HEALTH TIPS

ದಾಖಲೆಯ ಆದಾಯದ ಕೆಎಸ್‍ಆರ್‍ಟಿಸಿ ಮಿಂಚುತ್ತಿದೆ?; ಕಾಸರಗೋಡಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರಯಾಣ ದುಸ್ತರ; ರಾತ್ರಿ ಚಂದ್ರಗಿರಿ, ಮಂಗಳೂರು ಮಾರ್ಗಗಳಲ್ಲಿ 'ಕಫ್ರ್ಯೂ'

ಕಾಸರಗೋಡು: ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಕೆಎಸ್‍ಆರ್‍ಟಿಸಿ 13.01 ಕೋಟಿ ರೂ. ದಾಖಲೆಯ ಆದಾಯವನ್ನು ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೊಂಡರೂ, ಉತ್ತರ ಕೇರಳದ ಪ್ರಯಾಣ ದುಃಸ್ಥಿತಿಯನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಕಾಸರಗೋಡು ನಗರಕ್ಕೆ ಹೊಂದಿಕೊಂಡಿರುವ ಬದಿಯಡ್ಕ, ಮುಳ್ಳೇರಿಯ, ಕುಂಬಳೆ ಪ್ರದೇಶಗಳ ಪ್ರಯಾಣಿಕರನ್ನು ಕೆಎಸ್‍ಆರ್‍ಟಿಸಿ ವರ್ಷಗಳಿಂದ ನಿರ್ಲಕ್ಷಿಸಿದೆ. 


ದಾಖಲೆ ಸಾಧನೆ ಮತ್ತು ವಾಸ್ತವ:

ನವಕೇರಳ ನಿರ್ಮಿತಿಯ ಭಾಗವಾಗಿ, ಮುಖ್ಯಮಂತ್ರಿಗಳು ಜನವರಿ 5 ರಂದು ತಮ್ಮ ಅಧಿಕೃತ ಫೇಸ್‍ಬುಕ್ ಪುಟದಲ್ಲಿ ಕೆಎಸ್‍ಆರ್‍ಟಿಸಿ 13.01 ಕೋಟಿ ರೂ. ಆದಾಯ ಗಳಿಸಿದೆ ಮತ್ತು 83 ಡಿಪೋಗಳು ಲಾಭದಾಯಕವಾಗಿವೆ ಎಂದು ಪೋಸ್ಟ್ ಮಾಡಿದ್ದರು. ಆಧುನೀಕರಣ ಮತ್ತು ಹೊಸ ಬಸ್‍ಗಳ ಆಗಮನದಿಂದ ಜನರ ವಿಶ್ವಾಸ ಹೆಚ್ಚಾಗಿದೆ ಎಂದು ಪೋಸ್ಟ್‍ನಲ್ಲಿ ಹೇಳಲಾಗಿದೆ. ಆದರೆ, ಕಾಸರಗೋಡು ಜಿಲ್ಲೆಯ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ.


ಗ್ರಾಮೀಣ ಮಾರ್ಗದ ದುಃಸ್ಥಿತಿ:

ಕಾಸರಗೋಡಿನಿಂದ ಚೆರ್ಕಳ, ಎಡನೀರು, ಬದಿಯಡ್ಕ,ಪೆರ್ಲ ಹಾಗೂ ಕಾಸರಗೋಡು, ಮೊಗ್ರಾಲ್, ಕುಂಬಳೆ, ಉಪ್ಪಳ, ಬಾಯಾರು, ಮೀಂಜ, ವರ್ಕಾಡಿಗಳಿಗೆ ಹೋಗುವ ರಸ್ತೆಗಳಲ್ಲಿ ಜನರಿಗೆ ಬೇಕಾದಷ್ಟು ಸಾರಿಗೆ ಬಸ್ ಗಳಿಲ್ಲ. ಕೆಎಸ್‍ಆರ್‍ಟಿಸಿ ಸಾಕಷ್ಟು ಸೇವೆಗಳನ್ನು ಒದಗಿಸುತ್ತಿಲ್ಲ ಎಂಬುದು ಮುಖ್ಯ ದೂರು. ಬೆಳಿಗ್ಗೆ ಮತ್ತು ಸಂಜೆ ಶಾಲಾ ಸಮಯದಲ್ಲಿ ಖಾಸಗೀ ಬಸ್‍ಗಳಿದ್ದರೂ, ಅವು ತುಂಬಿರುತ್ತವೆ. ನಿಲ್ದಾಣಗಳಲ್ಲಿ ಕಾಯುವ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಬಸ್‍ಗಳು ನಿಲ್ಲುವುದಿಲ್ಲ. ಅಗತ್ಯ ಬಸ್ ಸೇವೆ ಇಲ್ಲದ ಕಾರಣ, ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.


