಾರ ಪ್ರತಿಕ್ರಿಯಿಸಿತ್ತು' ಎಂಬುದಾಗಿಯೂ ಲೋಕ ಭವನ ಹೇಳಿದೆ. 'ರಾಜ್ಯಪಾಲರು ಸೂಚಿಸಿದ ತಿದ್ದುಪಡಿಗಳನ್ನು ಸೇರಿಸಿ ಭಾಷಣದ ಪ್ರತಿಯನ್ನು ಮತ್ತೊಮ್ಮೆ ಕಳುಹಿಸುವಂತೆಯೂ ಸೂಚಿಸಲಾಗಿತ್ತು. ಆದರೆ ನಿನ್ನೆ ಮಧ್ಯರಾತ್ರಿ ವೇಳೆಗೆ ಯಾವುದೇ ಬದಲಾವಣೆ ಇರದ ಭಾಷಣದ ಪ್ರತಿಯನ್ನೇ ಸರ್ಕಾರ ಮರಳಿಸಿತ್ತು' ಎಂದೂ ತಿಳಿಸಿದೆ.