ರಾತ್ರಿ 7 ಗಂಟೆಯ ನಂತರ ಪರಿಸ್ಥಿತಿ ಗಂಭೀರ:

ಕಾಸರಗೋಡು ನಗರವು ಅಭಿವೃದ್ಧಿಯ ಹಾದಿಯಲ್ಲಿದೆ. ಹೊಸ ಕಟ್ಟಡಗಳು ಮತ್ತು ವ್ಯಾಪಾರ ಸಂಸ್ಥೆಗಳು ತಲೆ ಎತ್ತುತ್ತಿದ್ದರೂ, ಸಾರಿಗೆ ಸೌಲಭ್ಯಗಳ ಕೊರತೆಯು ದೊಡ್ಡ ಹಿನ್ನಡೆಯಾಗಿದೆ. ರಾತ್ರಿ 7 ಗಂಟೆಯ ನಂತರ, ನಗರದಿಂದ ಬದಿಯಡ್ಕ, ಕುಂಬಳೆ, ಸೀತಾಂಗೋಳೀಗಳಿಗೆ ಸಾಕಷ್ಟು ಬಸ್ ಗಳಿಲ್ಲದೆ ಕೆಲಸದಿಂದ ತಡವಾಗಿ ಬಂದು ಮುಖ್ಯ ರಸ್ತೆಯಲ್ಲಿ ಕಾಯುವವರಿಗೆ ತೀವ್ರ ಜಟಿಲವಾಗಿ ಕಾಡುತ್ತದೆ. ರಾತ್ರಿ ಸೇವೆಗಳ ಕೊರತೆಯು ನಗರದಲ್ಲಿ ರಾತ್ರಿ ವ್ಯಾಪಾರದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ.

ಹಿಂತಿರುಗದ ಬಸ್‍ಗಳು:

ಕೋವಿಡ್ ಲಾಕ್‍ಡೌನ್‍ಗೆ ಮೊದಲು ಕಾಸರಗೋಡು ಡಿಪೋದಿಂದ ಸಂಚರಿಸುತ್ತಿದ್ದ ಮಧೂರು, ನೀರ್ಚಾಲು, ಮುಂಡಿತ್ತಡ್ಕ ಹಾಗೂ ಕುಂಬಳೆ, ಬಂದ್ಯೋಡು, ಧರ್ಮತ್ಡ್ಕ, ಗುಂಪೆ, ಬಾಯಾರು, ದೇಳಿ ಮೂಲಕ ಪಾಲಕುನ್ನುವಿಗೆ ಕಾರ್ಯನಿರ್ವಹಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗಳು ಲಾಕ್‍ಡೌನ್ ನಂತರ ಇನ್ನೂ ಪುನರಾರಂಭಗೊಂಡಿಲ್ಲ. ಈ ಮಾರ್ಗದಲ್ಲಿ ಪ್ರಯಾಣಿಕರು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದಲ್ಲದೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಬಸ್‍ಗಳು ಹಳೆಯದಾಗಿವೆ ಮತ್ತು ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತಿಲ್ಲ ಎಂದು ಪ್ರಯಾಣಿಕರು ದೂರುತ್ತಾರೆ.

ಬಹುಕಾಲದ ಈಡೇರದ ಬೇಡಿಕೆ:

ನಿತ್ಯ ಪ್ರಯಾಣಿಕರು ಮುಖ್ಯವಾಗಿ ಕುಂಬಳೆ, ಸೀತಾಂಗೋಳಿ, ನೀರ್ಚಾಲು, ಬದಿಯಡ್ಕ, ಮುಳ್ಳೇರಿಯ ಹಾಗೂ ಕುಂಬಳೆ, ಸೀತಾಂಗೋಳಿ, ಪುತ್ತಿಗೆ, ಅಂಗಡಿಮೊಗರು, ಶೇಣಿ, ಪೆರ್ಲ ಮತ್ತು ಉಪ್ಪಳ, ಬಾಯಾರು, ಬೆರಿಪದವು, ಪೆರುವಾಯಿ, ವಿಟ್ಲ ಮಾರ್ಗಗಳಲ್ಲಿ ಕೆಎಸ್‍ಆರ್‍ಟಿಸಿ ಸೇವೆಗಳಿಗಾಗಿ ಕಾಯುತ್ತಿದ್ದಾರೆ. ಇದಲ್ಲದೆ ಒಳನಾಡುಗಳಲ್ಲೂ ಬೇಡಿಕೆ ಇದೆ. ಆದರೆ ಮುಖ್ಯ ಹೆದ್ದಾರಿಗಳಲ್ಲೇ ಬಸ್ ಸಾಕಷ್ಟು ಲಭ್ಯವಿಲ್ಲದಿರುವಾಗ ಇತರ ರಸ್ತೆಗಳಲ್ಲಿ ಆಶೀಸುವುದಷ್ಟೇ ಜನರಿಗಿರುವ ದಾರಿಯಾಗಿ ಉಳಿಯುತ್ತದೆ.  

ಲಾಭದ ಅಂಕಿಅಂಶಗಳನ್ನು ಪ್ರಸ್ತುತಪಡಿಸುವಾಗ, ಮೂಲಭೂತ ಸೌಲಭ್ಯಗಳನ್ನು ಪಡೆಯದ ಸಾಮಾನ್ಯ ಜನರ ಈ ಸಮಸ್ಯೆಗಳಿಗೆ ಸರ್ಕಾರ ಉತ್ತರಿಸಬೇಕು. ಕಾಸರಗೋಡಿನಲ್ಲಿ ಪ್ರಯಾಣದ ಸಮಸ್ಯೆಗಳಿಗೆ ತಕ್ಷಣದ ಪರಿಹಾರವನ್ನು ಸ್ಥಳೀಯರು ಒತ್ತಾಯಿಸಿದ್ದಾರೆ. 

ಮುಖ್ಯಮಂತ್ರಿಯವರ ಫೇಸ್‍ಬುಕ್ ಪೋಸ್ಟ್‍ನ ಪೂರ್ಣ ಪಾಠ:

ನಮ್ಮ ಕೆಎಸ್‍ಆರ್‍ಟಿಸಿ ನವ ಕೇರಳವನ್ನು ನಿರ್ಮಿಸುವ ಹಾದಿಯಲ್ಲಿ ಮತ್ತೊಂದು ಅದ್ಭುತ ಮೈಲಿಗಲ್ಲು ದಾಟಿದೆ. ಕೆಎಸ್‍ಆರ್‍ಟಿಸಿ ಸಾಧಿಸಿದ ಸಾರ್ವಕಾಲಿಕ ದೈನಂದಿನ ದಾಖಲೆಯ ಆದಾಯವು ಕೇರಳದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕುಸಿಯುತ್ತಿದೆ ಎಂದು ಹರಡಿದವರಿಗೆ ಪ್ರಬಲ ಪ್ರತಿಕ್ರಿಯೆಯಾಗಿದೆ.

ಜನವರಿ 5, 2026 ರಂದು, ಕೆಎಸ್‍ಆರ್‍ಟಿಸಿ ಗಳಿಸಿದ ಆದಾಯವು ರೂ. 13.01 ಕೋಟಿ. ಇದರಲ್ಲಿ, ಟಿಕೆಟ್ ಆದಾಯವು ರೂ. 12.18 ಕೋಟಿಗಳ ಐತಿಹಾಸಿಕ ಸಾಧನೆಯನ್ನು ತಲುಪಿದೆ. ಸೆಪ್ಟೆಂಬರ್ 8, 2025 ರಂದು ಸಾಧಿಸಿದ ರೂ. 10.19 ಕೋಟಿಗಳ ದಾಖಲೆಯನ್ನು ಈಗ ಮೀರಿಸಲಾಗಿದೆ. ಇದರೊಂದಿಗೆ, ಟಿಕೆಟ್ ರಹಿತ ಆದಾಯವಾಗಿ ರೂ. 83.5 ಲಕ್ಷಗಳನ್ನು ಸಂಗ್ರಹಿಸಲಾಗಿದೆ.


ಈ ಯಶಸ್ಸಿನ ಹಿಂದೆ ಕೆಲವು ನಿರ್ದಿಷ್ಟ ಕಾರಣಗಳಿವೆ:

-ಸಾರ್ವಜನಿಕ ವಲಯದ ರಕ್ಷಣೆ: ದೇಶದಾದ್ಯಂತ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗಿ ವಲಯಕ್ಕೆ ಮಾರಾಟ ಮಾಡಲಾಗುತ್ತಿರುವಾಗ, ರಾಜ್ಯ ಸರ್ಕಾರವು ಅವುಗಳನ್ನು ಸಂಯೋಜಿಸುವ ಮತ್ತು ಅವುಗಳನ್ನು ಲಾಭದಾಯಕವಾಗಿಸುವ ಪರ್ಯಾಯ ನೀತಿಯನ್ನು ಎತ್ತಿಹಿಡಿಯುತ್ತಿದೆ.

-ವ್ಯವಸ್ಥಿತ ಕಾರ್ಯಾಚರಣೆ: ಕೆಎಸ್‍ಆರ್‍ಟಿಸಿಯ ಎಲ್ಲಾ 83 ಡಿಪೆÇೀಗಳು ಪ್ರಸ್ತುತ ಕಾರ್ಯಾಚರಣೆಯ ಲಾಭದಲ್ಲಿವೆ ಎಂಬುದು ಹೆಮ್ಮೆಯ ವಿಷಯ. ಡಿಪೆÇೀಗಳು ನಿಗದಿತ ಗುರಿಗಳನ್ನು ನಿಖರವಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು.

- ಆಧುನೀಕರಣ: ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಜಾರಿಗೆ ತಂದ ಸಕಾಲಿಕ ಸುಧಾರಣೆಗಳು, ಹೊಸ ಬಸ್‍ಗಳ ಆಗಮನ ಮತ್ತು ಆಫ್-ರೋಡ್ ಬಸ್‍ಗಳ ಸಂಖ್ಯೆಯಲ್ಲಿನ ಕಡಿತವು ಕೆಎಸ್‍ಆರ್‍ಟಿಸಿಯಲ್ಲಿ ಜನರ ನಂಬಿಕೆಯನ್ನು ಹೆಚ್ಚಿಸಿದೆ.

-ಸಂಘಟಿತ ಪ್ರಯತ್ನಗಳು: ಸರ್ಕಾರದ ಪ್ರಗತಿಪರ ವಿಚಾರಗಳು ಮತ್ತು ನೌಕರರು ಮತ್ತು ಅಧಿಕಾರಿಗಳ ದಣಿವರಿಯದ ಕೆಲಸವು ಈ ಸಾಧನೆಗೆ ಅಡಿಪಾಯ ಹಾಕಿದೆ.

ಸರ್ಕಾರ ಭ್ರಷ್ಟಾಚಾರ ಮುಕ್ತ ಮತ್ತು ಜನಪರ ಅಭಿವೃದ್ಧಿ ಮಾದರಿಯೊಂದಿಗೆ ಮುಂದುವರಿಯುತ್ತಿದೆ. ಕೆಎಸ್‍ಆರ್‍ಟಿಸಿಯನ್ನು ಸಂಪೂರ್ಣವಾಗಿ ಸ್ವಾವಲಂಬಿಯನ್ನಾಗಿ ಮಾಡುವ ಗುರಿಯನ್ನು ನಾವು ವೇಗವಾಗಿ ತಲುಪುತ್ತಿದ್ದೇವೆ. ಈ ಸಾಧನೆಗಾಗಿ ಶ್ರಮಿಸಿದ ಎಲ್ಲಾ ಉದ್ಯೋಗಿಗಳನ್ನು ನಾನು ಅಭಿನಂದಿಸುತ್ತೇನೆ. ಇದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪ್ರೀತಿಸುವ ಕೇರಳದ ಜನರ ಸಾಧನೆಯಾಗಿದೆ.

ಹೈಲೈಟ್ಸ್:

- ರಾತ್ರಿ 9 ಗಂಟೆಯ ನಂತರ ಕಾಸರಗೋಡು ನಗರದಿಂದ ವಿವಿಧ ಭಾಗಗಳಿಗೆ ಬಸ್‍ಗಳು ಇಲ್ಲ.

- ಶಾಲಾ ಸಮಯದಲ್ಲಿ ಬಸ್‍ಗಳು ಲಭಿಸದಿರುವುದು ವಿದ್ಯಾರ್ಥಿಗಳನ್ನು ತೊಂದರೆಗೊಳಪಡಿಸಿದೆ. 

- ಕೋವಿಡ್ ಅವಧಿಯಲ್ಲಿ ನಿಲ್ಲಿಸಲಾದ ಕಾಸರಗೋಡು-ಮಧೂರು-ನೀರ್ಚಾಲು ಹಾಗೂ ಧರ್ಮತ್ತಡ್ಕ,-ಗುಂಪೆ ಮತ್ತು ದೇಳಿ-ಪಾಲಕುನ್ನು ಸೇವೆಗಳು ಇನ್ನೂ ಪುನರಾರಂಭಗೊಂಡಿಲ್ಲ.

- ಆಧುನೀಕರಣ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಹಳೆಯ ಬಸ್‍ಗಳು ರಸ್ತೆಗಳಲ್ಲಿ ಸಂಚರಿಸುತ್ತಿವೆ.

- ರಾತ್ರಿ ಸೇವೆಗಳ ಕೊರತೆಯು ನಗರದ ವ್ಯಾಪಾರ ವಲಯದ ಮೇಲೂ ಪರಿಣಾಮ ಬೀರುತ್ತಿದೆ.

- ನವಕೇರಳವೆಂಬ ಪರಿಕಲ್ಪನೆ ಹೇಗೆಂದು ಅರ್ಥವಾಗದ ಜನರು ಕಳವಳದಲ್ಲಿ.

ಅಭಿಮತ:

- ಕೋವಿಡ್ ಬಳಿಕ ನಿಲುಗಡೆಗೊಳಿಸಲಾದ ಒಳನಾಡಿನ ಬಸ್ ಸೇವೆಯ ಪುನರಾರಂಭಕ್ಕೆ ಉನ್ನತಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಅನುಮತಿಸಲ್ಪಟ್ಟರೆ ಆರಂಭಿಸಲಾಗುವುದು. ಜೊತೆಗೆ ಕುಂಬಳೆ-ಸೀತಾಂಗೋಳಿ-ಬದಿಯಡ್ಕ-ಮುಳ್ಳೇರಿಯ ರೂಟಿಗೆ ಹೊಸತಾಗಿ ಅನುಮತಿ ಕೇಳಲಾಗುವುದು. ಜನರು ಸ್ಥಳೀ ಮಟ್ಟದಲ್ಲಿ ಬಸ್ ಸೇವೆ ಬಯಸಿದಲ್ಲಿ ಮನವಿ ನೀಡಿದರೆ ಪರಿಗಣಿಸಲಾಗುವುದು.ಪ್ರಸ್ತುತ ಕಾಸರಗೋಡಲ್ಲಿ ಬಸ್ ಲಭ್ಯತೆಯಲ್ಲಿ ಕೊರತೆ ಇದೆ. 

-ರಾಘವನ್.

ಕೆಎಸ್‍ಆರ್‍ಟಿಸಿ ಕಾಸರಗೋಡು ನಿಲ್ದಾಣ ಮೇಲ್ವಿಚಾರಕ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries